ಮೈಸೂರು: ಮೈಸೂರು ಫೆಸ್ಟ್ -2024 ಕಾರ್ಯಕ್ರಮವನ್ನು ಮೂರು ದಿನಗಳ ಕಾಲ ಮೈಸೂರು ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗುತ್ತಿದ್ದು, ಮೈಸೂರಿನ ಕಲೆ, ಸಂಸ್ಕೃತಿ ಮತ್ತು ಪ್ರವಾಸಿತಾಣಗಳ ಬಗ್ಗೆ ಪ್ರವಾಸಿಗರಿಗೆ ತಿಳಿಸಲು ಇದು ಒಂದು ಉತ್ತಮ ವೇದಿಕೆಯಾಗಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಎಂ.ಕೆ. ಸವಿತಾ ರವರು ತಿಳಿಸಿದರು.
ಇಂದು ಪ್ರವಾಸೋದ್ಯಮ ಇಲಾಖೆಯ ಮಯೂರ ಹೊಟೇಲ್ ನಲ್ಲಿ ಮೈಸೂರು ಫೆಸ್ಟ್-2024 ಕಾರ್ಯಕ್ರಮ ಸಿದ್ದತೆ ಕುರಿತು ನೇರ ಪಾಲುದಾರರೊಂದಿಗೆ ನಡೆದ ಪೂರ್ವಭಾವಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮೈಸೂರಿನ ಅಂಶಗಳನ್ನು ಒಳಗೊಂಡ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು. ಜನವರಿ 26,27,28 ಮೂರು ದಿನಗಳ ಕಾಲ ಕಾರ್ಯಕ್ರಮವನ್ನು ಅಯೋಜಿಸಲಾಗಿದ್ದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಜೊತೆಗೆ ಜನವರಿ 26 ರಂದು ಮೈಸೂರು ವಿಶ್ವವಿದ್ಯಾಲಯದಲ್ಲಿ ಇರುವ ಕ್ಲಾಕ್ ಟವರ್ ರಸ್ತೆಯ ಬದಿಯಲ್ಲಿ ಚಿತ್ರಸಂತೆ ಕಾರ್ಯಕ್ರಮವನ್ನು ಆಯೋಜಿಸಲಾಗುವುದು.
ಚಿತ್ರಸಂತೆ ಜೊತೆಗೆ ಚಿತ್ರಕಲಾಸ್ಪರ್ಧೆ ಆಯೋಜಿಸಲಾಗಿದ್ದು ಪ್ರಾವಿಣ್ಯತೆ ಹೊಂದಿರುವ ಕಲಾವಿದರು ಹಾಗೂ ಫ್ರೌಡಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಫರ್ಧೆಯಲ್ಲಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಸ್ಫರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಎರಡು ವಿಭಾಗದಲ್ಲಿ ಬಹುಮಾನವನ್ನು ನೀಡಲಾಗುವುದು. ಬೆಳಗ್ಗೆ 11 ಗಂಟೆಯಿoದ ಸಂಜೆ 5 ಗಂಟೆಯ ವರೆಗೆ ಸ್ಥಳೀಯ ಕಲಾತಂಡಗಳಿoದ ವಿವಿಧ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಉತ್ತಮ ಮನರಂಜನೆ ಜೊತೆಗೆ ಮೈಸೂರು ಕಲೆ, ಸಂಸ್ಕೃತಿ ಪ್ರೇಕ್ಷಣಿಯ ಸ್ಥಳಗಳ ಬಗ್ಗೆ ಮಾಹಿತಿಯನ್ನು ನೀಡಲಾಗುವುದು ಎಂದರು.
ಜನವರಿ 27 ರಂದು ಮೈಸೂರು ಫೆಸ್ಟ್-2024ರ ವೇದಿಕೆ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ಬಯಲು ರಂಗಮoದಿರದಲ್ಲಿ ಸಂಜೆ 5.30 ಕ್ಕೆ ಜಿಲ್ಲಾ ಉಸ್ತವಾರಿ ಸಚಿವರು ಅಧ್ಯಕ್ಷತೆಯಲ್ಲಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರ ಘನ ಉಪಸ್ಧಿತಿಯಲ್ಲಿ ಮತ್ತು ಜನಪ್ರತಿನಿಧಿಗಳಿಂದ ಉದ್ಘಾಟಿಸಲಾಗುವುದು. ಸಂಜೆ 6.30 ರ ನಂತರ ಎರಡು ದಿನಗಳ ಕಾಲ ವೇದಿಕೆಯಲ್ಲಿ ವಿವಿಧ ಕಲಾ ತಂಡಗಳಿoದ ವಿವಿಧ ರೀತಿಯ ನಾಟ್ಯ ಕಲಾಪ್ರಕಾರಗಳ ಕಾರ್ಯಕ್ರಮವನ್ನು ಅಯೋಜಿಲಾಗುವುದು ಎಂದು ತಿಳಿಸಿದರು.
ಮೈಸೂರು ಫೆಸ್ಟ್ ಅಂಗವಾಗಿ ಮೈಸೂರು ಕಾರ್ಯಕ್ರಮವು ಮೈಸೂರಿನ ಸ್ಥಳೀಯ ಅಂಶಗಳನ್ನು ಪ್ರವಾಸಿಗರಿಗೆ ತಲುಪಿಸುವ ಕಾರ್ಯಕ್ರಮವಾಗಿದ್ದು, ಸ್ಥಳೀಯರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು ಎಂದರು. ಮೈಸೂರು ಫೆಸ್ಟ್- 2024 ಅಂಗವಾಗಿ ಮೈಸೂರು ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಹೊಂದಿಕೊಂಡಂತೆ ಇರುವ ಸ್ಥಳಗಳಲ್ಲಿ ವಿವಿಧ ಉದ್ಯಮಗಳ ಮಳಿಗೆಗಳನ್ನು ಆಯೋಜಿಸಲಾಗುವುದು. ಮಳಿಗೆಗಳಲ್ಲಿ ಮಾರಾಟ ಮತ್ತು ಪ್ರದರ್ಶನಕ್ಕೆ ಅವಕಾಶವನ್ನು ಕಲ್ಪಿಸಿಕೊಡಲಾಗಿದ್ದು, ಜೊತೆಗೆ ಈ ಬಾರಿ ಪಾಲ್ಗೊಳ್ಳುವ ಸ್ಟಾಲ್‌ಗಳಲ್ಲಿ ಹೆಚ್ಚಿನ ರೀತಿಯಾಗಿ ಮೈಸೂರಿನ ಸ್ಥಳೀಯ ವಿಚಾರಗಳನ್ನು ತಿಳಿಸುವಂತಹ ಹಾಗೂ ಪ್ರಾಮುಖ್ಯತೆಯನ್ನು ಸಾರುವಂತ ಮಳಿಗೆಗಳಿಗೆ ಅವಕಾಶವನ್ನು ಕಲ್ಪಿಸಲಾಗುವುದು, ಪ್ರಮುಖವಾಗಿ ಮೈಸೂರಿನ ವಿಶೇಷ ಖಾದ್ಯಗಳು ಮತ್ತು ಮೈಸೂರಿನ ಸ್ಥಳೀಯ ಉತ್ಪನ್ನಗಳು ಹಾಗೂ ಮೈಸೂರಿನ ವಿಶೇಷವಾದ ತಿಂಡಿ ತಿನಿಸುಗಳ ಮಳಿಗೆಗಳಿಗೆ ಅವಕಾಶವನ್ನು ಕಲ್ಪಿಸಲಾಗುವುದು.
ಮನೆಗಳ ಅಲಂಕಾರಕ್ಕೆ ಸಂಬoಧಿಸಿದoತೆ, ಮಕ್ಕಳ ಆಟಿಕೆಗಳಿಗೆ ಸಂಬoಧಿಸಿದoತೆ, ಮಹಿಳೆಯರಿಗೆ ಸಂಬoಧಿಸಿದoತೆ ಹಾಗೂ ಆರೋಗ್ಯಕ್ಕೆ ಸಂಬoಧಿಸಿದoತಹ ಸ್ಟಾಲ್‌ಗಳಿಗೆ ಬ್ರ‍್ಯಾಂಡ್ ಮೈಸೂರು ಫೆಸ್ಟ್ ನಲ್ಲಿ ಅವಕಾಶವನ್ನು ನೀಡಲಾಗುವುದು ಎಂದರು. ಮೈಸೂರಿನ ಪ್ರಮುಖ ಪ್ರವಾಸಿ ಸ್ಥಳಗಳು, ಹೋಟೆಲ್, ವಿಮಾನ ನಿಲ್ದಾಣ, ರೈಲ್ವೆ ಹಾಗೂ ಮೈಸೂರಿನ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಸ್ವಯಂ ಪ್ರೇರಿತರಾಗಿ ಲೋಗೋವನ್ನು ಪ್ರದರ್ಶಿಸಲು ಮುಂದಾಗಬೇಕು ಹಾಗೂ ನೇರ ಪಾಲುದಾರರು ಬ್ರಾಂಡ್ ಮೈಸೂರು ಲೋಗೋ ಹಾಗೂ ಮೈಸೂರು ಫೆಸ್ಟ್ 2024 ಕಾರ್ಯಕ್ರಮದ ಕುರಿತು ಹೆಚ್ಚಿನ ರೀತಿಯಲ್ಲಿ ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ ಮಾಡಬೇಕು ಎಂದರು.
ಜೊತೆಗೆ ಈ ಬಾರಿಯ ಮೈಸೂರು ಫೆಸ್ಟ್ನಲ್ಲಿ ಪ್ಲೀ-ಮಾರ್ಕೆಟಿಂಗ್ ಒಂದೇ ಸೂರಿನಲ್ಲಿ ಮೈಸೂರು ಬ್ರಾಂಡ್ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಹೊಸ ಬಗೆಯ ಮಳಿಗೆಗಳನ್ನು ತೆರೆಯಲಾಗುವುದು. ಜೊತೆಗೆ ಪ್ರವಾಸೋದ್ಯಮ ಇಲಾಖೆಯಿಂದ ವಿವಿಧ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲು ಬರುವ ಪ್ರವಾಸಿಗರಿಗೆ ಬ್ರಾಂಡ್ ಮೈಸೂರು ಫೆಸ್ಟ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲು ಪ್ರವಾಸಿ ತಾಣಾಗಳಲ್ಲಿ ಪೋಸ್ಟರ್, ಬ್ಯಾನರ್ ಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದ್ದರು.
ಸಭೆಯಲ್ಲಿ ಹೋಟೆಲ್ ಮಾಲೀಕರ ಸಂಘದ ನಾರಾಯಣ ಗೌಡ, ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟ ಅಧ್ಯಕ್ಷರಾದ ಪ್ರಶಾಂತ್, ಜಿಎಸ್ ಎಸ್ ಯೋಗ ಸಂಸ್ಧೆಯ ಅಧ್ಯಕ್ಷರಾದ ಶ್ರೀ ಹರಿ, ಚಾಲಕರ ಸಂಘದ ಅಧ್ಯಕ್ಷರಾದ ನಾಗರಾಜು, ಡಿ. ದೇವರಾಜು ಅರಸು ರಸ್ತೆ ಅಂಗಡಿ ಮಾಲೀಕರ ಹಾಗೂ ಬಾಡಿಗೆದಾರರ ಸಂಘದ ಅಧ್ಯಕ್ಷರಾದ ವೀರಭದ್ರ, ಅನುಮೋದಿತ ಮಾರ್ಗದರ್ಶಿ ಸಂಘಗಳ ಅಧ್ಯಕ್ಷರಾದ ಎಸ್.ಜೆ ಅಶೋಕ್ ಹಾಗೂ ಟ್ರಾವೆಲ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ದೇವರಾಜ್, ಮಹಾಲಕ್ಷ್ಮಿ ಸ್ವೀಟ್ ಹೌಸ್, ಭೀಮಾ ಜುಯೆಲರ್ಸ್ ಹಾಗೂ ನಗರ ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಉಪಸ್ಥಿತರಿದ್ದರು.