ಮಂಡ್ಯ: ಜಿಲ್ಲೆಯಲ್ಲಿ ರೈತರು ಆರ್ಥಿಕವಾಗಿ ಸದೃಢರಾಗಲು ದುಡಿಯುವ ಬಂಡವಾಳದ ಅವಶ್ಯಕತೆ ಇದೆ. ೨೦೨೪-೨೫ ನೇ ಸಾಲಿನಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಹಾಗೂ ರಾಷ್ಟ್ರೀಯ ಬ್ಯಾಂಕ್ ನಿಂದ ನೀಡಲಾಗುವ ಬೆಳೆಸಾಲ ಮತ್ತು ಕೃಷಿ ಪೂರಕ ಚಟುವಟಿಕೆಗಳಾದ ಪಶುಸಂಗೋಪನೆ ಹಾಗೂ ಮೀನುಗಾರಿಕೆ ಉದ್ಯಮಕ್ಕೆ ಘಟಕವಾರು ಸಾಲದ ಪ್ರಮಾಣ ನಿಗಧಿಗೆ ಜಿಲ್ಲಾಧಿಕಾರಿ ಡಾ: ಕುಮಾರ ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.
ಸಭೆಯಲ್ಲಿ ವಿವಿಧ ಅಧಿಕಾರಿಗಳ ಮಾಹಿತಿ ಪಡೆದುಕೊಂಡ ನಂತರ ಮಾತನಾಡಿ ಜಿಲ್ಲೆಯಲ್ಲಿ ಭತ್ತ, ರಾಗಿ ಮತ್ತು ಕಬ್ಬು ಬೆಳೆಯುವ ರೈತರ ಸಂಖ್ಯೆ ಹೆಚ್ಚಿದ್ದು, ಇವುಗಳಿಗೆ ನೀಡಾಗುವ ಸಾಲದ ಪ್ರಮಾಣ ಹೆಚ್ಚಿಸಬೇಕು ಇದರಿಂದ ಜಿಲ್ಲೆಯ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
೨೦೨೩-೨೪ ನೇ ಸಾಲಿನಲ್ಲಿ ಪ್ರತಿ ಎಕರೆಗೆ ೧ ನೇ ಬೆಳೆ ಕಬ್ಬು ಬೆಳೆಗೆ ರೂ ೮೫,೦೦೦/-ಕೂಳೆ ಕಬ್ಬಿಗೆ ರೂ ೭೫,೦೦೦/- ನಿಗದಿಪಡಿಸಲಾಗಿತ್ತು. ೨೦೨೪-೨೫ ನೇ ಸಾಲಿನಲ್ಲಿ ಸಾಲದ ಪ್ರಮಾಣ ಹೆಚ್ಚಳ ಮಾಡಲಾಗಿದ್ದು ಪ್ರತಿ ಎಕರೆಗೆ ೧ ನೇ ಬೆಳೆ ಕಬ್ಬು ಬೆಳೆಗೆ ರೂ ೯೫,೦೦೦/-ಕೂಳೆ ಕಬ್ಬಿಗೆ ರೂ ೮೦,೦೦೦/- ಸಭೆಯಲ್ಲಿ ನಿಗದಿಪಡಿಸಲಾಯಿತು. ೨೦೨೩-೨೪ ನೇ ಸಾಲಿನಲ್ಲಿ ಪ್ರತಿ ಎಕರೆಗೆ ಮಳೆ ಆಶ್ರಿತ ಭತ್ತಕ್ಕೆ ೪೦,೦೦೦/-, ನೀರಾವರಿ ಭತ್ತಕ್ಕೆ ರೂ ೫೨,೦೦೦/- ನಿಗದಿಪಡಿಸಲಾಗಿತ್ತು. ೨೦೨೪-೨೫ ನೇ ಸಾಲಿನಲ್ಲಿ ಸಾಲದ ಪ್ರಮಾಣ ಹೆಚ್ಚಳ ಮಾಡಲಾಗಿದ್ದು ಪ್ರತಿ ಎಕರೆಗೆ ಮಳೆ ಆಶ್ರಿತ ಭತ್ತಕ್ಕೆ ೪೫,೦೦೦/-, ನೀರಾವರಿ ಭತ್ತಕ್ಕೆ ರೂ ೫೫,೦೦೦/- ಸಭೆಯಲ್ಲಿ ನಿಗದಿಪಡಿಸಲಾಯಿತು.
೨೦೨೩-೨೪ ನೇ ಸಾಲಿನಲ್ಲಿ ಪ್ರತಿ ಎಕರೆಗೆ ಮಳೆ ಆಶ್ರಿತ ರಾಗಿಗೆ ೩೨,೦೦೦/-, ನೀರಾವರಿ ರಾಗಿಗೆ ರೂ ೩೭,೦೦೦/- ನಿಗದಿಪಡಿಸಲಾಗಿತ್ತು. ೨೦೨೪-೨೫ ನೇ ಸಾಲಿನಲ್ಲಿ ಸಾಲದ ಪ್ರಮಾಣ ಹೆಚ್ಚಳ ಮಾಡಲಾಗಿದ್ದು ಪ್ರತಿ ಎಕರೆಗೆ ಮಳೆ ಆಶ್ರಿತ ರಾಗಿಗೆ ೩೫,೦೦೦/-, ನೀರಾವರಿ ರಾಗಿಗೆ ರೂ ೪೦,೦೦೦/- ಸಭೆಯಲ್ಲಿ ನಿಗಧಿಪಡಿಸಲಾಯಿತು. ಇನ್ನುಳಿದ ಬೆಳೆಗಳಿಗೆ ಕಳೆದ ಸಾಲಿಗಿಂತ ನೀಡಲಾಗುವ ಸಾಲದ ಪ್ರಮಾಣವನ್ನು ೫% ಹೆಚ್ಚುವರಿ ಮಾಡಬೇಕು. ನಿಗಧಿಪಡಿಸಿರುವ ಸಾಲದ ಪ್ರಾಮಾಣವು ಮೊತ್ತವಾಗಿರುತ್ತದೆ.
ರೈತರು ಸಾಲದ ಬಂಡವಾಳವನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ನೀಡಲಾಗುವ ಉದ್ದೇಶಕ್ಕೆ ಸಾಲವನ್ನು ಉಪಯೋಗಿಸಿಕೊಂಡು ಸಾಲವನ್ನು ಮರುಪಾವತಿ ಮಾಡಿ ಎಂದರು. ಸಭೆಯಲ್ಲಿ ಡಿ.ಸಿ.ಸಿ ಬ್ಯಾಂಕಿನ ಕಾರ್ಯನಿರ್ವಾಹಕ ಅಧಿಕಾರಿ ವನಜಾಕ್ಷಿ, ಜನರಲ್ ಮ್ಯಾನೇಜರ್ ರೂಪಶ್ರೀ ನಬಾರ್ಡ್ ಜಿಲ್ಲಾ ವ್ಯವಸ್ಥಾಪಕಿ ಹರ್ಷಿತಾ, ಲೀಡ್ ಬ್ಯಾಂಕ್ ಮ್ಯಾನೇಜರ್ ಅರುಣ್ ಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್, ಜಿಲ್ಲಾ ಪಶು ವೈದ್ಯಾಧಿಕಾರಿ ಡಾ: ಸುರೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.