ಮೈಸೂರು: ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಜೂ.೧೮ರಂದು ಬೆಳಗ್ಗೆ ೧೦.೩೦ಕ್ಕೆ ರಂಗಾಯಣದ ಆವರಣದ ಶ್ರೀರಂಗ ವೇದಿಕೆಯಲ್ಲಿ ವಿಚಾರವಾದಿ, ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ರಾಮದಾಸ್ ನೆನಪಿನಲಿ ಸಂವಾದ, ಪುಸ್ತಕ ಬಿಡುಗಡೆ ಹಾಗೂ ಲೇಖನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಸಂಸ್ಥೆಯ ಕೃಷ್ಣ ಜನಮನ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಉದ್ಘಾಟಿಸುವರು, ಸಂವಾದ ಮತ್ತು ಮೇಷ್ಟ್ರ ನೆನಪು ಈ ಕಾರ್ಯಕ್ರಮದ ಅಂಗವಾಗಿ ಅಂತರ ಜಾತಿ ವಿವಾಹಗಳು ಸಾಮಾಜಿಕ ಬದಲಾವಣೆಯಲ್ಲಿ ಎಷ್ಟು ಪೂರಕ ಮತ್ತು ಪ್ರೇರಕ ಎಂಬ ವಿಚಾರ ಕುರಿತು ಸಂವಾದ ನಡೆಯಲಿದೆ. ಸಾರ್ವಜನಿಕರು ಸಂವಾದದಲ್ಲಿ ಮುಕ್ತವಾಗಿ ಭಾಗವಹಿಸಬಹುದು.
ಜತೆಗೆ ಪ್ರೇಮ ವಿವಾಹವಾಗಿ ಒಲವೇ ನಮ್ಮ ಬದುಕು ಎಂದು ಯಾವುದೇ ಜಾತಿ ಮತದ ಭಿನ್ನವಿಲ್ಲದೇ ತಮ್ಮ ಬದುಕನ್ನು ಸ್ವಚ್ಚಂದವಾಗಿ ಕಟ್ಟಿಕೊಂಡು ಬಾಳುತ್ತಿರುವ ಹಿರಿಯ ಜೋಡಿಗಳು ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಆ ಜೋಡಿಗಳು ಡಾ.ವಿ.ಲಕ್ಷ್ಮೀನಾರಾಯಣ ಮತ್ತು ಡಾ.ರತಿರಾವ್, ಮೈಮ್ ರಮೇಶ್, ಎಂ.ಬಿ. ಮಹದೇವಮೂರ್ತಿ ಮತ್ತು ಎಂ.ಜಿ. ರಾಮಚಂದ್ರ ಸಂವಾದದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದ ಅಂಗವಾಗಿ ಒಲವೇ ನಮ್ಮ ಬದುಕು ಎಂಬ ಪುಸ್ತಕ ನನ್ನ ಸಂಪಾದಕತ್ವದಲ್ಲಿ ಬಿಡುಗಡೆಗೊಳ್ಳಲಿದೆ. ಪುಸ್ತಕ ಬಿಡುಗಡೆಯನ್ನು ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಬಿಡುಗಡೆಗೊಳಿಸಿ ಮಾತನಾಡಲಿದ್ದಾರೆ. ಪುಸ್ತಕ ಕುರಿತು ಮಸ್ತಕವನ್ನು ಕುರಿತು ಚಿಂತಕರು, ಲೇಖಕ ಡಾ.ಎಚ್.ಎಸ್.ಅನುಪಮ ಮಾತನಾಡಲಿದ್ದಾರೆ. ಅಲ್ಲದೆ, ಅಂತರ ಜಾತಿ ವಿವಾಹಗಳು ಸಾಮಾಜಿಕ ಬದಲಾವಣೆಯಲ್ಲಿ ಎಷ್ಟು ಪೂರಕ ಮತ್ತು ಪ್ರೇರಕ ಎಂಬ ವಿಚಾರ ಕುರಿತು ಬಂದಿರುವ ವಿಚಾರ ಪೂರ್ಣ ಲೇಖನಗಳ ಸಂಕಲನ ಬಿಡುಗಡೆಯಾಗಲಿದೆ ಎಂದರು.
ಗೋಷ್ಠಿಯಲ್ಲಿ ನಾ.ದಿವಾಕರ್, ಪ್ರಕಾಶ್, ಸಂಸ್ಕೃತಿ ಸುಬ್ರಹ್ಮಣ್ಯ, ಡಾ.ದಿನಮಣಿ ಹಾಜರಿದ್ದರು.