Sunday, April 20, 2025
Google search engine

Homeರಾಜ್ಯರಾಮಲಲ್ಲಾ ಮೂರ್ತಿ ಆಯ್ಕೆ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಆಗಿಲ್ಲ: ಪೇಜಾವರ ಶ್ರೀ

ರಾಮಲಲ್ಲಾ ಮೂರ್ತಿ ಆಯ್ಕೆ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಆಗಿಲ್ಲ: ಪೇಜಾವರ ಶ್ರೀ

ಉಡುಪಿ: ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾಗುವ ರಾಮಲಲ್ಲಾನ ಮೂರ್ತಿಯ ಆಯ್ಕೆ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಆಗಿಲ್ಲ. ವಿಗ್ರಹ ಆಯ್ಕೆ ಬಗ್ಗೆ ಜನವರಿ 17ರಂದು ಅಧಿಕೃತವಾಗಿ ಘೋಷಣೆ ಮಾಡಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿಯೂ ಆಗಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಉಡುಪಿಯಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎರಡು ಕಪ್ಪು ಕಲ್ಲುಗಳು ಮತ್ತು ಒಂದು ಗ್ರಾನೈಟ್ ಕಲ್ಲಿನ ರಾಮಲಲ್ಲಾ ವಿಗ್ರಹವನ್ನು ಸುಂದರವಾಗಿ ಕೆತ್ತಲಾಗಿದೆ. ವಿಗ್ರಹ ಆಯ್ಕೆಗೆ ಟ್ರಸ್ಟ್‌ ನ ಎಲ್ಲಾ ಸದಸ್ಯರು ಮತ ಚಲಾಯಿಸಿದ್ದಾರೆ. ಸರಯೂ ನದಿಯ ನೀರಿನಿಂದ ವಿಗ್ರಹಕ್ಕೆ ಅಭಿಷೇಕ ನಡೆಸುವ ದಿನದಂದು ವಿಗ್ರಹವನ್ನು ಅಂತಿಮಗೊಳಿಸಿದ ಬಗ್ಗೆ ಘೋಷಣೆ ಮಾಡಲಾಗುವುದು ಎಂದು ಸ್ವಾಮೀಜಿ ಹೇಳಿದ್ದಾರೆ.

ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ನಿರ್ಮಿಸಿದ ವಿಗ್ರಹ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೆ ಆಯ್ಕೆಯಾಗಿದೆ ಎಂಬ ವಿಚಾರ ಬಹಿರಂಗವಾದ ಮಧ್ಯೆಯೇ ಸ್ವಾಮೀಜಿ ಅಧಿಕೃತ ಘೋಷಣೆ ಇನ್ನೂ ಅಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ದೇವಾಲಯದ ಉದ್ಘಾಟನೆಗೆ ಆಹ್ವಾನಿತರನ್ನು ಪ್ರಾತಿನಿಧ್ಯದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ದೇವಸ್ಥಾನದಲ್ಲಿ ಸ್ಥಳಾವಕಾಶ ಕಡಿಮೆ ಇರುವುದರಿಂದ ಎಲ್ಲರನ್ನೂ ಆಹ್ವಾನಿಸಲು ಸಾಧ್ಯವಾಗುತ್ತಿಲ್ಲ. ಮೂರ್ತಿ ಪ್ರತಿಷ್ಠಾಪನೆ ನಂತರ ಎಲ್ಲ ಭಕ್ತರು ದರ್ಶನ ಪಡೆಯಬಹುದು ಎಂದು ಅವರು ಹೇಳಿದ್ದಾರೆ.

ಬಿಜೆಪಿ ಸರ್ಕಾರದಿಂದ ದೇಣಿಗೆ ಪಡೆದು ದೇವಾಲಯ ನಿರ್ಮಿಸಿಲ್ಲ. ಭಕ್ತರಿಂದ ದೇಣಿಗೆ ಸಂಗ್ರಹಿಸಿ ಇದನ್ನು ನಿರ್ಮಿಸಲಾಗಿದೆ ಎಂದು ಎಂದು ಶ್ರೀಗಳು ಸ್ಪಷ್ಟಪಡಿಸಿದ್ದಾರೆ. ಇದು ಬಿಜೆಪಿಯ ರಾಮಮಂದಿರವಲ್ಲ, ದೇವರು ಬರೀ ದೇವಸ್ಥಾನಕ್ಕೆ ಸೀಮಿತವಾಗಿಲ್ಲ. ಎಲ್ಲರಲ್ಲಿಯೂ ನೆಲೆಸಿದ್ದಾನೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲೂ ದೇವರು ಇದ್ದಾನೆ ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular