ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಬಡವರ ಮನೆಯ ಹೆಣ್ಣು ಮಕ್ಕಳಿಗೆ ಸೀಮಂತ ಸೌಕರ್ಯ ಸಿಗುವುದು ಕನಸಿನ ಮಾತು. ಆದರೆ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸೀಮಂತ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಬನ್ನಿ ಎಂಬ ಸಂದೇಶದಿಂದ ನೆರದಿದ್ದ ಗರ್ಭಿಣಿಯರ ಮೊಗದಲ್ಲಿ ಉಲ್ಲಾಸದ ನಗು ಮಿಂಚಿತು.
ಹೌದು! -ಇದು ಆಶ್ಚರ್ಯವಾದರೂ ಸತ್ಯ. ಮಂಗಳವಾರ ಪಟ್ಟಣದ ತಾಲೂಕು ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕ ಆಸ್ಪತ್ರೆ ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸೀಮಂತ ಕಾಯಕ್ರಮ ಗರ್ಭಿಣಿಯರ ಮೊಗದಲ್ಲಿ ಉಲ್ಲಾಸದ ನಗು ಮಿಂಚಿಸಿತು.
ಸರ್ಕಾರ ವಿಶೇಷವಾಗಿ ಕಾಳಜಿ ವಹಿಸಿ ಆರೋಗ್ಯ ಇಲಾಖೆ ಮೂಲಕ ಸಾಮೂಹಿಕವಾಗಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಯೋಜನೆ ಜಾರಿಗೆ ತಂದಿದ್ದು, ಇದರ ಮೂಲಕ ಬಿಪಿಎಲ್ ಪಡಿತರ ಚೀಟಿಗಿಂತ ಕೆಳಗಿನ ಬಡ ಕುಟುಂಬದ ಗರ್ಭಿಣಿಯರ ಬದುಕಿಗೆ ಒಂದಿಷ್ಟು ಆತ್ಮವಿಶ್ವಾಸ, ಎಲ್ಲಾ ಮಹಿಳೆಯರ ರೀತಿಯಲ್ಲಿ ತಮಗೂ ಗಂಡ, ತವರು ಮನೆಯಲ್ಲಿ ಸಿಗುವ ಸೀಮಂತದ ಭಾಗ್ಯ ಸಾರ್ವಜನಿಕವಾಗಿ ದೊರೆಯುತ್ತಿದೆ ಎಂಬ ಉತ್ತೇಜನಕಾರಿ ಅಂಶ 40 ಮಂದಿ ಗರ್ಭಿಣಿ ಮಹಿಳೆಯರಲ್ಲಿ ಕಂಡುಬಂತು.
ಸೀಮಂತ ಭಾಗ್ಯ ಪಡೆದ 40 ಮಂದಿಗೆ ಅರಿಷಿಣ, ಕುಂಕುಮ, ಹೂವು, ಹಣ್ಣು,ಬಳೆ, ತಾಂಬೂಲದಿಂದ ಮಡಿಲು ತುಂಬಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು, ಪ್ರಸೂತಿ ತಜ್ಞರು, ಮಕ್ಜಳ ತಜ್ಞರು, ಆಸ್ಪತ್ರೆ ಸಿಬ್ಬಂದಿಗಳು ಆರೋಗ್ಯಯುತ ಮಗುವಿನ ಜನನದೊಂದಿಗೆ, ಉತ್ತಮ ಬದುಕು ನಡೆಸಿ ಎಂದು ಶುಭ ಹಾರೈಸಿದರು.
ಇದಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು
ಮಾತನಾಡಿ ಮಹಿಳೆಯರು ತರಕಾರಿ, ಹಣ್ಣು ಮತ್ತಿತರೆ ಪೌಷ್ಟಿಕ ಆಹಾರ ಸೇವಿಸಬೇಕು. ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸದೆ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಉತ್ತಮ ಆರೋಗ್ಯ ಹೊಂದಲು ಪೌಷ್ಟಿಕಾಂಶದ ಆಹಾರವನ್ನು ಮನೆಯಲ್ಲಿಯೆ ತಯಾರಿಸಿ ಸೇವಿಸಬೇಕು. ಪ್ರತಿ ವರ್ಷ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.
ಮಹಿಳೆಯರು ಮತ್ತು ಗರ್ಭಿಣಿಯರ ಅನುಕೂಲಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ರಾಷ್ಟ್ರೀಯ ಪೋಷಣಾ ಮಾಸಾಚರಣೆ ಹಮ್ಮಿಕೊಂಡಿದೆ. ಆರೋಗ್ಯ ಸಮಸ್ಯೆಯಿಂದ ಯಾವುದೆ ಗರ್ಭಿಣಿ, ತಾಯಂದಿರು ಮತ್ತು ಶಿಶು ಮರಣ ಆಗದಂತೆ ವಿಶೇಷ ಕಾರ್ಯಕ್ರಮ ಹಾಕಿಕೊಂಡಿದೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ನೀವು ಹೆಚ್.ಐ.ವಿ ಸೋಂಕಿತರೆಂದು ತಿಳಿದು ಗಾಬರಿಯಾಗಬೇಡಿ, ಐಸಿಟಿಸಿಯಲ್ಲಿ ಆಪ್ತ ಸಮಾಲೋಚಕರಿಂದ ಸೂಕ್ತ ಸಲಹೆ ಪಡೆಯಿರಿ,ನಿಮಗೆ ಸಂಶಯಗಳು ಇದ್ದರೆ ಆಪ್ತ ಸಮಾಲೋಚಕರ ಸಲಹೆಗಳನ್ನು ತಪ್ಪದೆ ಪಾಲಿಸಿ, ಹತ್ತಿರದ ಎ.ಆರ್.ಟಿ ಕೇಂದ್ರದಲ್ಲಿ ನೊಂದಾಯಿಸಿಕೊಳ್ಳಿ. ವೈದ್ಯರ ಸಲಹೆಯಂತೆ ಎ.ಆರ್.ಟಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ವೈದ್ಯರ ಸಲಹೆ ತಪ್ಪದೆ ಪಾಲಿಸಿದರೆ ಮಗುವಿಗೆ ಹೆಚ್.ಐ.ವಿ ಸೋಂಕು ಬರದಂತೆ ಕಾಪಾಡ ಬಹುದು, ಹೆರಿಗೆಯನ್ನು ತಪ್ಪದೆ ಸರ್ಕಾರಿ ಆಸ್ಪತ್ರೆಯಲ್ಲೇ ಮಾಡಿಸಿಕೊಳ್ಳಿ. ಹೆರಿಗೆ ಸಮಯದಲ್ಲಿ ತಾಯಿ ಎ.ಆರ್.ಟಿ. ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರಬೇಕು ಮತ್ತು ಮಗುವಿಗೆ ನೆವಿರೆಪಿನ್ ಸಿರಪ್ ಅನ್ನು ಹುಟ್ಟಿದ ದಿನದಿಂದ 6 ವಾರದವರೆಗೆ ಕೊಡಬೇಕು.
ಮಗುವಿಗೆ 6 ತಿಂಗಳವರೆಗೂ ಎದೆಹಾಲು ಮಾತ್ರ ಕೊಡಬೇಕು ನಂತರ ಮನೆಯಲ್ಲೆ ತಯಾರಾದ ಮೃದು ಆಹಾರ ಪದಾರ್ಥವನ್ನು ತಾಯಿಯ ಹಾಲಿನ ಜೊತೆ ಕೊಡಬೇಕು ಹೆಚ್.ಐ.ವಿ ರೋಗದಿಂದ ಬಳಲುತ್ತಿರುವವರು ಯಾವುದೇ ಕಾರಣಕ್ಕೂ ಗಾಬರಿಯಾಗ ಬೇಡಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯಿರಿ, ಅವಳಿ ತಾಲ್ಲೂಕಿನಲ್ಲಿ 2003 ನೇ ಸಾಲಿನಿಂದ 2023 ನೇ ಸಾಲಿನವರೆಗೆ 20 ವರ್ಷಗಳಲ್ಲಿ 554 ಮಂದಿಗೆ ಹೆಚ್.ಐ.ವಿ. ಬಂದಿದ್ದು ಇದರಲ್ಲಿ 24 ಮಂದಿ ಮಾತ್ರ ಸರಿಯಾದ ಚಿಕಿತ್ಸೆ ಪಡೆಯದೇ ಮರಣ ಹೊಂದಿದ್ದಾರೆ ಎಂದು ಮಾಹಿತಿ ನೀಡಿದರು.
ಸೀಮಂತ ಕಾರ್ಯಕ್ರಮದಲ್ಲಿ ಮುಸ್ಲಿಂ ಧರ್ಮದ ಗರ್ಭಿಣಿಯೊಬ್ಬರು ಭಾಗಿಯಾಗಿದ್ದು ವಿಶೇವಾಗಿತ್ತು. ಕಾರ್ಯಕ್ರಮದಲ್ಲಿ ಎಲ್ಲರಂತೆ ಮಡಿಲು ತುಂಬಿಸಿಕೊಂಡು, ಕೋಮು ಸೌಹಾರ್ದತೆ ಮೆರೆದಿದ್ದು ವಿಶೇಷವಾಗಿತ್ತು. ಮುಸ್ಲಿಂ ಧರ್ಮದ ಗರ್ಭಿಣಿ ಮಹಿಳೆಗೂ ಇತರೆ ಮಹಿಳೆಯರು ಪರಸ್ಪರ ಶುಭಕೋರಿದ್ದು ಕಂಡುಬಂತು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಗೋಪಿನಾಥ್, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ನವೀನ್, ತಜ್ಞ ವೈದ್ಯ ಡಾ.ಶಿವಶಂಕರ್, ಮಕ್ಕಳ ತಜ್ಞರಾದ ಡಾ.ಚಂದ್ರಶೇಖರ್, ಡಾ.ಹೇಮ, ಪ್ರಸೂತಿ ತಜ್ಞ ಡಾ.ದರ್ಶನ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ವಿ.ರಮೇಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸಿ.ಎಂ.ರೇಖಾ, ಸುಮಲತಾ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಸಿಬ್ಬಂದಿಗಳಾದ ಶಾಂತ, ಶಿವಕುಮಾರ್, ಪಾಷ, ಲೀಲಾವತಿ, ಕೆ.ವಿ.ರೇಖಾ, ಪುಟ್ಟರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.
