ಗುಂಡ್ಲುಪೇಟೆ: ಕಸಾಯಿ ಖಾನೆಗೆ ೫ ಜಾನುವಾರುಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ವೇಳೆ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ವಾಹನ ಸಮೇತ ಜಾನುವಾರು ಹಾಗು ಓರ್ವ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಬೇಗೂರಿನ ಸಂತೇಮಾಳದ ಬಳಿ ನಡೆದಿದೆ.
ಮೈಸೂರು ಮೂಲದ ಮಹಮ್ಮದ್ ರಫೀಕ್(೫೨) ಬಂಧಿತ ಆರೋಪಿಯಾಗಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ. ಈ ಇಬ್ಬರು ಮೈಸೂರಿನಿಂದ ಮಿನಿ ಗೂಡ್ಸ್ ಟೆಂಪೊ?ದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಬೇಗೂರಿನ ಸಂತೇಮಾಳದ ಬಳಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ವಾಹನ ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಟೆಂಪೋದಲ್ಲಿ ಇಕ್ವಟ್ಟಿನಿಂದ ಐದು ಜಾನುವಾರುಗಳನ್ನು ತುಂಬಿರುವುದು ಕಂಡುಬಂದಿದೆ. ತಕ್ಷಣ ವಾಹನದಲ್ಲಿ ವ್ಯಕ್ತಿ ಹಾಗೂ ಟೆಂಪೊ ಹಿಡಿದು ಬೇಗೂರು ಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ. ಈ ಸಂದರ್ಭ ವಾಹನ ಚಾಲಕ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.
ಮಾಹಿತಿ ಅರಿತು ಘಟನಾ ಸ್ಥಳಕ್ಕೆ ದೌಡಾಯಿಸಿದ ಬೇಗೂರು ಪೊಲೀಸರು ಐದು ಜಾನುವಾರು ಹಾಗೂ ಟೆಂಪೊ ವಶಕ್ಕೆ ಪಡೆದ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಪ್ರಕರಣದ ಸಂಬಂಧ ವಿಚಾರಣೆ ಆರಂಭಿಸಿದ್ದಾರೆ.
ಎಗ್ಗಿಲ್ಲದೆ ಜಾನುವಾರು ಸಾಗಣೆ: ಬೇಗೂರು ಹಾಗೂ ತೆರಕಣಾಂಬಿಯಲ್ಲಿ ಪ್ರತಿ ವಾರವು ಜಾನುವಾರು ಸಂತೆ ನಡೆಯುತ್ತಿದ್ದು, ಕೆಲ ದಲ್ಲಾಳಿ ಹಾಗೂ ಕೇರಳಿಗರು ಆಗಮಿಸಿ ಕಡಿಮೆ ಬೆಲೆಗೆ ಜಾನುವಾರುಗಳನ್ನು ಖರೀದಿಸುತ್ತಿದ್ದಾರೆ. ನಂತರ ಸ್ಥಳೀಯ ರೈತರ ಸೋಗಿನಲ್ಲಿ ಜಾನುವಾರುಗಳನ್ನು ಜಮೀನಿನ ಮಾರ್ಗವಾಗಿ ಹೊಡೆದುಕೊಂಡು ಹೋಗಿ ತಮಿಳುನಾಡು ಹಾಗೂ ಕೇರಳ ಗಡಿ ತಲುಪುತ್ತಾರೆ. ನಂತರ ಅಲ್ಲಿಂದ ವಾಹನದಲ್ಲಿ ಗಡಿ ದಾಟುತ್ತದೆ. ಇಂತಹ ಕೃತ್ಯಗಳು ಪೊಲೀಸರ ಸೋಗಿನಲ್ಲಿಯೇ ನಡೆಯುತ್ತಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಕ್ತ ಕ್ರಮ ವಹಿಸಿ ಅಕ್ರಮ ಜಾನುವಾರು ಸಾಗಣೆಗೆ ಕಡಿವಾಣ ಹಾಕಬೇಕೆಂದು ಹಿಂದೂ ಜಾಗರಣಾ ವೇದಿಕೆಯ ನಂದೀಶ್, ನಂಜುಂಡ, ಅಣ್ಣಯ್ತ ಒತ್ತಾಯಿಸಿದ್ದಾರೆ.