ಗುಂಡ್ಲುಪೇಟೆ: ತಾಲೂಕಿನ ಭೀಮನಬೀಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತಾಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ನಡೆದ ‘ಗುಳೆ ತಡೆ ವಿಶೇಷ ಜಾಗೃತಿ ಅಭಿಯಾನ’ಕ್ಕೆ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ ಚಾಲನೆ ನೀಡಿದರು.
ಈ ವೇಳೆ ಭೀಮನಬೀಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಭೀಮನಬೀಡು ಮತ್ತು ಹುಲಸಗುಂದಿ ಗ್ರಾಮಗಳ ಪ್ರತಿ ಮನೆಗೂ ಭೇಟಿ ನೀಡಿ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಉದ್ಯೋಗ ಸಿಗುತ್ತಿದೆ. ಆದ್ದರಿಂದ ಗ್ರಾಮೀಣ ಪ್ರದೇಶದ ಜನರು ಕೇರಳ ರಾಜ್ಯಕ್ಕೆ ವಲಸೆ ಹೋಗದೆ ಗ್ರಾಪಂ ವತಿಯಿಂದ ಸಿಗುವ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ ಸಲಹೆ ನೀಡಿದರು.
ಭೀಮನಬೀಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಲವು ಕುಟುಂಬಗಳು ಕೇರಳ ರಾಜ್ಯಕ್ಕೆ ಹಲವು ವರ್ಷಗಳಿಂದಲೂ ವಲಸೆ ಹೋಗುವುದನ್ನು ರೂಢಿಸಿಕೊಂಡಿದ್ದೀರಿ. ಕೂಲಿಗೆ ಹೋಗುವ ವೇಳೆ ಮಕ್ಕಳನ್ನು ಶಾಲೆ ಬಿಡಿಸಿ ಕರೆದೊಯ್ಯುವ ಕಾರಣ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಸ್ಥಳೀಯವಾಗಿ ಸಿಗುವ ಉದ್ಯೋಗ ಮಾಡುವ ಮೂಲಕ ವಲಸೆ ಹೋಗುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಆಟೋ ಮೂಲಕ ಪ್ರಚಾರ ಕೈಗೊಂಡು ಪ್ರತಿ ಮನೆಗೂ ಯೋಜನೆಯ ಮಾಹಿತಿಯನ್ನೊಳಗೊಂಡ ಕರಪತ್ರ ವಿತರಿಸಿ, ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಜೊತೆಗೆ ಉದ್ಯೋಗ ಚೀಟಿ ಹೊಂದಿಲ್ಲದ ೨೬ ಕುಟುಂಬಗಳಿಂದ ಅಗತ್ಯ ಮಾಹಿತಿ ಪಡೆದು ಉದ್ಯೋಗ ಚೀಟಿ ವಿತರಿಸಲು ಹಾಗೂ ಉದ್ಯೋಗದ ಅವಶ್ಯಕತೆ ಹೊಂದಿರುವ ೨೪೬ ಕಾರ್ಮಿಕರಿಂದ ಉದ್ಯೋಗ ಬೇಡಿಕೆ ಪಡೆದು ಉದ್ಯೋಗ ನೀಡಲು ಕ್ರಮ ವಹಿಸಲಾಯಿತು. ಈ ಸಂದರ್ಭ ಬಹುತೇಕ ಕುಟುಂಬಗಳು ನಾವು ಕೇರಳಕ್ಕೆ ಹೋಗುವುದಿಲ್ಲ ಇಲ್ಲಿಯೇ ನರೇಗಾ ಯೋಜನೆಯಡಿ ದುಡಿಯುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ದಿ ಅಧಿಕಾರಿ ಬೋಜೇಶ್, ತಾಲ್ಲೂಕು ಐಇಸಿ ಸಂಯೋಜಕ ಯತೀಶ, ತಾಂತ್ರಿಕ ಸಂಯೋಜಕ ಅನಿಲ್ ಕುಮಾರ್ ಸೇರಿದಂತೆ ತಾಲೂಕಿನ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಗ್ರಾಮ ಕಾಯಕ ಮಿತ್ರ, ಬೇರ್ ಫುಟ್ ಟೆಕ್ನೀಷಿಯನ್ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.