ಮಡಿಕೇರಿ : ಜಿಲ್ಲಾಧಿಕಾರಿ ವೆಂಕಟ್ ರಾಜ್ ಅವರು ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಅಮೃತ ನಗರೋತ್ಥಾನ ಯೋಜನಾ ಕಾಮಗಾರಿಯನ್ನು ಶನಿವಾರ ಪರಿಶೀಲಿಸಿದರು. ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಯವರ ಅಮೃತ ನಗರೋತ್ಥಾನ ಯೋಜನೆಯಡಿಯಲ್ಲಿ ಅನುಷ್ಠಾನಗೊಂಡಿರುವ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ ವೆಂಕಟ್ ರಾಜ್ ಅವರು ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳ ಹಾಗೂ ಪಿಎಂಸಿ ಅವರ ಜೊತೆ ಸ್ಥಳ ಪರಿಶೀಲಿಸಿದರು.
ನಗರಸಭೆ ವ್ಯಾಪ್ತಿಯಲ್ಲಿ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂಭಾಗ ರಾಜಕಾಲುವೆಗೆ ನಿರ್ಮಿಸಲಾದ ಮಳೆ ನೀರು ಚರಂಡಿ, ವಾರ್ಡ್ ನಂ ೧ ರ ಆನಂದ್ ಮನೆಯಿಂದ ಸುಮತ್ ಮನೆ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ವಾರ್ಡ್ ನಂ.೫ ರಲ್ಲಿ ಆಟೋ ಯಲ್ಲಪ್ಪ ಮನೆಯಿಂದ ಕಸ್ತೂರಿ ಮನೆ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದರು ಹಾಗೂ ಸ್ಥಳದಲ್ಲಿಯೇ ಕೋರ್ ಕಟ್ಟಿಂಗ್ ಮಾಡಿಸಿ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿದರು. ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಎಚ್ಚರಿಕೆವಹಿಸಿ ಕಾಮಗಾರಿ ನಿರ್ವಹಿಸುವಂತೆ ಕಾಮಗಾರಿಗಳ ಉಸ್ತುವಾರಿ ಹೊತ್ತಿರುವ ಕಾರ್ಯಪಾಲಕ ಅಭಿಯಂತರರು ಮತ್ತು ಪಿ.ಎಂ.ಸಿರವರಿಗೆ ನಿರ್ದೇಶನ ನೀಡಿದರು.
ಈ ಸಂದರ್ಭ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಬಸಪ್ಪ, ಕಾರ್ಯಪಾಲಕ ಅಭಿಯಂತರರಾದ ಶಿವಪ್ರಕಾಶ್ ಕುಮಾರ್, ಪೌರಾಯುಕ್ತರಾದ ವಿಜಯ, ಸಹಾಯಕ ಕಾರ್ಯಪಾಲಕ ಅಭಿಯಂತರರು (ಪ್ರಭಾರ) ಹೇಮಕುಮಾರ್ ಮತ್ತು ಸಹಾಯಕ ಅಭಿಯಂತರಾದ ರಂಗರಾಮ್ ಇತರರು ಇದ್ದರು.