Sunday, April 20, 2025
Google search engine

Homeರಾಜ್ಯಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏಪ್ರಿಲ್ ವೇಳೆಗೆ "ಕಲಾಲೋಕ" ಮಾರಾಟ ಮಳಿಗೆ: ಸಚಿವ ಎಂಬಿ ಪಾಟೀಲ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏಪ್ರಿಲ್ ವೇಳೆಗೆ “ಕಲಾಲೋಕ” ಮಾರಾಟ ಮಳಿಗೆ: ಸಚಿವ ಎಂಬಿ ಪಾಟೀಲ

ಬೆಂಗಳೂರು: ಕನ್ನಡ ನಾಡಿನ ಅಸ್ಮಿತೆಗೆ ಹೆಸರಾದ ಸರ್ಕಾರಿ ಉದ್ದಿಮೆಗಳ ಉತ್ಪನ್ನಗಳ ಎರಡು ಮಾರಾಟ ಮಳಿಗೆಗಳು “ಕಲಾಲೋಕ” ಹೆಸರಿನಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏಪ್ರಿಲ್ ವೇಳೆಗೆ ಆರಂಭವಾಗಲಿವೆ.

ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಅವರು ವಿಮಾನ ನಿಲ್ದಾಣದ ಅಧಿಕಾರಿಗಳ (ಬಿಐಎಎಲ್) ಉಪಸ್ಥಿತಿಯಲ್ಲಿ ಶನಿವಾರ ನಡೆಸಿದ ಸಭೆಯಲ್ಲಿ ಈ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆ ಎಸ್ ಡಿ ಎಲ್), ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಕೆಎಸ್ಐಸಿ (ಕರ್ನಾಟಕ ರೇಷ್ಮೆ ಉದ್ಯಮ ನಿಗಮ), ಕಾಫಿ ಬೋರ್ಡ್ ಮತ್ತು ಲಿಡ್ಕರ್ ಸಂಸ್ಥೆಗಳು ತಯಾರಿಸುವ ಉತ್ಪನ್ನಗಳನ್ನು ಈ ಮಳಿಗೆಗಳಲ್ಲಿ ಮಾರಾಟ ಮಾಡಲಾಗುವುದು. ಇವುಗಳೊಟ್ಟಿಗೆ ನಾಡಿನಲ್ಲಿ ತಯಾರಾಗುವ ಪಾರಂಪರಿಕ ಆಟಿಕೆಗಳಾದ ಚನ್ನಪಟ್ಟಣ ಆಟಿಕೆ, ಇಳಕಲ್ ಸೀರೆ, ಲಂಬಾಣಿ ಕುಸೂತಿ ಇತ್ಯಾದಿ ಉತ್ಪನ್ನಗಳನ್ನು ಕೂಡ ಮಳಿಗೆಗಳಲ್ಲಿ ಮಾರಾಟಕ್ಕೆ ಲಭ್ಯವಾಗಿಸಲಾಗುತ್ತದೆ ಎಂದು ಸಚಿವರು ವಿವರಿಸಿದರು.

ಇದಕ್ಕಾಗಿ, ಹೊಸದಾಗಿ ನಿರ್ಮಿಸಿರುವ ಟರ್ಮಿನಲ್-2ರ ದೇಶೀಯ ಮತ್ತು ಅಂತರರಾಷ್ಟ್ರೀಯ ನಿರ್ಗಮನ ವಲಯದಲ್ಲಿ ತಲಾ 180 ಚದುರ ಮೀಟರ್ ಗಳ ಜಾಗ ಗುರುತಿಸಲಾಗಿದೆ. ಅಲ್ಲಿ ವಿಭಿನ್ನ‌ ಶೈಲಿಯಲ್ಲಿ ವಿನ್ಯಾಸಗೊಳಿಸಿದ ಆಕರ್ಷಕ ಮಳಿಗೆಗಳಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು ಎಂದರು.

ನಮ್ಮ ನಾಡಿನ ಅಸ್ಮಿತೆ ಬಿಂಬಿಸುವ ಈ ಸಂಸ್ಥೆಗಳ ಉತ್ಪನ್ನಗಳನ್ನು ವಿಮಾನ ನಿಲ್ದಾಣದಲ್ಲಿನ ಗ್ರಾಹಕರಿಗೆ ಒಂದೇ ಸೂರಿನಡಿ ಸಿಗುವಂತೆ ಮಾಡುವುದು ಇದರ ಉದ್ದೇಶವಾಗಿದ್ದು, ಕೈಗಾರಿಕಾ ಇಲಾಖೆಯು ಇದರ ಉಸ್ತುವಾರಿ ವಹಿಸಲಿದೆ ಎಂದು ತಿಳಿಸಿದರು.

ವಿಮಾನ ನಿಲ್ದಾಣದ ಗ್ರಾಹಕರನ್ನು ಗಮನದಲ್ಲಿ ಇರಿಸಿಕೊಂಡು ಅದಕ್ಕೆ ತಕ್ಕಂತೆ ಉತ್ಪನ್ನಗಳ ಬ್ರ್ಯಾಂಡಿಂಗ್ ಮಾಡಲು ಗಮನಹರಿಸಲಾಗುವುದು ಎಂದೂ ಪಾಟೀಲ ತಿಳಿಸಿದರು.

ಕಾಫಿ ಬೋರ್ಡ್, ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದಾದರೂ ಸ್ಥಾಪನೆಯಾಗಲಿರುವ ಮಳಿಗೆಗಳಲ್ಲಿ ಕರ್ನಾಟಕ ಮೂಲದ ಕಾಫಿ ಸ್ವಾದಗಳು ಸೇವನೆಗೆ ಲಭ್ಯವಿರುತ್ತವೆ. ಜೊತೆಗೆ, ಇಲ್ಲಿನ ವಿವಿಧ ನಮೂನೆಯ ಕಾಫಿ ಪುಡಿಯನ್ನು ಗ್ರಾಹಕರು ಕೊಳ್ಳಬಹುದಾಗಿರುತ್ತದೆ ಎಂದರು.

ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕೆಎಸ್ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್, ವಿಮಾನ ನಿಲ್ದಾಣದ ಉಪಾಧ್ಯಕ್ಷ ವೆಂಕಟರಾಮನ್, ಕೆಎಸ್ಎಂಸಿಎ ವ್ಯವಸ್ಥಾಪಕ ನಿರ್ದೇಶಕ ಸಿದ್ಧಲಿಂಗಪ್ಪ ಪೂಜಾರ್ ಮತ್ತಿತರರು ಸಭೆಯಲ್ಲಿದ್ದರು.

RELATED ARTICLES
- Advertisment -
Google search engine

Most Popular