ಮೈಸೂರು: ಶ್ರೀ ಲಲಿತಾ ಸಹಸ್ರನಾಮ ಪಾರಾಯಣ ಮಾನವನ ಅನಂತ ಶಕ್ತಿಯನ್ನು ಹೆಚ್ಚಿಸುತ್ತದೆ. ಪಾರಾಯಣದಿಂದ ಮನಸ್ಸು ನಿರ್ಮಲವಾಗಿ, ಧರ್ಮ ಮಾರ್ಗದಲ್ಲಿ ಸಾಗಲು ಸಾಧ್ಯವಾಗುತ್ತದೆ. ಭಕ್ತಿ ಮತ್ತು ಶ್ರದ್ಧೆಯಿಂದ ಧರ್ಮ ಆಚರಣೆ ಮಾಡಬೇಕು. ಭಾರತೀಯರಿಗೆ ಧರ್ಮ ಶ್ರದ್ಧೆ ಅಪಾರ. ಸಾವಿರಾರು ವರ್ಷಗಳ ಕಾಲ ನಿರಂತರವಾಗಿ ಭಾರತದ ಧರ್ಮದ ಮೇಲೆ ಆಕ್ರಮಣ ನಡೆದರೂ ಧರ್ಮ ಉಳಿದಿದೆ ಎಂದು ದತ್ತ ಪೀಠದ ಶ್ರೀ ಶ್ರೀ ವಿಜಯಾನಂದ ತೀರ್ಥ ಸ್ವಾಮೀಜಿ ರವರು ತಿಳಿಸಿದರು.
ಅವರು ಕುವೆಂಪುನಗರದ ಗಾನ ಭಾರತಿ ಸಭಾಂಗಣದಲ್ಲಿ ಬೆಂಗಳೂರಿನ ಅಂತರ್ ಮನ ಆಯೋಜಿಸಿದ್ದ ವಿಶ್ವ ಅಭ್ಯುದಯಕ್ಕಾಗಿ ಲಲಿತಾ ಸಹಸ್ರನಾಮ ಸಾಮೂಹಿಕ ಪಾರಾಯಣದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಭಗವಂತನ ನಾಮ ಸ್ಮರಣೆ ಎಲ್ಲ ಜನರಿಗೆ ಶಕ್ತಿ ತುಂಬುತ್ತದೆ. ಭಗವಂತನ ಎಲ್ಲಾ ಸ್ತೋತ್ರಗಳನ್ನು ಸರ್ವ ರೂ ಪಾರಾಯಣ ಮಾಡಬೇಕು . ಧರ್ಮ ಮತ್ತಷ್ಟು ಸದೃಢವಾಗುತ್ತದೆ. ಭಗವಂತನ ಅನುಗ್ರಹ ಸರ್ವರಿಗೂ ಸಿಗಲಿದೆ. ಭಗವಂತನ ನಾಮಸ್ಮರಣೆಯಿಂದ ಮಾನವ ಜನ್ಮ ಸಾರ್ಥಕವಾಗುತ್ತದೆ. ತಾಯಿ ಲಲಿತಾ ಸಹಸ್ರನಾಮ ಪಾರಾಯಣವು ಮಾತೃ ಸ್ವರೂಪಿಯಾಗಿದ್ದು ತ್ರಿಮೂರ್ತಿ ತತ್ವವನ್ನು ಒಳಗೊಂಡಿದೆ.
ಲಲಿತಾ ಸಹಸ್ರನಾಮ ಪಾರಾಯಣ ಸರ್ವರಿಗೂ ಎಲ್ಲವನ್ನು ನೀಡುವ ಮಹತ್ತರವಾದ ಸ್ತೋತ್ರವಾಗಿದೆ ಜ್ಞಾನ ಶಕ್ತಿ ,ಕ್ರಿಯಾಶಕ್ತಿ ,ಇಚ್ಛಾ ಶಕ್ತಿ ಹಾಗೂ ಸಂವಹನ ಶಕ್ತಿಯನ್ನು ಮತ್ತಷ್ಟು ದೃಢಗೊಳಿಸುತ್ತದೆ. ಅಂತಃ ಸ್ವರೂಪಿಣಿ, ಜ್ಞಾನ ಸ್ವರೂಪದ ತಾಯಿ ವರ್ಣನೆ ಮಾತ್ರದಿಂದಲೇ ಶಕ್ತಿ ಹೆಚ್ಚಿ ಮಾನವ ಆನಂದ ಪರಮಾನಂದದಲ್ಲಿ ಇರಲು ಸಾಧ್ಯವಾಗುತ್ತದೆ. ಅಂತರ್ಮನ ಒಳ್ಳೆಯ ಕಾರ್ಯವನ್ನು ನಡೆಸುತ್ತಿದೆ. ಸ್ತೋತ್ರಗಳ ಪಾರಾಯಣ ಮಹಿಳೆಯರಿಗೆ ಮಾತ್ರ ಸೀಮಿತವಾಗದೆ ಎಲ್ಲಾ ಪುರುಷರು ಸಹಿತ ಮಕ್ಕಳು ಮಹಿಳೆಯರು ಸರ್ವರು ಪಠಣ ಮಾಡಬೇಕು .ಲಲಿತಾ ಸಹಸ್ರನಾಮ ಪಾರಾಯಣ ಜಾಗೃತಿಯ ಕಾರ್ಯವನ್ನು ಅಂತರ್ ಮನ ಮತ್ತಷ್ಟು ಸದೃಢಗೊಳಿಸಲು ತಿಳಿಸಿ, ಸದಾ ಕಾಲ ದತ್ತ ಪೀಠದ ಆಶೀರ್ವಾದ ಇರಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಲೇಜು ಶಿಕ್ಷಣ ಇಲಾಖೆಯ ವಿಶ್ರಾಂತ ನಿರ್ದೇಶಕರಾದ ಟಿ ಎನ್ ಪ್ರಭಾಕರ್ ಮಾತನಾಡಿ ಭಾರತೀಯ ಮಹಾ ಕಾವ್ಯಗಳು, ಭಗವದ್ಗೀತೆ, ಉಪನಿಷತ್ತು , ಸ್ತೋತ್ರಗಳು ಇಂದಿಗೂ ಬಹಳ ಶಾಶ್ವತ ಸ್ಥಾನದಲ್ಲಿ ಇದೆ.ಪ್ರತಿ ಮನ ಮನ ದಲ್ಲು ಉಳಿಸಿ ಬೆಳೆಸುವ ಕಾರ್ಯವನ್ನು ಅಂತರ್ ಮನ ತಂಡ ನಿರ್ವಹಿಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಶಾಸಕರಾದ ಟಿ ಎಸ್ ಶ್ರೀವತ್ಸ ಮಾತನಾಡಿ ದೇಶಕ್ಕೆ ಸಂಸ್ಕೃತಿ, ಪರಂಪರೆಯ ಆಧಾರ ಶಕ್ತಿ ಮಹಿಳೆಯರು. ಲಲಿತಾ ಸಹಸ್ರನಾಮ ಪಾರಾಯಣ ಮೂಲಕ ಯುವ ಜನತೆಯ ಆಶಯ ವಾಗಿ ಬೆಳೆಸಬೇಕು. ಸಾವಿರಾರು ವರ್ಷಗಳ ಹೋರಾಟದ ಫಲವಾಗಿ ಶ್ರೀ ರಾಮ ಮಂದಿರ ಉದ್ಘಾಟನೆ ಆಗುತ್ತಿರುವುದು ಧನ್ಯತೆಯ ಭಾವವನ್ನು ತಂದಿದೆ. ದೇಶದ ಜನರು ಎಂತಹ ಕಷ್ಟದಲ್ಲು ಧರ್ಮವನ್ನು ಕಾಪಾಡುತ್ತಾರೆ. ಪಾರಾಯಣ ಕಾರ್ಯಕ್ರಮಕ್ಕೆ ಸೇರಿರುವ ಮಹಿಳಾ ಶಕ್ತಿ ನೋಡಿದರೆ ಧರ್ಮ ಸದಾ ಕಾಲ ನಿರಂತರವಾಗಿ ಉಳಿಯಲಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಅಂತರ್ ಮನದ ಸಂಸ್ಥಾಪಕರು ಲಲಿತ ಉಪಾಸಕರಾದ ಡಾ.ವಿಮಲಾ ಗೋಪಾಲ್ ರವರು ವಹಿಸಿ ಮಾತನಾಡುತ್ತ ಲಲಿತಾ ಸಹಸ್ರನಾಮ ಪಾರಾಯಣದ ಶಕ್ತಿ ಮಾತೃ ಶಕ್ತಿಯ ಅನಂತತೆಯ ಪ್ರತೀಕವಾಗಿದೆ . ಭಗವಂತನ ನಾಮದ ಸ್ಮರಣೆಯನ್ನು ಶುದ್ಧ ಭಕ್ತಿ ಭಾವದಿಂದ ಪಠಿಸಿದಾಗ ಆತ್ಮದ ಉನ್ನತಿ ಸಾಧ್ಯವಾಗುತ್ತದೆ. ಕಷ್ಟಕಾರ್ಪಣ್ಯಗಳು, ಸಮಸ್ಯೆಗಳು ದೂರವಾಗುತ್ತವೆ. ಮನಸ್ಸಿಗೆ ಪ್ರಸನ್ನತೆಯನ್ನು ಉಂಟುಮಾಡುತ್ತದೆ. ಲಲಿತಾಪಾರಾಯಣವನ್ನು ಇಡೀ ಕುಟುಂಬದ ಸದಸ್ಯರು ಕೂಡಿ ಮನೆಗಳಲ್ಲೂ ಪಠಿಸಬೇಕು ಎಂದು ತಿಳಿಸಿ ಅಂತರ್ ಮನ ರಾಜ್ಯದ ಎಲ್ಲಾ ಕಡೆ ಲಲಿತಾಸಹಸ್ರನಾಮ ಪಾರಾಯಣದ ಕಲಿಕೆಗೆ ಸಹಕಾರ ನೀಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ಅರಮನೆ ಮಂಡಳಿಯ ಉಪನಿರ್ದೇಶಕರಾದ ಟಿ ಎಸ್ ಸುಬ್ರಹ್ಮಣ್ಯ , ಸಮಾಜ ಸೇವಕರಾದ ನo . ಶ್ರೀಕಂಠಕುಮಾರ್. ಜೈ ಹಿಂದ್ ಪ್ರತಿಷ್ಠಾನದ ಸುರೇಶ್ ಎನ್ ಋಗ್ವೇದಿ, ಅಂತರ್ ಮನದ ನಾಗಶ್ರೀ, ರಮ್ಯ, ಸತ್ಯವತಿ, ವಿಜಯಲಕ್ಷ್ಮಿ, ಕುಸುಮ ಋಗ್ವೇದಿ, ಪ್ರತೀಕ್ ಇದ್ದರು.