ನವದೆಹಲಿ: ಯಾವುದೇ ಆಸ್ಪತ್ರೆಗಳು ಗಂಭೀರ ಅನಾರೋಗ್ಯಕ್ಕೆ ತುತ್ತಾಗಿರುವ ರೋಗಿಯನ್ನು ರೋಗಿಗಳ ಸಂಬಂಧಿಕರು ವಿರೋಧಿಸಿದರೆ ತಮ್ಮ ಆಸ್ಪತ್ರೆಗಳ ತೀವ್ರ ನಿಗಾ ಘಟಕ(ಐಸಿಯು)ದಲ್ಲಿ ಇರಿಸಿಕೊಳ್ಳುವಂತಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದೆ. ಐಸಿಯು ದಾಖಲಾತಿ ಕುರಿತು ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಮಾರ್ಗಸೂಚಿಯಲ್ಲಿ, ‘ರೋಗಿಗೆ ಹೆಚ್ಚಿನ ಚಿಕಿತ್ಸೆ ಪ್ರಯೋಜನವಿಲ್ಲದಿದ್ದಲ್ಲಿ ಅಥವಾ ಯಾವುದೇ ಚಿಕಿತ್ಸೆಯಿಂದ ರೋಗಿಯ ಆರೋಗ್ಯದಲ್ಲಿ ಯಾವುದೇ ಚೇತರಿಕೆತರಲು ಸಾಧ್ಯವಿಲ್ಲದ ಸಂದರ್ಭದಲ್ಲಿ ರೋಗಿಯನ್ನು ಐಸಿಯುನಲ್ಲಿಡುವುದು ನಿರರ್ಥಕ ಆಯ್ಕೆ’ ಎಂದು ಹೇಳಲಾಗಿದ್ದು, ೨೪ ತಜ್ಞರ ಅಭಿಪ್ರಾಯ ಆಧರಿಸಿ ಈ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಹೃದಯ ಸಂಬಂಧಿ ಸಮಸ್ಯೆ ಅಥವಾ ಉಸಿರಾಟ ಸಮಸ್ಯೆ ಅಥವಾ ಯಾವುದಾದರೂ ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ಅಂಥಹವರು ಐಸಿಯುನಲ್ಲಿ ಚಿಕಿತ್ಸೆ ಪಡೆಯಬಹುದು. ಆದರೆ ರೋಗಿಯ ಸಂಬಂಧಿಕರು ಐಸಿಯು ಚಿಕಿತ್ಸೆ ಬೇಡವೆಂದರೆ ಅಂಥಹ ರೋಗಿಗಳನ್ನು ದಾಖಲಿಸುವಂತಿಲ್ಲ. ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಇದ್ದರೆ ಐಸಿಯು ಆರೈಕೆ ವಿರುದ್ಧದ ಸುಧಾರಿತ ನಿರ್ದೇಶನಗಳ ಪಾಲನೆಯಲ್ಲಿ ಸೂಚಿಸಿದರೆ ಐಸಿಯುನಲ್ಲಿ ದಾಖಲಿಸುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ರೋಗಿಯ ಪರೀಕ್ಷೆ ಅಗತ್ಯ: ಯಾವುದೇ ರೋಗಿಯು ಐಸಿಯು ಹಾಸಿಗೆಯ ನಿರೀಕ್ಷೆಯಲ್ಲಿದ್ದರೆ, ಅಂಥವರ ರಕ್ತದೊತ್ತಡ,
ನಾಡಿ ಮಿಡಿತ, ಉಸಿರಾಟ ಕ್ರಿಯೆ ಹಾಗೂ ಪ್ರಕ್ರಿಯೆ, ಹೃದಯದ ಆರೋಗ್ಯ, ಆಮ್ಲ ಜನಕ ಹೀರಿಕೊಳ್ಳುವ ಸಾಮರ್ಥ್ಯ, ಮೂತ್ರ ವಿಸರ್ಜನೆಯ ಪ್ರಮಾಣ ಮತ್ತು ನರವ್ಯೂಹದ ಸ್ಥಿತಿಗತಿಯಂತಹ ಅಂಶಗಳನ್ನು ಪರೀಕ್ಷಿಸಿಯೇ ರೋಗಿಯನ್ನು ದಾಖಲಿಸಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಸಾಂಕ್ರಮಿಕ ರೋಗಿಗಳನ್ನು ದಾಖಲಿಸಿ: ಕೋವಿಡ್‌ನಂತಹ ಸಾಂಕಾಮಿಕ ರೋಗ ಅಥವಾ ವಿಪ್ಪತ್ತು ಸಂದರ್ಭದಲ್ಲಿ ಸಂಪನ್ಮೂಲದ ಮಿತಿ ಇದ್ದಲ್ಲಿ ಅಂಥ ಸಂದರ್ಭದಲ್ಲಿ ರೋಗಿಯನ್ನು ಐಸಿಯುನಲ್ಲಿ ಇಡಬಹುದು, ಅಂಗಾಂಗ ವೈಫಲ್ಯ ಹಾಗೂ ಅಂಗಾಂಗ ಕಸಿ ಅಥವಾ ವೈದ್ಯಕೀಯ ಸ್ಥಿತಿ ಕ್ಷೀಣಿಸುವ ನಿರೀಕ್ಷೆ ಇದ್ದಲ್ಲಿ ಅಂಥವರನ್ನು ಐಸಿಯುನಲ್ಲಿ ಇಡಬಹುದು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.