ದಾವಣಗೆರೆ: ಕೋವಿಡ್ ಅಲ್ಲಲ್ಲಿ ವರದಿಯಾಗುತ್ತಿದ್ದು ಜೆಎನ್1 ತಳಿ ತೀವ್ರ ಸ್ವರೂಪ ಹೊಂದಿದ್ದು ಇದು ಹರಡದಂತೆ ಎಚ್ಚರಿಕೆ ವಹಿಸಿ ಎಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ಹಾಸಿಗೆ ಮತ್ತು ಆಕ್ಸಿಜನ್ ಘಟಕಗಳನ್ನು ಸಿದ್ದಪಡಿಸಿಟ್ಟುಕೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕೈಗಾರಿಕಾಭಿವೃದ್ದಿ ಆಯುಕ್ತರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶ್ರೀಮತಿ ಗುಂಜನ್ ಕೃಷ್ಣ ಅವರು ಸೂಚನೆ ನೀಡಿದರು.
ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಸೂಚನೆ ನೀಡಿದರು. ದಾವಣಗೆರೆ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ 1019 ಜನರಿಗೆ ಕೋವಿಡ್ ಪರೀಕ್ಷೆ ನಡೆಸಿದ್ದು ಅದರಲ್ಲಿ 22 ಜನರಿಗೆ ಕೋವಿಡ್ ಕಂಡು ಬಂದಿದ್ದು ಜೆಎನ್1 ಯಾವುದೇ ತಳಿ ಇರುವುದಿಲ್ಲ. ಇಬ್ಬರು ಮಾತ್ರ ಇತರೆ ಖಾಯಿಲೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ ಎಲ್ಲರೂ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾರಿಗೂ ತೀವ್ರತರವಾದ ಲಕ್ಷಣಗಳಿರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಾಹಿತಿ ನೀಡಿದರು. ಈ ವೇಳೆ ಚಿಗಟೇರಿ ಆಸ್ಪತ್ರೆಯಲ್ಲಿಯು ಪ್ರತ್ಯೇಕ ಕೋವಿಡ್ ವಾರ್ಡ್ ಕಾಯ್ದಿರಿಸುವಂತೆ ಮತ್ತು ಪಿಎಂ ಕೇರ್ಸ್‍ನಡಿ ಪೂರೈಸಲಾದ ವೆಂಟಿಲೇಟರ್‍ಗಳನ್ನು ಸಿದ್ದಪಡಿಸಿಟ್ಟುಕೊಳ್ಳುವಂತೆ ಸೂಚನೆ ನೀಡಿದರು.
ಜಿಲ್ಲೆಯ ಪ್ರಾಥಮಿಕ ಅರೋಗ್ಯ ಕೇಂದ್ರಗಳಲ್ಲಿ ಖಾಲಿ ಇದ್ದ ವೈದ್ಯರ ಹುದ್ದೆಗಳನ್ನು ನೇರ ಸಂದರ್ಶನದಲ್ಲಿ ಮಾಡಿ ಭರ್ತಿ ಮಾಡಲಾಗಿದೆ. ತಜ್ಞ ವೈದ್ಯರು ನೇರ ಸಂದರ್ಶನಕ್ಕೆ ಹಾಜರಾಗದ ಕಾರಣ ಈ ಹುದ್ದೆಗಳು ಖಾಲಿ ಇವೆ. ತಾಯಿ ಮತ್ತು ಮಗುವಿನ ಮರಣ ಪ್ರಮಾಣ ಕಡಿಮೆ ಮಾಡಲು ಹೆರಿಗೆ ಆಸ್ಪತ್ರೆಯಲ್ಲಿ ನಿಗಾ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸಲು ಆರೋಗ್ಯ ಅಭಿಯಾನದಡಿ ನಿವೃತ್ತ ತಜ್ಞ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಡಿಹೆಚ್‍ಓ ಸಭೆಗೆ ತಿಳಿಸಿದಾಗ ತಾಯಿ ಮತ್ತು ಮಗುವಿನ ಮರಣ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಬೇಕು, ಮರಣ ಹೊಂದಿದ ಪ್ರಕರಣಗಳನ್ನು ಕಡ್ಡಾಯವಾಗಿ ಆಡಿಟ್ ಮಾಡಿಸಬೇಕೆಂದು ಕಾರ್ಯದರ್ಶಿಯವರು ಸೂಚನೆ ನೀಡಿದರು.
ಗ್ಯಾರಂಟಿಗಳ ಪರಿಶೀಲನೆ; ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಶಕ್ತಿ ಯೋಜನೆಯಡಿ ದಾವಣಗೆರೆ ವಿಭಾಗದಿಂದ 2.9 ಕೋಟಿ ಮಹಿಳೆಯರು ಪ್ರಯಾಣಿಸಿದ್ದು ಇದರ ಬಾಬ್ತು ದಾವಣಗೆರೆ ವಿಭಾಗಕ್ಕೆ 55.79 ಕೋಟಿ ವೆಚ್ಚ ಭರಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಕರು ಸಭೆಗೆ ಮಾಹಿತಿ ನೀಡಿದರು. ಈ ವೇಳೆ ಹಾಸ್ಟೆಲ್ ಹತ್ತಿರ ಬಸ್‍ಗಳ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು ದೊಡ್ಡ ಬಸ್‍ಗಳು ಸಂಚರಿಸದ ರಸ್ತೆಯಾಗಿದ್ದಲ್ಲಿ ಮಿನಿಬಸ್‍ಗಳನ್ನು ಇಲ್ಲಿ ಓಡಿಸಲು ತಿಳಿಸಿದರು.
ಗೃಹಲಕ್ಷ್ಮಿ; ಜಿಲ್ಲೆಯಲ್ಲಿ ಈ ಯೋಜನೆಯಡಿ 384319 ಗುರಿಯಲ್ಲಿ 335022 ಮಹಿಳೆಯರು ನೊಂದಣಿ ಮಾಡಿಸಿದ್ದು ಕೆವೈಸಿ ಮತ್ತು ಆಧಾರ್ ಲಿಂಕ್ ಮಾಡದ 4254 ಮಹಿಳೆಯರಿಗೆ ಹಣ ಸಂದಾಯವಾಗಿರುವುದಿಲ್ಲ. ಇದನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಅಕ್ಟೋಬರ್‍ವರೆಗೆ ತಲಾ ಎರಡು ಸಾವಿರದಂತೆ ಪಾವತಿಸಲಾಗಿದ್ದು ಕೇಂದ್ರ ಕಚೇರಿಯಿಂದಲೇ ಎಲ್ಲಾ ಫಲಾನುಭವಿಗಳಿಗೆ ಪಾವತಿಸಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರು ಸಭೆಗೆ ತಿಳಿಸಿದಾಗ ಸಮಸ್ಯೆ ಇದ್ದಲ್ಲಿ ಸಂಪರ್ಕಿಸಲು ಕಚೇರಿಯಲ್ಲಿ ಜಿಲ್ಲಾ ಸಂಪರ್ಕ ಸಂಖ್ಯೆಯನ್ನು ಸಾರ್ವಜನಿಕರಿಗಾಗಿ ಆರಂಭಿಸಲು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಈ ವೇಳೆ ತಿಳಿಸಿದರು.
ಗೃಹಜ್ಯೋತಿ; ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿನ 4.78 ಲಕ್ಷ ಗ್ರಾಹಕರಲ್ಲಿ ಗೃಹಜ್ಯೋತಿ ಯೋಜನೆಯಡಿ 420000 ಗ್ರಾಹಕರು ನೊಂದಾಯಿಸಿದ್ದು ಇವರಿಗೆ ನವೆಂಬರ್ ತಿಂಗಳಲ್ಲಿ 18.43 ಕೋಟಿ ಗೃಹಜ್ಯೋತಿಗಾಗಿ ವೆಚ್ಚ ಮಾಡಲಾಗಿದೆ ಎಂದು ಬೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದರು.
ಅನ್ನಭಾಗ್ಯ; ಅನ್ನಭಾಗ್ಯ ಯೋಜನೆಯಡಿ 3,33,278 ಕಾರ್ಡ್‍ಗಳಿದ್ದು 12,64,261 ಸದಸ್ಯರಿದ್ದಾರೆ. ಇವರಿಗೆ ತಲಾ 5 ಕೆ.ಜಿ. ಅಕ್ಕಿ ಜೊತೆಗೆ 5 ಕೆ.ಜಿ ಅಕ್ಕಿಯ ಹಣವನ್ನು ಅವರ ಖಾತೆಗೆ ನೇರವಾಗಿ ಪಾವತಿಸಲಾಗಿದ್ದು ನವೆಂಬರ್ ತಿಂಗಳಲ್ಲಿ 19.95 ಕೋಟಿ ಪಾವತಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು ಸಭೆಗೆ ತಿಳಿಸಿದರು.
ಭತ್ತ ಹೊಸ ಬೆಳೆ ಪದ್ದತಿ; ಭತ್ತದ ಬೆಳೆಯನ್ನು ನೀರು ನಿಲ್ಲಿಸುವ ಪದ್ದತಿಯಡಿ ಬೆಳೆಯಲಾಗಿದ್ದು ಉತ್ತಮ ಇಳುವರಿ ಬಂದಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸಭೆಗೆ ತಿಳಿಸಿದಾಗ ಇದನ್ನು ದಾಖಲೀಕರಿಸಲು ಸೂಚನೆ ನೀಡಿ ಫ್ರೂಟ್ಸ್‍ನಡಿ ಶೇ 90 ರಷ್ಟು ರೈತರನ್ನು ನೊಂದಾಯಿಸಲು ತಿಳಿಸಿ ಬೆಳೆ ಪರಿಹಾರವನ್ನು ಮೊದಲ ಹಂತದಲ್ಲಿ ಪಾವತಿಗೆ ಕ್ರಮ ವಹಿಸಲಾಗುತ್ತಿದೆ ಎಂದರು.
ಸಕಾಲ; ಸಕಾಲದಲ್ಲಿ ಹಲವು ಸೇವೆಗಳನ್ನು ನೀಡಲಾಗುತ್ತಿದೆ, ಆದರೆ ಗ್ರಾಮ ಪಂಚಾಯಿತಿಯಲ್ಲಿ ಚರಂಡಿ ದುರಸ್ಥಿ, ಬೀದಿದೀಪ ದುರಸ್ಥಿ ಬಗ್ಗೆ ಬರುವ ಅರ್ಜಿಗಳನ್ನು ಸಕಾಲದಲ್ಲಿ ದಾಖಲಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಪ್ರಸ್ತಾಪಿಸಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಲು ಸೂಚನೆ ನೀಡಲು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಯವರಿಗೆ ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣನಾಯ್ಕ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.