ತುಮಕೂರು:ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ತುಮಕೂರು ತಾಲೂಕಿನ ಬೆಳ್ಳಾವಿಯ ಕಾರದ ಮಠದ ಶ್ರೀ ವೀರ ಬಸವ ಸ್ವಾಮಿಜಿಗೆ ಅಯೋಧ್ಯ ರಾಮ ಮಂದಿರ ಟ್ರಸ್ಟ್ ಕಾರ್ಯದರ್ಶಿಯಿಂದ ಆಹ್ವಾನ ದೊರಕಿದ್ದು ಆಹ್ವಾನದ ಕುರಿತು ಕಾರದ ಮಠದ ಶ್ರೀಗಳು ಪ್ರತಿಕ್ರಿಯಿಸಿದ್ದಾರೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ ಬಂದಿದೆ, ನಾನು ಹೋಗ್ತೇನೆ. ಜನವರಿ 20ರಂದು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುತ್ತಿದ್ದೇನೆ. ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ಬಂದಿರೋದು ಬಹಳ ಸಂತೋಷವನ್ನುಂಟು ಮಾಡಿದೆ.
ಅಂದಿನ ದಿನಮಾನಗಳಲ್ಲಿ ಶ್ರೀರಾಮನ ವಿಚಾರಗಳನ್ನ ಕೇಳಿದ್ದೇವೆ. ಆದರೆ, ಇಂದಿನ ದಿನಮಾನಗಳಲ್ಲಿ ಮನೆ- ಮನೆಗಳಲ್ಲೂ ಶ್ರೀ ರಾಮನ ಮಂತ್ರ ಪಠಣೆ ಆಗ್ತಿದೆ. ಶ್ರೀರಾಮ ಭಾರತದ ಭೂಮಿಯನ್ನು ಪವಿತ್ರ ಮಾಡಿದ ಒಂದೆರಡು ಕಥೆಗಳನ್ನು ನಾವು ಕೇಳಿದ್ದೇವೆ. ಶ್ರೀರಾಮ ಹೇಳ್ತಾನೆ, ತಮ್ಮ ಲಕ್ಷ್ಮಣ ಬಂಗಾರದ ಬಗ್ಗೆ ಚಿಂತೆ ಬೇಡ. ನಮ್ಮ ಮಣ್ಣಿನ ಬಗ್ಗೆ ಯೋಚನೆ ಮಾಡು. ನಾವು ಏನೇ ಆದ್ರೂ ಭರತ ಭೂಮಿಯಲ್ಲೇ ಬದುಕಬೇಕು, ಬಾಳಬೇಕು. ಶ್ರೀ ರಾಮನ ಆದರ್ಶಗಳು ನಮಗೆ ದಾರಿದೀಪವಾಗಬೇಕು.
ಪ್ರಧಾನಿ ಮೋದಿ ರಾಮ ಮಂದಿರ ಉದ್ಘಾಟನೆ ಮಾಡುತ್ತಿರುವುದನ್ನು ಕೆಲವರು ವಿರೋಧಿಸುತ್ತಾರೆ. ಈ ರೀತಿಯ ವಿರೋಧ ಸರಿಯಲ್ಲ. ರಾಮ ಮಂದಿರ ಉದ್ಘಾಟನೆಯಿಂದ ಯಾವುದೋ ಒಂದು ಪಕ್ಷ ಲಾಭ ಪಡೆಯುತ್ತದೆ ಅನ್ನೋದು ನಾನು ಒಪ್ಪಲ್ಲ. ನಮ್ಮೂರಿನ ದೇವಸ್ಥಾನ, ಮಠದ ಉದ್ಘಾಟನೆಗೆ ರಾಜಕಾರಣಿಗಳನ್ನು ಕರೆಯುತ್ತೇವೆ. ಹಾಗಂತ ಅವರು ಅದರ ಲಾಭ ಪಡೆಯುತ್ತಾರೆ ಎಂದು ಅರ್ಥ ಅಲ್ಲ. ನಾವು ಆ ರಾಜಕಾರಣಿಗಳಿಗೆ ಗೌರವ ಕೊಟ್ಟು ಆಹ್ವಾನ ನೀಡುತ್ತೇವೆ ಅಷ್ಟೇ ಎಂದು ಹೇಳಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವು ಗಮನಾರ್ಹ ಸಾಧನೆಯಾಗಿದೆ. ಭಾರತದ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯತೆಯನ್ನು ಪ್ರದರ್ಶಿಸದೆ ಏಕತೆಯ ಸಂಕೇತವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಸ್ವಾಮೀಜಿ ಪ್ರಶಂಸೆ ವ್ಯಕ್ತಪಡಿಸಿದರು.
ರಾಮ ಮಂದಿರ ದೇವಾಲಯ ಪೂರ್ಣಗೊಂಡಿರುವುದು ಒಂದು ಐತಿಹಾಸಿಕ ಮೈಲುಗಲ್ಲು ಆಗಿದೆ. ರಾಮ ಮಂದಿರದ ವಾಸ್ತುಶಿಲ್ಪದ ವಿನ್ಯಾಸವು ಸಾಂಪ್ರದಾಯಕ ಹಾಗೂ ಆಧುನಿಕತೆಯ ಮಿಶ್ರಣಗೊಂಡಿರುವುದು ಖುಷಿ ತಂದಿದೆ ಎಂದು ಶ್ರೀಗಳು ಹರ್ಷ ವ್ಯಕ್ತಪಡಿಸಿದರು.