ಬೆಂಗಳೂರು: ನೈಸ್ ಯೋಜನೆಯಿಂದ ತುಂಬಾ ದಿನಗಳಿಂದ ಬಡವರಿಗೆ ಅನ್ಯಾಯವಾಗಿದೆ. ಅದನ್ನು ಸರಿಪಡಿಸಿ ಬಡವರ ಜಮೀನು ಉಳಿಸಿಕೊಟ್ಟರೆ ಸಿಎಂ ಸಿದ್ದರಾಮಯ್ಯ ಅವರಿಗೆ ಆಭಾರಿಯಾಗಿರುತ್ತೇನೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡ ಹೇಳಿದರು.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೈಸ್ ಅಕ್ರಮದ ವಿರುದ್ದ ನಮ್ಮ ಪಕ್ಷ ಧ್ವನಿ ಎತ್ತಿದೆ. ವಿಧಾನಸಭೆಯಲ್ಲೂ ಸುದೀರ್ಘವಾಗಿ ಚರ್ಚೆಯಾಗಿದೆ ಎಂದರು.
ಜಯಚಂದ್ರ ಅವರ ಅದ್ಯಕ್ಷತೆಯಲ್ಲಿ ಒಂದು ಕಮಿಟಿ ನೇಮಕ ಮಾಡಿ, ಪ್ರಾಜೆಕ್ಟ್ ಅನ್ನು ಸರ್ಕಾರ ತೆಗೆದುಕೊಳ್ಳಬೇಕು. ಅಕ್ರಮಗಳನ್ನು ಸರಿಪಡಿಸಬೇಕು. ಸರ್ಕಾರ ಈವರೆಗೆ ಯಾವುದೇ ಅಂತಿಮ ನಿರ್ಣಯ ತೆಗೆದುಕೊಂಡಿಲ್ಲ, ವಿಳಂಬವಾಗಿದೆ ಎಂದು ದೇವೇಗೌಡ ಹೇಳಿದರು.
ನೈಸ್ ರಸ್ತೆಗೆ ಒಳಪಡದೆ ಇರುವ ಭೂಮಿ ಎಷ್ಟಿದೆ ಅಂತಾ ಅಂದಾಜು ಮಾಡಿದಾಗ ವ್ಯಾಲ್ಯೂ ಜಾಸ್ತಿಯಾಗುತ್ತದೆ. ಸಿಎಂ ಸಿದ್ದರಾಮಯ್ಯ ಯಾವಾಗಲೂ ಬಡವರ ಪರ ಎಂದು ಹೇಳುತ್ತಾರೆ. ಯೋಜನೆ ಬಗ್ಗೆ ಬಿಎಸ್ ಯಡಿಯೂರಪ್ಪ ಅವರ ಆಡಳಿತ ಅವಧಿಯಲ್ಲಿ ಅಫಿಡವಿಟ್ ಹಾಕಿದ್ದಾರೆ. ಅದರಲ್ಲಿ, ಹೆಚ್ಚುವರಿ ಜಮೀನು ತೆಗೆದುಕೊಂಡಿದ್ದಾರೆ, ಅವರಿಗೆ ಹೆಚ್ಚು ಜಮೀನು ಕೊಡಲು ಸಾದ್ಯವಿಲ್ಲ ಎಂದು ಉಲ್ಲೇಖಿಸಲಾಗಿದೆ. ಬಡವರನ್ನ, ಅವರ ಜಮೀನನ್ನ ಸಿದ್ದರಾಮಯ್ಯ ಉಳಿಸಿಕೊಟ್ರೆ ಅವರಿಗೆ ಅಭಾರಿಯಾಗಿರುತ್ತೇನೆ ಎಂದು ಅವರು ಹೇಳಿದರು.