ಶ್ರೀಹರಿಕೂಟಾ: ಇಸ್ರೋ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದು ಕಳೆದ ಸೆಪ್ಟಂಬರ್ ನಲ್ಲಿ ಉಡಾವಣೆ ಮಾಡಿದ್ದ ಆದಿತ್ಯ ಎಲ್ 1ನೌಕೆಯನ್ನ ನಿಗದಿತ ಕಕ್ಷೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.
ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮೊದಲ ಸೌರ ಮಿಷನ್ ಆದಿತ್ಯ ಎಲ್1 ಇಸ್ರೋದ ಶ್ರೀಹರಿಕೋಟಾ ಲಾಂಚ್ ಪ್ಯಾಡ್‌ನಿಂದ ತನ್ನ ಮಹತ್ವಾಕಾಂಕ್ಷೆಯ ಪ್ರಯಾಣವನ್ನು ಪ್ರಾರಂಭಿಸಿ ನಾಲ್ಕು ತಿಂಗಳ ನಂತರ ಇಂದು ತನ್ನ ಅಂತಿಮ ಗಮ್ಯಸ್ಥಾನದ ಕಕ್ಷೆಯನ್ನು ತಲುಪಿದೆ. ಆದಿತ್ಯ ಎಲ್ 1 ಲ್ಯಾಂಗ್ರೇಜ್ ಪಾಯಿಂಟ್’ನಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗಿದ್ದು, ಈ ಮೂಲಕ ಬಾಹ್ಯಾಕಾಶ ಸಂಸ್ಥೆಯ 5 ವರ್ಷಗಳ ಪರಿಶ್ರಮ ಫಲ ನೀಡಿದೆ.
ಭಾರತದ ಆದಿತ್ಯ ಉಪಗ್ರಹವನ್ನು ಎಲ್ 1 ಬಿಂದುವಿನ ಹ್ಯಾಲೋ ಕಕ್ಷೆಗೆ ಸೇರಿಸಲಾಗಿದೆ. 2023ರ ಸೆಪ್ಟೆಂಬರ್ 2ರಂದು ಆದಿತ್ಯ ಎಲ್ 1 ಉಪಗ್ರಹವನ್ನ ಉಡಾವಣೆ ಮಾಡಲಾಗಿತ್ತು.
400 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುಮಾರು 1,500 ಕೆಜಿ ತೂಕದ ಈ ಉಪಗ್ರಹವು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿ ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಬಾಹ್ಯಾಕಾಶ ಆಧಾರಿತ ಭಾರತೀಯ ವೀಕ್ಷಣಾಲಯವಾಗಿ ಕಾರ್ಯನಿರ್ವಹಿಸಲಿದೆ.