ಗುಂಡ್ಲುಪೇಟೆ: ತರಕಾರಿ ತುಂಬಿಕೊಂಡು ತೆರಳುತ್ತಿದ್ದ ಪಿಕ್ ಅಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ರಸ್ತೆ ತುಂಬಾ ತರಕಾರಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಘಟನೆ ತಾಲೂಕಿನ ಕೇರಳ ರಸ್ತೆಯ ಮಲ್ಲಯ್ಯನಪುರ ಗೇಟ್ ಸಮೀಪದಲ್ಲಿ ನಡೆದಿದೆ.
ಗುಂಡ್ಲುಪೇಟೆ ಎಪಿಎಂಸಿ ಮಾರುಕಟ್ಟೆಯಿಂದ ಕೇರಳಕ್ಕೆ ತರಕಾರಿ ತುಂಬಿಕೊಂಡು ತೆರಲುತ್ತಿದ್ದ ಪಿಕ್ ಅಪ್ ವಾಹನ ಹೆದ್ದಾರಿ ರಸ್ತೆ ತಿರುವಿನಲ್ಲಿ ಚಾಲಕ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಘಟನೆಯಲ್ಲಿ ಸಧ್ಯ ವಾಹನ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ತರಕಾರಿ ಸಂಪೂರ್ಣವಾಗಿ ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿತು. ಕೂಡಲೇ ಸ್ಥಳೀಯ ಸ್ಥಳಕ್ಕೆ ದೌಡಾಯಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಆಗಮಿಸಿದ ಗುಂಡ್ಲುಪೇಟೆ ಠಾಣೆ ಪೊಲೀಸರು ರಸ್ತೆಯಲ್ಲಿ ಪಲ್ಟಿಯಾಗಿ ಬಿದ್ದಿದ್ದ ವಾಹನವನ್ನು ಹಾಗೂ ತರಕಾರಿಯನ್ನು ತೆರವು ಗೊಳಿಸಿದ್ದಾರೆ. ಘಟನೆಯಿಂದ ಕೆಲಕಾಲ ಇತರೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಹಂಪ್ ನಿರ್ಮಾಣಕ್ಕೆ ಒತ್ತಾಯ: ಗುಂಡ್ಲುಪೇಟೆ-ಕೇರಳ ಹೆದ್ದಾರಿ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತಿದೆ. ರಸ್ತೆಯಲ್ಲಿ ಹಂಪ್ ಇಲ್ಲದ ಕಾರಣ ಬೈಕ್ ಹಾಗೂ ಕಾರುಗಳು ಅತೀವೇಗದಿಂದ ತೆರಳುತ್ತಿದೆ. ಸಂಜೆ ೭ ಗಂಟೆಯ ನಂತರ ವಾಹನಗಳ ವೇಗ ಮತ್ತಷ್ಟು ಹೆಚ್ಚಾಗುತ್ತಿದೆ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಜೊತೆಗೆ ಶಾಲಾ-ಕಾಲೇಜು ಸಮಯ ವಿದ್ಯಾರ್ಥಿಗಳು ರಸ್ತೆ ದಾಟುವುದೇ ದುಸ್ತರವಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಗ್ರಾಮದ ಪರಿಮಿತಿ ರಸ್ತೆಗಳಲ್ಲಿ ಹಂಪ್ ನಿರ್ಮಾಣ ಮಾಡಿ ಮುಂದೆ ಸಂಭವಿಸುವ ಅನಾಹುತಗಳನ್ನು ತಪ್ಪಿಸಬೇಕೆಂದು ಮಲ್ಲಯ್ಯನಪುರ ಹಾಗೂ ಕೂತನೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.