ಯಳಂದೂರು: ತಾಲೂಕಿನ ಅಂಬಳೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಅಂಬಳೆ ಎಂ. ಶಿವಾನಂದಸ್ವಾಮಿ ಅವಿರೋಧವಾಗಿ ಆಯ್ಕೆಯಾದರು. ಬುಧವಾರ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗಧಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಅಂಬಳೆ ಎಂ.ಶಿವಾನಂದಸ್ವಾಮಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳಮ್ಮ ಹಾಗೂ ಬಿ. ಮಹದೇವಸ್ವಾಮಿ ನಾಮಪತ್ರ ಸಲ್ಲಿಸಿದ್ದರು. ಆದರೆ ಕೊನೆಯಲ್ಲಿ ಬಿ. ಮಹದೇವಸ್ವಾಮಿ ನಾಮಪತ್ರವನ್ನು ಹಿಂಪಡೆದ ಹಿನ್ನೆಲೆಯಲ್ಲಿ ಮಂಗಳಮ್ಮ ಮಾತ್ರ ಕಣದಲ್ಲಿದ್ದರಿಂದ ಚುನಾವಣಾಧಿಕಾರಿ ಜಿಯಾವುಲ್ಲಾ ಇವರಿಬ್ಬರೂ ಅವಿರೋಧ ಆಯ್ಕೆಯಾಗಿರುವುದಾಗಿ ಘೋಷಿಸಿದರು.
ನೂತನ ಅಧ್ಯಕ್ಷ ಅಂಬಳೆ ಎಂ.ಶಿವಾನಂದಸ್ವಾಮಿ ಮಾತನಾಡಿ, ವ್ಯವಸಾಯಕ್ಕಿಂತ ಹೈನುಗಾರಿಕೆಯಲ್ಲಿ ಹೆಚ್ಚಿನ ಆದಾಯವಿದೆ. ಈ ಬಗ್ಗೆ ರೈತರು ಈಗ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಗುಣಮಟ್ಟದ ಹಾಲನ್ನು ಡೈರಿಗೆ ನೀಡಿದ್ದಲ್ಲಿ ರೈತರಿಗೆ ಇನ್ನಷ್ಟು ಹೆಚ್ಚು ಲಾಭವಾಗಲಿದೆ. ಡೈರಿಗೆ ಬರುವ ಆದಾಯ ಹೈನುಗಾರಿಕೆ ನೇರವಾಗಿ ತಲುಪುವುದರಿಂದ ಈ ಬಗ್ಗೆ ಈಗ ಆಯ್ಕೆಗೊಂಡಿರುವ ನಿರ್ದೇಶಕರು ಜಾಗೃತಿ ಮೂಡಿಸಬೇಕು. ನಮ್ಮಲ್ಲಿ ಒಗ್ಗಟ್ಟು ಹೆಚ್ಚಿದ್ದಲ್ಲಿ ಸಂಘವನ್ನು ಲಾಭದತ್ತ ಕೊಂಡೊಯ್ಯಬಹುದು. ನಾನು ಎಲ್ಲರೊಂದಿಗೂ ಸೌಹಾರ್ದಯುತವಾಗಿ ಇರಲು ಇಚ್ಚಿಸುವ ವ್ಯಕ್ತಿಯಾಗಿದ್ದು ನಮ್ಮಲ್ಲಿನ ಸಮಸ್ಯೆಗಳನ್ನು ಇಲ್ಲೇ ಬಗೆಹರಿಸಿಕೊಂಡು ಇದನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುವ ಯೋಜನೆ ಇದ್ದು ಇದಕ್ಕೆ ಎಲ್ಲರೂ ಸಹಕರಿಸಬೇಕು. ಅಂಬಳೆ ವ್ಯಾಪ್ತಿಯಲ್ಲಿ ಎಮ್ಮೆಗಳು ಕಡಿಮೆ ಇದೆ. ಈಗ ಕೆಎಂಎಫ್ ಎಮ್ಮೆ ಹಾಲನ್ನು ಪರಿಚಯಿಸಿದೆ. ಇದಕ್ಕೆ ಹಸುವಿನ ಹಾಲಿಗಿಂತಲೂ ಹೆಚ್ಚು ಬೇಡಿಕೆ ಇದೆ. ಈ ಹಾಲನ್ನು ಉತ್ಪಾದಿಸಲು ಹೈನುಗಾರರಲ್ಲಿ ಜಾಗೃತಿ ಮೂಡಿಸಲು ಯತ್ನಿಸಲಾಗುವುದು. ಮುರ್ರಾ, ಸುರ್ತಿ ಸೇರಿದಂತೆ ವಿವಿಧ ತಳಿಗಳ ಎಮ್ಮೆಗಳನ್ನು ಸಾಕುವಂತೆ ಪ್ರೇರೇಪಿಸಲು ಜಾಗೃತಿ ಮೂಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಮಂಗಳಮ್ಮ, ನಿರ್ದೇಶಕರಾದ ಬಿ. ರಾಚಯ್ಯ, ರಂಗನಾಯಕ, ನಾಗರಾಜು, ಮಹದೇವಸ್ವಾಮಿ, ಬಸವಣ್ಣ, ಶಿವಸ್ವಾಮಿ, ಮಲ್ಲಪ್ಪ, ರಾಜಮ್ಮ, ಸುಬ್ಬಣ್ಣ, ನಿಂಗಣ್ಣ ಕಾರ್ಯದರ್ಶಿ ಪುಟ್ಟಬುದ್ದಿ ಹಾಲು ಪರೀಕ್ಷಕ ಎಂ. ಚೇತನ್ ಸೇರಿದಂತೆ ಅನೇಕರು ಇದ್ದರು.