ಮದ್ದೂರು: ಆಧುನಿಕ ಯುಗದಲ್ಲು ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಒದಗಿಸುವ ವಿಷಯದಲ್ಲಿ ಕೆಲ ಪೋಷಕರುಗಳು ತಾರತಮ್ಯ ನಡೆಸುತ್ತಿರುವ ಪರಿಣಾಮವಾಗಿ ಮಹಿಳೆಯರು ಶಿಕ್ಷಣ ಸೌಲಭ್ಯಗಳಿಂದ ವಂಚಿತರಾಗುತ್ತಿರುವುದು ವಿಷಾದನೀಯ ಸಂಗತಿ ಎಂದು ಹಿರಿಯ ವಿದ್ಯಾರ್ಥಿನಿ, ಮಹಿಳಾ ಉದ್ಯಮಿ ಎಂ.ಎಂ. ಸುಶೀಲಾದೇವಿ ಸತೀಶ್ಚಂದ್ರ ತಿಳಿಸಿದರು.
ಪಟ್ಟಣದ ಎಂ.ಹೆಚ್. ಚನ್ನೇಗೌಡ ವಿದ್ಯಾಸಂಸ್ಥೆಯ, ಕಮಲಾ ನೆಹರು ಬಾಲಿಕಾ ಪ್ರೌಢಶಾಲೆಯ 57ವರ್ಷ ತುಂಬಿದ ನೆನಪಿಗಾಗಿ ಆಯೋಜಿಸಿದ್ದ ‘ಪುನರ್ ಸಮ್ಮಿಲನ’ ಕಾರ್ಯಕ್ರಮವನ್ನ ಉದ್ಘಾಟಿಸಿ ಅವರು ಮಾತನಾಡಿದರು.
ಆರ್ಥಿಕ ಸ್ವಾವಲಂಭನೆ, ಸ್ವತಂತ್ರ್ಯ, ಜ್ಞಾನ, ಸೇರಿದಂತೆ ಜೀವನದ ವಿವಿಧ ಅಂಶಗಳನ್ನು ಸುಧಾರಿಸಲು ಮತ್ತು ಮಹೋನ್ನತ ಗುರಿ ಸಾಧಿಸಲು ಶಿಕ್ಷಣ ಅತ್ಯವಶ್ಯಕತೆ ಇದ್ದು ಪ್ರತಿ ಮಹಿಳೆಯು ಉತ್ತಮವಾದ ಶಿಕ್ಷಣವನ್ನ ಪಡೆದು ಸಮಾಜದಲ್ಲಿ ಸ್ವಾವಲಂಭಿಗಳಾಗಿ ಬದುಕಬೇಕು ಎಂದು ಹೇಳಿದ ಅವರು ಪ್ರಸ್ತುತ ದಿನಗಳಲ್ಲಿ ಮಹಿಳೆಯರಿಗೆ ಶಿಕ್ಷಣವನ್ನು ಒದಗಿಸುವ ವಿಷಯದಲ್ಲಿ ಹಲವಾರು ಚರ್ಚೆಗಳು ನಡೆಯುತ್ತಿರುವುದು ವಿಷಾದನೀಯ ಎಂದು ಅವರು ಹೇಳಿದರು.

ಆರ್ಥಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಪಾಲ್ಗೊಳ್ಳುವ ಮತ್ತು ಉತ್ತೇಜಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದ್ದು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶಿಕ್ಷಣ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆಂದರು.
ಹೆಣ್ಣನ್ನು ಪೂಜಿಸುವ, ಗೌರವಿಸುವ ಕಾಲಮಾನಸಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ನಡೆದ ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ, ಇನ್ನಿತರೆ ಪ್ರಕರಣಗಳು ಸೇರಿದಂತೆ ಮಹಿಳೆಯರ ಮೇಲೆ, ನಡೆಯುತ್ತಿರುವ ದೌರ್ಜನ್ಯ ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದ್ದು ಸಮಾಜದಲ್ಲಿ ಇಂತಹ ಕೃತ್ಯಗಳು ಪ್ರತಿ ದಿನ ನಡೆಯುತ್ತಿರುವುದು ಬೇಸರದ ಸಂಗತಿ ಎಂದರು.
ಸಮಾಜದಲ್ಲಿ ನಡೆಯುತ್ತಿರುವ ಹಲವಾರು ಕೃತ್ಯಗಳನ್ನು ಮಾಧ್ಯಮಗಳಲ್ಲಿ ವೈಭವೀಕರಿಸುತ್ತಿರುವುದು ಮತ್ತಷ್ಟು ಅಪರಾಧಗಳಿಗೆ ಉತ್ತೇಜನ ನೀಡುವಂತಾಗಿದ್ದು ಇಂತಹ ವಿಷಯಗಳನ್ನು ವೈಭವೀಕರಿಸುವ ಬದಲು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಂಡಾಗ ಸಮಾಜದಲ್ಲಿ ಗಣನೀಯವಾಗಿ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕಿ ಹಾಗೂ ಹಿರಿಯ ವಿದ್ಯಾರ್ಥಿ ಕಲ್ಪನಾಸಿದ್ದರಾಜು ಮಾತನಾಡಿ ಎಂ.ಹೆಚ್. ಚನ್ನೇಗೌಡ ವಿದ್ಯಾಸಂಸ್ಥೆ ಕಳೆದ ಹಲವಾರು ವರ್ಷಗಳಿಂದಲೂ ಗ್ರಾಮೀಣ ಭಾಗದ ಜನರಿಗೆ ಅಕ್ಷರ ದಾಸೋಹವನ್ನು ಉಣಬಡಿಸಿದ ಪರಿಣಾಮವಾಗಿ ಮಹಿಳೆಯರು ಹಲವಾರು ಉನ್ನತ ಹುದ್ದೆಗಳನ್ನು ಅಲಂಕರಿಸಿ ಸ್ವಾವಲಂಭಿ ಬದಕು ನಡೆಸಲು ಸಾಧ್ಯವಾಯಿತ್ತೆಂದು ಬಣ್ಣಿಸಿದರು.
ಶಿಶು ವಿಹಾರದಿಂದ ಪದವಿ ಶಿಕ್ಷಣದ ವರೆವಿಗೂ ಒಂದೇ ಸೂರಿನಲ್ಲಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಶಿಕ್ಷಣ ಒದಗಿಸುತ್ತಿರುವ ಸಂಸ್ಥೆಯ ಕಾರ್ಯ ಅನನ್ಯವಾಗಿದ್ದು ಪಠ್ಯ ಚಟುವಟಿಕೆಗಳ ಜೊತೆಯಲ್ಲಿಯೇ ಪಠ್ಯೇತರ ಚಟುವಟಿಕೆಗಳಲ್ಲೂ ಮಕ್ಕಳು ಪಾಲ್ಗೊಂಡು ಉತ್ತಮ ಸಾಧನೆ ಮಾಡುವ ಮೂಲಕ ತಾಲೂಕಿಗೆ ಮಾದರಿಯಾಗಿದ್ದನ್ನು ಸ್ಮರಿಸಿದರು.
ಹಿರಿಯ ವಿದ್ಯಾರ್ಥಿಗಳಾದ ನಿವೃತ್ತ ಪ್ರಾಧ್ಯಾಪಕಿ ಶ್ರೀಲತಾ, ಎಂ. ಶಾಂತ, ಆರ್. ಸೌಮ್ಯಶ್ರೀ, ಲಕ್ಷ್ಮಿ ಮೋಹನ್ ಇನ್ನಿತರೆ ವಿದ್ಯಾರ್ಥಿಗಳು ಶಾಲೆಯಲ್ಲಿ ವ್ಯಾಸಂಗ ಮಾಡಿದ ಮತ್ತು ತಮಗೆ ಶಿಕ್ಷಣ ನೀಡಿದ ಗುರುಗಳ ಸಾಧನೆಯನ್ನು ಮೆಲುಕು ಹಾಕಿ ಕೀರ್ತಿಶೇಷ ಗುರುವೃಂದಕ್ಕೆ ನುಡಿನಮನ ಸಲ್ಲಿಸಿದರು.

ಅಭಿನಂದನೆ :
ಸುಮಾರು 57ವರ್ಷದ ಹಿಂದಿನ ವಿದ್ಯಾರ್ಥಿನಿಯರು ಸೇರಿದಂತೆ 500ಕ್ಕೂ ಹೆಚ್ಚು ಹಿರಿಯ ವಿದ್ಯಾರ್ಥಿಗಳು ಪುನರ್ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಮಲಾ ನೆಹರು ಬಾಲಿಕಾ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಶಿಕ್ಷಕರು, ಬೋಧಕೇತರರನ್ನು ಹಿರಿಯ ವಿದ್ಯಾರ್ಥಿಗಳು ಮತ್ತು ಸಂಸ್ಥೆ ವತಿಯಿಂದ ಅಭಿನಂದಿಸಿ ಗೌರವಿಸಿ ಅಭಿನಂದಿಸಿದರಲ್ಲದೇ ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡು ಗಣನೀಯವಾಗಿ ಮಾತುಕತೆಯಲ್ಲಿ ತೊಡಗಿಕೊಂಡದ್ದು ಜೊತೆ ಜೊತೆಯಲ್ಲೇ ಭೋಜನ ಸವಿದುದ್ದು ಗಮನಸೆಳೆಯಿತು.
ಈ ವೇಳೆ ಎಂ.ಹೆಚ್. ಚನ್ನೇಗೌಡ ವಿದ್ಯಾಸಂಸ್ಥೆಯ ಗೌರವಾಧ್ಯಕ್ಷ ಕೆ.ಟಿ. ಚಂದು, ಶಾಂತಚಂದು, ಅಧ್ಯಕ್ಷ ಎಂ.ಸ್ವರೂಪ್ಚಂದು, ಕಾರ್ಯದರ್ಶಿ ಸಿ. ಅಪೂರ್ವಚಂದು, ಪುರಸಭೆ ಸದಸ್ಯರಾದ ಬಿ.ಸಿ. ಸರ್ವಮಂಗಳ, ವನಿತಾ, ಕೋಕಿಲ, ಹಿರಿಯ ವಿದ್ಯಾರ್ಥಿಗಳು ಮಮತಾನಾಗ್, ಶಾಂತರಾಮೇಗೌಡ, ಆರ್.ಸೌಮ್ಯಶ್ರೀಹರ್ಷ, ಪ್ರಾಂಶುಪಾಲ ಯು.ಎಸ್. ಶಿವಕುಮಾರ್, ಉಪ ಪ್ರಾಂಶುಪಾಲ ಪ್ರೊ.ಪ್ರಕಾಶ್, ಮುಖ್ಯಶಿಕ್ಷಕರಾದ ಎನ್.ಕೃಷ್ಣ, ಎಂ.ಟಿ.ಚಂದ್ರಶೇಖರ್, ವರದರಾಜು, ಶಿಕ್ಷಕರಾದ ಎಂ.ಜೆ.ಅಶ್ವಿನಿ, ಎಂ.ಎಂ. ಕೀರ್ತಿ ಕುಮಾರಿ,ಸುಬ್ರಮಣ್ಯ, ಗಜಾನಂದ, ಪದ್ಮನಾಭ್ ಸೇರಿದಂತೆ ಇತರರಿದ್ದರು.
