ಮೈಸೂರು: ಬ್ರಿಟಿಷ್ ಭಾರತ ದಲ್ಲಿ ಶತಮಾನಗಳ ಹಿಂದೆಯೇ ಮೌಡ್ಯಗಳ ಆಚರಣೆಯಿಂದ ಅಂಧಕಾರವೇ ತುಂಬಿದ್ದ ಜಾತಿ, ಮತ, ಪಂಥ, ಧರ್ಮಗಳ ಹಾಗೂ ಅಸಮಾನತೆಯ ಪುರುಷ ಪ್ರಧಾನ ಸಮಾಜದಲ್ಲಿ ಶೋಷಣೆಯ ಬೆಂಕಿಯಲ್ಲಿ ತಾನು ಉರಿದು ಬೆಂದರೂ ಸಹ ತನ್ನ ಸ್ತ್ರೀಕುಲದ ಉದ್ಧಾರಕ್ಕಾಗಿ ತಮ್ಮ ಧೀಶಕ್ತಿಯಿಂದ ಅದೇ ಬೆಂಕಿಯಲ್ಲಿ ಉರಿದು ಬೂದಿಯಾಗದೆ ಬೆಳಕಾಗಿ ಶತಮಾನಗಳ ಹಿಂದೆಯೇ ಅಕ್ಷರ ವಂಚಿತರ ಎದೆಯಲ್ಲಿ ಅಕ್ಷರದ ಬೀಜ ಬಿತ್ತಿ ಶೋಷಿತರ ಮತ್ತು ಮಹಿಳೆಯರ ಶಿಕ್ಷಣಕ್ಕೆ ಮುನ್ನುಡಿ ಬರೆದವರು ಅಕ್ಷರದ ಜಗಜ್ಜನನಿ ಸಾವಿತ್ರಿ ಬಾಯಿ ಫುಲೆ ಎಂದು ಸಾಹಿತಿ ಬನ್ನೂರು ಕೆ.ರಾಜು ಗುಣಗಾನ ಮಾಡಿದರು.
ನಗರದ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದಿಂದ ಚಾಮುಂಡಿ ಬೆಟ್ಟದಲ್ಲಿನ ಟಿ.ಎಸ್.ಸುಬ್ಬಣ್ಣ ಸಾರ್ವಜನಿಕ ಬಾಲಕಿಯರ ವಸತಿ ಪ್ರೌಢ ಶಾಲೆ ಯಲ್ಲಿ ನಡೆದ ದೇಶದ ಮೊದಲ ಶಿಕ್ಷಕಿ ಅಕ್ಷರ ಮಾತೆ ಸಾವಿತ್ರಿ ಬಾಯಿ ಫುಲೆ ಜಯಂತಿ ಕಾರ್ಯಕ್ರಮವನ್ನು ಸಾವಿತ್ರಿ ಬಾ ಫುಲೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮೇಲ್ಜಾತಿ-ಕೆಳಜಾತಿ, ಗಂಡು- ಹೆಣ್ಣೆಂಬ ತಾರತಮ್ಯಗಳ ನಡುವೆ ಅರಿವು – ಅಕ್ಷರಗಳಿಲ್ಲದೆ ಮನುಷ್ಯರು ಪ್ರಾಣಿಗಳಿಗಿಂತ ಕಡೆಯಾಗಿ ಬದುಕುತ್ತಿದ್ದ ಕಾಲಘಟ್ಟದಲ್ಲಿ ಇಂಥಾ ಕೆಟ್ಟ ಸಮಾಜದ ಪ್ರಬಲ ವಿರೋಧದಲ್ಲೂ ಸಾವಿತ್ರಿ ಬಾ ಫುಲೆ ತಮ್ಮ ಪತಿ ಜ್ಯೋತಿ ಬಾಫುಲೆ ಮಾರ್ಗದರ್ಶನದಲ್ಲಿ ಅಕ್ಷರ ಕಲಿತು ಭಾರತದ ಮೊಟ್ಟ ಮೊದಲ ಶಿಕ್ಷಕಿ ಎನಿಸಿ ಇತರ ಅನಕ್ಷರಸ್ಥರಿಗೂ ಅದರಲ್ಲೂ ವಿಶೇಷವಾಗಿ ಸ್ತ್ರೀಯರಿಗೆ ಶಿಕ್ಷಣ ನೀಡಲು ಮುಂದಾದದ್ದು ಆ ಕಾಲದಲ್ಲಿ ಬಹುದೊಡ್ಡ ಕ್ರಾಂತಿ ಕಾರಿ ನಡೆಯಾಗಿತ್ತೆಂದರು.
ಪರಿವರ್ತನೆ ಜಗದ ನಿಯಮ ಎಂಬುದು ಅಕ್ಷರಶಃ ಸತ್ಯ. ಹಾಗೆಯೇ ಸತ್ಯ ಎನ್ನುವುದು ಬೆಂಕಿ ಇದ್ದಂತೆ. ಅದನ್ನು ಬಚ್ಚಿಡಲಾಗದು. ಒಂದು ಪಕ್ಷ ಬಚ್ಚಿಟ್ಟರೂ ಅದು ಬಚ್ಚಿಟ್ಟವರನ್ನೇ ಸುಟ್ಟು ಬೆಳಕಾಗಿ ಹೊರಬರುತ್ತದೆ. ಸಾವಿತ್ರಿ ಬಾ ಫುಲೆಯ ಚರಿತ್ರಾರ್ಹ ಸಾಧನೆಯ ಬದುಕೂ ಅಷ್ಟೇ, ಒಂದೂವರೆ ಶತಮಾನಕ್ಕೂ ಹೆಚ್ಚು ಕಾಲದಿಂದ ಭಾರತದ ಇತಿಹಾಸದಲ್ಲಿ ಸರಿಯಾಗಿ ಬೆಳಕಿಗೆ ಬಾರದೆ ಹೂತು ಹೋಗಿತ್ತು. ಬಾಬಾ ಸಾಹೇಬ್ ಅಂಬೇಡ್ಕರರು ಸಾವಿತ್ರಿ ಬಾ ಫುಲೆ ದಂಪತಿಯ ಹೂತಿಟ್ಟ ಸಾಹಸಗಾಥೆಯ ಪುಟಗಳನ್ನು ಹೊರತೆಗೆದ ಕ್ಷಣದಿಂದ ಇಡೀ ದೇಶವೇ ಅಕ್ಷರದವ್ವ ಸಾವಿತ್ರಿ ಬಾ ಫುಲೆಯ ಸಮಾಜ ಸುಧಾರಣೆಯನ್ನು ಅಕ್ಕರೆಯಿಂದ ಕೊಂಡಾಡುತ್ತಿದೆ. ಸತ್ಯಕ್ಕೆ, ಪ್ರಾಮಾಣಿಕ ಹೋರಾಟಕ್ಕೆ, ಒಳಿತಿಗೆ, ತಕ್ಷಣಕ್ಕೆ ಫಲ ಸಿಗದಿದ್ದರೂ ನಿಧಾನವಾಗಿಯಾದರೂ ಯಾವತ್ತಿದ್ದರೂ ಇದಕ್ಕೆ ಬೆಲೆ ಸಿಕ್ಕೇ ಸಿಗುತ್ತದೆಂಬುದಕ್ಕೆ ಸಾವಿತ್ರಿ ಬಾ ಫುಲೆಯ ಹೋರಾಟದ ಸಾರ್ಥಕ ಬದುಕೇ ಸಾಕ್ಷಿಯಾಗಿ ದೇಶದ ಕಣ್ಮುಂದಿದೆ. ಅಂದು ಅವರು ಬಿತ್ತಿದ ಅಕ್ಷರ ಬೀಜ ಕಾಲಾನಂತರದಲ್ಲಿ ಮೊಳಕೆ ಹೊಡೆದು, ಸಸಿಯಾಗಿ, ಗಿಡವಾಗಿ, ಮರವಾಗಿ, ಇಂದು ಹೆಮ್ಮರವಾಗಿ ಅಕ್ಷರಸ್ಥರ ಕಂಗಳಲ್ಲಿ ಶಿಕ್ಷಣದ ಮಹಾ ಬೆಳಕಾಗಿ ಪ್ರಜ್ವಲಿಸುತ್ತಿದೆ.
ಅಕ್ಷರಾಯುಧವನ್ನು ಝಳಪಿಸುತ್ತಾ ಅಕ್ಷರಧಾತೆಯಾ ಗಿ ಒಂದೂವರೆ ಶತಮಾನಗಳ ಹಿಂದೆಯೇ ಭಾರತದ ಯುವಜನರ ಐಕಾನ್ ಆಗಿದ್ದ ಸಾವಿತ್ರಿ ಬಾಫುಲೆ ಅವರು, ಅಕ್ಷರ ವಂಚಿತರು, ಶೋಷಿತರು, ದಮನಿತರು, ಮಹಿಳೆಯರು ಅಕ್ಷರ ಕಲಿತರೆ ಮಾತ್ರ ಸಾಲದು. ಅದರೊಡನೆ ಅರಿವನ್ನೂ ಬೆಳೆಸಿಕೊಳ್ಳಬೇಕೆಂದು ಹೇಳುತ್ತಲೇ ಜನರನ್ನು ಜಾಗೃತಿಗೊಳಿಸಿ ಶಿಕ್ಷಣ ಕ್ರಾಂತಿಯ ಜೊತೆಜೊತೆಯಲ್ಲೇ ವಿಧವಾ ವಿವಾಹ, ಬಾಲ್ಯ ವಿವಾಹ,ಹೆಣ್ಣು ಭ್ರೂಣ ಹತ್ಯೆ, ಸತಿ ಪದ್ಧತಿ, ವರದಕ್ಷಿಣೆ, ದೇವದಾಸಿ ಸಮಸ್ಯೆ ಮುಂತಾದ ಸಾಮಾಜಿಕ ಅನಿಷ್ಟಗಳ ಹಾಗೂ ಅತ್ಯಾಚಾರ-ಅನಾಚಾರ, ಭ್ರಷ್ಟಾಚಾರಗಳ ವಿರುದ್ಧ ದನಿಯೆತ್ತಿ ಜನಜಾಗೃತಿ ಮೂಡಿಸಿ ಸಾಕಷ್ಟು ಯಶಸ್ಸಿನ ಮಾರ್ಗ ನಿರ್ಮಿಸಿದ್ದರು. ಸಾವಿತ್ರಿ ಬಾಫುಲೆ ಬಗ್ಗೆ ಹೇಳುವಾಗ ಇಂಥಾ ಸಾಮಾಜಿಕ ಕಾಳಜಿಯ ಸಮಾಜ ಸುಧಾರಕಿಯನ್ನು ದೇಶಕ್ಕೆ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರ ಪತಿ ಶ್ರೇಷ್ಠ ಸಮಾಜ ಸುಧಾರಕ ಜ್ಯೋತಿ ಬಾ ಫುಲೆ ಅವರನ್ನೂ ಸ್ಮರಿಸಬೇಕಾಗುತ್ತದೆ. ಸಾಮಾನ್ಯವಾಗಿ ಓರ್ವ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳ್ಳೆಂಬ ಮಾತಿದೆ.ಆದರೆ ಇಲ್ಲಿ ಅಕ್ಷರದವ್ವ ಸಾವಿತ್ರಿ ಬಾ ಫುಲೆಯಂಥಾ ಯಶಸ್ವಿ ಮಹಿಳೆಯ ಹಿಂದೆ ಜ್ಯೋತಿ ಬಾ ಫುಲೆಯಂಥ ಶ್ರೇಷ್ಠ ಪುರುಷ ಇದ್ದು ಪತಿ-ಪತ್ನಿಯರಿಬ್ಬರೂ ಸಮಾಜ ಸುಧಾರಣೆಯಲ್ಲಿ ಭಾರತದಲ್ಲೊಂದು ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆಂದ ಅವರು, ಸಾವಿತ್ರಿ ಬಾ ಫುಲೆ ದಂಪತಿಯ ಹೋರಾಟದ ಬದುಕು ಸಂವಿಧಾನ ಶಿಲ್ಪಿ ಭಾರತರತ್ನ ಬಿ.ಆರ್. ಅಂಬೇಡ್ಕರರಿಗೂ ಪ್ರೇರಣೆ ಆಗಿತ್ತೆಂದು ತಿಳಿಸಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಪ್ರಸಿದ್ಧ ಸಂಖ್ಯಾ ಶಾಸ್ತ್ರಜ್ಞ ಎಸ್.ಜಿ.ಸೀತಾರಾಂ ಅವರು ಮಾತನಾಡಿ, ಸಾಮಾಜಿಕ ಅನಿಷ್ಟಗಳ ವಿರುದ್ಧ ದಿಟ್ಟತನದಿಂದ ಹೋರಾಡಿದ ಸಾವಿತ್ರಿ ಬಾ ಫುಲೆ ದೀನರಿಗೆ ದಿಕ್ಕಾದ ದಿಗ್ಗಜೆಯಾಗಿದ್ದು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಓನಾಮ ಬರೆದ ದೇಶದ ಮೊದಲ ಶಿಕ್ಷಕಿ ಮಾತ್ರವಲ್ಲ, ಬಹುಜನರ ಶೈಕ್ಷಣಿಕ ಬದುಕಿಗಾಗಿ ತನ್ನ ಬದುಕನ್ನೇ ತ್ಯಾಗ ಮಾಡಿದ ಮಹಾ ತಾಯಿಯೆಂದ ಅವರು ಸಾವಿತ್ರಿ ಬಾ ಫುಲೆ ಬಗ್ಗೆ ಸವಿವರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿ ಕೊಟ್ಟರು. ಇದೇ ಸಂದರ್ಭದಲ್ಲಿ ಸಾವಿತ್ರಿ ಬಾ ಫುಲೆ ಹೆಸರಿನಲ್ಲಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ ಭಾಷಣ ಸ್ಪರ್ಧೆಯಲ್ಲಿ ಹೆಚ್.ಎಸ್.ವರ್ಷಿಣಿ (ಪ್ರ), ಬಿಂದುಶ್ರೀ(ದ್ವಿ), ನೇತ್ರಾವತಿ(ತೃ), ಗಾಯನದಲ್ಲಿ ಲಲಿತಾ ಪರಮೇ ಶ್ವರಿ(ಪ್ರ), ಶ್ರೀದೇವಿ(ದ್ವಿ),ವೈಷ್ಣವಿ (ತೃ), ಚಿತ್ರ ಕಲೆಯಲ್ಲಿ ಎನ್.ಜನನಿ(ಪ್ರ),ಸಂಜನಾ(ದ್ವಿ), ಅಶ್ವಿನಿ(ತೃ) ಅವರುಗಳಿಗೆ ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮ ಬಹುಮಾನ ವಿತರಿಸಿ ಗೌರವಿಸಿದರು. ಇದೇ ವೇಳೆ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಕ್ರಿಯಾಶೀಲ ಮುಖ್ಯ ಶಿಕ್ಷಕ ಡಿ.ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿದ್ದ ಚಿತ್ರ ಕಲಾವಿದೆ, ಲೇಖಕಿ ಡಾ.ಜಮುನಾರಾಣಿ ಮಿರ್ಲೆ ಅವರು ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯ-ಸಂಗೀತ, ಚಿತ್ರಕಲೆ, ನೃತ್ಯ,ನಾಟಕ ಮುಂತಾದ ಲಲಿತಕಲಾ ಕ್ಷೇತ್ರಗಳಲ್ಲೂ ಸಾಧಕರಾಗಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಮುಖ್ಯ ಶಿಕ್ಷಕ ಡಿ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ, ಶಿಕ್ಷಕರಾದ ಎಸ್. ಪಿ.ಪ್ರಭುಲಿಂಗ ಸ್ವಾಮಿ, ಸೋಮಶೇಖರ್, ಅರುಂಧತಿ ಇನ್ನಿತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಕು.ಸಂಜನಾ ಸ್ವಾಗತಿಸಿದರು. ಕೊನೆಯಲ್ಲಿ ಕು.ಹೆಚ್.ಕೆ.ನಯನಾ ವಂದನಾರ್ಪಣೆ ಮಾಡಿದರು. ಇಡೀ ಕಾರ್ಯಕ್ರಮನ್ನು ಕು.ಸ್ಪಂದನಾ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು.