ದಾವಣಗೆರೆ: ಬೀಡಿ ಕಾರ್ಮಿಕರು ಹೀನಾಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದು, ಮಾಲೀಕರಿಂದ ಸಾಕಷ್ಟು ಅನ್ಯಾಯಕ್ಕೊಳಗಾಗುತ್ತಿದ್ದಾರೆ. ಇವರು ತಮ್ಮ ನ್ಯಾಯಯುತ ಜೀವನಕ್ಕಾಗಿ ಸಂಘಟಿತರಾಗುವುದು ಇಂದಿನ ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರು ಹೇಳಿದರು.
ನಗರದ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಸಭಾಂಗಣದಲ್ಲಿ ಭಾರತದ ಮೊದಲ ಶಿಕ್ಷಕಿಯ ಫಾತಿಮಾ ಶೇಖ್-ಸಾವಿತ್ರಿಬಾಯಿ ಪುಲೆ ಜನ್ಮದಿನದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಪುಲೆ ಅವರ ಭಾವಚಿತ್ರವನ್ನು ಉದ್ಘಾಟಿಸಿ ಮಾತಾನಾಡಿ ಅವರು ನಮ್ಮ ಸಂವಿಧಾನದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಸಮಾನ ಅವಕಾಶವನ್ನು ನೀಡಿದೆ. ಬೀಡಿ ಕಾರ್ಮಿಕರ ಮಕ್ಕಳು ಎದುರಿಸುವ ಸಮಸ್ಯೆಗಳು ಹಲವಾರು, ಮಕ್ಕಳು ಆಗಾಗ್ಗೆ ಅಪಾಯಕಾರಿ ಮತ್ತು ಆಶ್ರಯವಿಲ್ಲದೆ ಒರಟು ಜೀವನವನ್ನು ಸಹಿಸಿಕೊಳ್ಳುತ್ತಿದ್ದಾರೆ. ವಯಸ್ಕರು, ಚಿಕ್ಕ ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅವರನ್ನು ಕೆಲಸ ಮಾಡಲು ಬಲವಂತ ಮಾಡುತ್ತಾರೆ, ಭಿಕ್ಷೆ ಬೇಡಿಸುತ್ತಾರೆ ಇದು ಅಪರಾಧವಾಗುತ್ತದೆ. ಅವರು ಮೌಖಿಕವಾಗಿ, ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ನಿಂದನೆಗೆ ಒಳಗಾಗುತ್ತಾರೆ. ಬೀದಿ ಮಕ್ಕಳ ವಿರುದ್ಧ ನಿಂದನೆ ಮತ್ತು ಹಿಂಸಾಚಾರದ ವರದಿಗಳಿವೆ. ಹೆಚ್ಚಿನ ಮಕ್ಕಳಿಗೆ ಗುರುತಿನ ಚೀಟಿಗಳು ಅಥವಾ ಇತರ ದಾಖಲೆಗಳ ಕೊರತೆಯಿದೆ.
ಬೀಡಿ ಕಾರ್ಮಿಕರಿಗೂ ಸೌಲಭ್ಯಗಳಿವೆ, ಆದರೆ ಅಧಿಕೃತವಾಗಿ ನೋಂದಣಿಯಾಗಿರಬೇಕು. ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯೆ ಕಲಿಯಲು ವಿದ್ಯಾರ್ಥಿವೇತನ ಸಿಗುತ್ತದೆ. ಮದುವೆಗೆ ಪ್ರೋತ್ಸಾಹಧನ ಸಿಗುತ್ತದೆ. ಪಿಂಚಣಿ ಬರುತ್ತದೆ, ಆರೋಗ್ಯ ಕೆಟ್ಟರೆ ಇಎಸ್‍ಐ ಸೌಲಭ್ಯ ಇದೆ. ಮರಣ ಹೊಂದಿದರೆ ಪರಿಹಾರಧನ ಸಿಗುತ್ತದೆ. ಆದರೆ ಬೀಡಿ ಕಾರ್ಮಿಕರು ಈ ಸೌಲಭ್ಯಗಳಿಂದ ವಂಚಿತರಾಗುತ್ತಿರುವುದರಿಂದ ಅವರನ್ನು ಗುರುತಿಸುವ ಕೆಲಸವನ್ನು ಮಾಡಲಾಗುತ್ತಿದೆ. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರುಣಕುಮಾರ್.ಎಲ್.ಹೆಚ್ ಮಾತಾನಾಡಿ ಹೆಣ್ಣು ಮಕ್ಕಳು ಮನೆಯಲ್ಲಿ ದೈನಂದಿನ ಕೆಲಸ ಮಾಡಿಕೊಂಡೇ ಬೀಡಿ ಕಟ್ಟಿ ಸಂಸಾರವನ್ನು ತೂಗಿಸಿಕೊಂಡು ಹೋಗುತ್ತಿದ್ದರು. ಗಂಡು ಮಕ್ಕಳು ದುಡಿಯದ ಮನೆಗಳಲ್ಲಿ ಬೀಡಿ ಕಟ್ಟುವ ಮಹಿಳೆಯರೇ ಆಧಾರವಾಗಿದ್ದಾರೆ. ಅವರನ್ನು ಗುರುತಿಸುವ ಕೆಲಸವನ್ನು ಕಾರ್ಮಿಕ ಇಲಾಖೆ ಮಾಡಬೇಕಾಗಿದೆ.
ನೆರಳು ಬೀಡಿ ಕಾರ್ಮಿಕರ ಯೂನಿಯನ್‍ನ ಅಧ್ಯಕ್ಷರಾದ ಜಬೀನಾಖಾನಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿ 19 ನೇ ಶತಮಾನದ ಭಾರತದ ವೀರ ಮಹಿಳೆ ಸಾವಿತ್ರಿಬಾಯಿ ಫುಲೆ ಅವರು ಮಹಿಳಾ ಹಕ್ಕುಗಳಿಗಾಗಿ ಹೋರಾಡಿದ ಸಮಾಜ ಸುಧಾರಕರಾಗಿದ್ದರು. ಸಾವಿತ್ರಿಬಾಯಿ ಫುಲೆಯವರು 1831 ರ ಜನವರಿ 3 ರಂದು ಮಹಾರಾಷ್ಟ್ರದ ನೈಗಾಂವ್ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒಲವು ತೋರದ ಆ ಕಾಲದ ಸಾಮಾಜಿಕ ನಿಯಮಗಳ ಹೊರತಾಗಿಯೂ, ಸಾವಿತ್ರಿಬಾಯಿ ಅವರ ಪತಿ ಜ್ಯೋತಿರಾವ್ ಫುಲೆ ಅವರಿಂದ ಓದಲು ಮತ್ತು ಬರೆಯಲು ಕಲಿಸಿದರು.
ದಲಿತ ಮುಸ್ಲಿಂ ಮಹಿಳಾ ಒಕ್ಕೂಟದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಸಬ್ರೀನ್ ತಾಜ್, ಕಾರ್ಯದರ್ಶಿ ಎಂ.ಕರಿಬಸಪ್ಪಉಪಸ್ಥಿತರಿದ್ದರು.