ಚಿತ್ರದುರ್ಗ: ಚಿತ್ರದುರ್ಗದಲ್ಲಿ 1.50 ಕೋಟಿ ರೂ. ದರೋಡೆ ಆಗಿದ್ದ ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಭೇದಿಸಿದ್ದು, 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ದಾವಣಗೆರೆಯ ಶಶಿಕಿರಣ್, ಮಂಜುನಾಥ್, ಪ್ರತಾಪ್ ಗೌಡ, ಕಿರಣ್, ಲಿಂಗರಾಜ್, ಬೆಂಗಳೂರಿನ ನವೀನ್, ಹುಸೇನ್, ಶ್ರೀನಿವಾಸ್, ಚಿತ್ರದುರ್ಗದ ಷಫಿವುಲ್ಲಾ, ಸಮೀರ್ ಬಾಷಾ ಬಂಧಿತರು.
ಬಂಧಿತರಿಂದ 63.25 ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ. ಹಾಗೂ ದರೋಡೆ ಮಾಡಿದ್ದ ಹಣದಲ್ಲಿ ಖರೀದಿಸಿದ್ದ 9 ಲಕ್ಷ ಮೌಲ್ಯದ ಕಾರು, 1.35 ಲಕ್ಷ ಮೌಲ್ಯದ ಬೈಕ್, ಕೃತ್ಯಕ್ಕೆ ಬಳಸಿದ್ದ ಕಾರು, 3 ಬೈಕ್ ನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ.
ಪ್ರಕರಣದ ವಿವರ
2023ರ ಡಿಸೆಂಬರ್ 3 ರಂದು ಚಿತ್ರದುರ್ಗ ತಾಲ್ಲೂಕು ಹೊಸಹಳ್ಳಿ ಗ್ರಾಮದ ಅಡಿಕೆ ವ್ಯಾಪಾರಿ ಮಹಮ್ಮದ್ ಇರ್ಫಾನುಲ್ಲಾ ತನ್ನ ಸ್ನೇಹಿತ ಜಾಕೀರ್ ಅವರೊಂದಿಗೆ ಹೈದರಾಬಾದ್‍ಗೆ ಹೋಗಿ ಅಡಿಕೆ ವ್ಯಾಪಾರ ಮಾಡಿ 1.50 ಕೋಟಿ ರೂ ಹಣ ಪಡೆದುಕೊಂಡು, ಹೈದರಾಬಾದ್‍ನಿಂ ದ ಡಿಸೆಂಬರ್ 4 ರಂದು ಚಿತ್ರದುರ್ಗಕ್ಕೆ ಹಿಂತಿರುಗಿದ್ದರು. ಆದರೆ ಈಚಲನಾಗೇನಹಳ್ಳಿ ಬಳಿ ಕಾರನ್ನು ರಸ್ತೆಗೆ ಅಡ್ಡ ನಿಲ್ಲಿಸಿದ 4 ಜನ ದರೋಡೆಕೋರರು ಮಹಮ್ಮದ್ ಇರ್ಪಾನುಲ್ಲಾ ಮತ್ತು ಆತನ ಸ್ನೇಹಿತನ ಮೇಲೆ ಹಲ್ಲೆ ಮಾಡಿ ಚಾಕು ತೋರಿಸಿ ಬೆದರಿಸಿ ಅವರ ಬಳಿಯಿದ್ದ ಎರಡು ಹಣದ ಬ್ಯಾಗ್ ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದೂರು ದಾಖಲಾಗಿತ್ತು.
ಈ ಪ್ರಕರಣದಲ್ಲಿ ಕಳುವಾದ ಹಣ ಮತ್ತು ಆರೋಪಿತರನ್ನು ಪತ್ತೆ ಮಾಡಲು ಪೊಲೀಸ್ ಅಧೀಕ್ಷಕರವರ ಮಾರ್ಗದರ್ಶನದಲ್ಲಿ ಚಿತ್ರದುರ್ಗ ಉಪವಿಭಾಗದ ಉಪಾಧೀಕ್ಷಕರಾದ ಅನಿಲ್ ಕುಮಾರ್, ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮುದ್ದರಾಜ.ವೈ ಹಾಗೂ ಸಿಬ್ಬಂದಿ ಪ್ರಕರಣದ ತನಿಖೆ ಕೈಗೊಂಡಿದ್ದು, 10 ಮಂದಿ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.