Saturday, April 19, 2025
Google search engine

Homeರಾಜ್ಯಸುದ್ದಿಜಾಲಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ: ಶಾಸಕ ಪಿ.ರವಿಕುಮಾರ್

ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ: ಶಾಸಕ ಪಿ.ರವಿಕುಮಾರ್

ಮಂಡ್ಯ: ಸಾರ್ವಜನಿಕರ ಕುಂದು ಕೊರತೆ ನಿವಾರಣೆಗಾಗಿ ಜನತಾದರ್ಶನ ಕಾರ್ಯಕ್ರಮವನ್ನು ಆಯೋಜಿಸಿ ಸಮಸ್ಯೆಗಳನ್ನು ನಿಯಮಾನುಸಾರ ಪರಿಹರಿಸಲಾಗುವುದು. ಜನತಾ ದರ್ಶನವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಪಿ.ರವಿಕುಮಾರ್ ಅವರು ತಿಳಿಸಿದರು. ಮಂಡ್ಯ ಜಿಲ್ಲೆಯ ಬಸರಾಳು ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನಡೆದ ತಾಲ್ಲೂಕು ಮಟ್ಟದ ಜನತಾದರ್ಶನ ಹಾಗೂ ಆರೋಗ್ಯ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗೃಹ ಲಕ್ಷ್ಮಿ, ಗೃಹ ಜ್ಯೋತಿ ಸೇರಿದಂತೆ ಸರ್ಕಾರದ ಯಾವುದೇ ಯೋಜನೆಗೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದರೆ ಅರ್ಜಿ ಸಲ್ಲಿಸಿ ಪರಿಹರಿಸಿಕೊಳ್ಳಿ ಎಂದರು.

ಸಾರ್ವಜನಿಕರ ಬೇಡಿಕೆಯಂತೆ ಬಸರಾಳಿನಲ್ಲಿ ೫೦ ಲಕ್ಷ ರೂ ವೆಚ್ಚದಲ್ಲಿ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲು ಕ್ರಮ ವಹಿಸಲಾಗಿದ್ದು, ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು. ಬಸರಾಳಿನಲ್ಲಿ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಎನ್ ಹೆಚ್ ವತಿಯಿಂದ ಕೋಡಿ ಕೊಪ್ಪಲಿನಿಂದ ಬಿಳಿದೇಗಲು ೫ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಚಿಕ್ಕ ಮಂಡ್ಯದಿಂದ ಬಿಳಿದೇಗಲು ವರೆಗೆ ರಸ್ತೆ ಕಾಮಗಾರಿಗಾಗಿ ೧೨ ಕೋಟಿ ರೂ ಅನ್ನು ಎಸ್.ಹೆಚ್ ಅಲ್ಲಿ ತೆಗೆದುಕೊಂಡಿದ್ದೇವೆ ಈ ರಸ್ತೆಯು ಟೆಂಡರ್ ಹಂತದಲ್ಲಿದ್ದು ಕಾಮಗಾರಿಯನ್ನು ಶೀಘ್ರದಲ್ಲಿ ಆರಂಭಿಸುತ್ತೇವೆ ಎಂದು ಹೇಳಿದರು. ಬರಗಾಲದಲ್ಲೂ ಬಸರಾಳು ಕೆರೆಗೆ ನೀರು ತುಂಬಿಸಲು ವಿಶೇಷ ಕಾಳಜಿ ವಹಿಸಿ ಹೇಮಾವತಿ ಹಾಗೂ ಕೆ.ಆರ್.ಎಸ್ ಅಣೆಕಟ್ಟಿನ ಮೂಲಕ ನೀರು ಒದಗಿಸಿದ್ದಕ್ಕೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಜನತಾದರ್ಶನ ಕಾರ್ಯಕ್ರಮದ ಜೊತೆಗೆ ಚಾಮುಂಡೇಶ್ವರಿ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಬೃಹತ್ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದೆ ಜನರು ತಮಗಿರುವ ಆರೋಗ್ಯದ ಸಮಸ್ಯೆಗಳನ್ನು ವೈದ್ಯರ ಬಳಿ ತಿಳಿಸಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ಹೇಳಿದರು. ೫೦ ಬೆಡ್ ಗಳನ್ನು ಒಳಗೊಂಡ ಸರ್ಕಾರಿ ಆಸ್ಪತ್ರೆಯನ್ನು ನಿರ್ಮಿಸಲಾಗುವುದು. ಜನತಾ ದರ್ಶನದಲ್ಲಿ ಸ್ವೀಕೃತವಾಗುವ ಅರ್ಜಿಗಳು/ ಸಮಸ್ಯೆಗಳನ್ನು೧೫ ದಿನದೊಳಗೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜನತಾದರ್ಶನ ಜನರ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಸೂಕ್ತ ವೇದಿಕೆ ಜಿಲ್ಲಾಧಿಕಾರಿ ಡಾ.ಕುಮಾರ
ಜನತಾದರ್ಶನ ಎಂದರೆ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರವನ್ನು ಕಂಡುಕೊಳ್ಳುವ ವೇದಿಕೆಯಾಗಿದೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದರು. ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಒಂದು ಬಾರಿ ಜನತಾದರ್ಶನ ಕಾರ್ಯಕ್ರಮವನ್ನು ಮಾಡಿದ್ದೇವೆ. ಜನತಾದರ್ಶನದ ಜೊತೆಗೆ ಬಸರಾಳಿನಲ್ಲಿ ಉಚಿತ ಆರೋಗ್ಯ ತಪಾಸಣೆಯನ್ನು ಆಯೋಜಿಸಲಾಗಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಹೇಳಿದರು.

ಸರ್ಕಾರದ ಪ್ರಮುಖ ಯೋಜನೆಗಳಿಗೆ ಸಂಬಂಧಿಸಿದಂತಹ ಇಲಾಖೆಯ ಎಲ್ಲಾ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ ಅಥವಾ ಸಂದೇಹಗಳಿದ್ದಲ್ಲಿ ನೇರವಾಗಿ ಇಲಾಖಾ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ಹೇಳಿದರು. ಜಿಲ್ಲಾ ಅಥವಾ ತಾಲ್ಲೂಕು ಕಚೇರಿಗಳಿಗೆ ಜನಸಾಮಾನ್ಯರು ಸುತ್ತಬಾರದು. ಆಡಳಿತ ವ್ಯವಸ್ಥೆ ಜನರ ಹತ್ತಿರ ಸುತ್ತಬೇಕು ಎಂಬುದು ಜನತಾ ದರ್ಶನದ ಉದ್ದೇಶವಾಗಿದೆ ಎಂದು ತಿಳಿಸಿದರು.

ಮೃತ ಪಟ್ಟ ರೈತ ಕುಟುಂಬದವರಿಗೆ ಪೌತಿ ಖಾತೆ ನೋಂದಣಿಗೆ ತಹಶೀಲ್ದಾರ್ ಕಚೇರಿ ಅವರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪೌತಿ ಖಾತಾ ಆಂದೋಲನ ನಡೆಸುತ್ತಿದ್ದಾರೆ.ಜಿಲ್ಲೆಯ ಎಲ್ಲಾ ತಾಲ್ಲೂಕನ್ನು ಬರ ಪೀಡಿತ ಎಂದು ಘೋಷಿಸಲಾಗಿದ್ದು, ಬರ ಪರಿಹಾರ ಪಡೆಯಲು ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ನೊಂದಣಿ ಮಾಡಿಕೊಂಡು ವಿವರ ಅಪ್ ಲೋಡ್ ಮಾಡಬೇಕು. ರೈತರು ಈಗ ಫ್ರೂಟ್ಸ್ ನಲ್ಲಿ ನೊಂದಣಿ ಮಾಡಿಕೊಳ್ಳದೇ ಬೆಳೆ ಪರಿಹಾರ ಬಂದ ಸಂದರ್ಭದಲ್ಲಿ ಕಚೇರಿಗಳ ಅಲೆದಾಟ ನಡೆಸಿದರೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದರು.

ಇದೇ ಸಂದರ್ಭದಲ್ಲಿ ಬಸರಾಳಿನಲ್ಲಿ ಕೂಸಿನ ಮನೆಯನ್ನು ಶಾಸಕರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಉಪವಿಭಾಗಾಧಿಕಾರಿ ಶಿವಮೂರ್ತಿ, ಮಂಡ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ವೀಣಾ, ತಹಶೀಲ್ದಾರ್ ಶಿವಕುಮಾರ್ ಬಿರಾದಾರ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮೋಹನ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular