ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಶಿಕ್ಷಕ ವೃತ್ತಿಯ ಜೊತೆಗೆ ಸಮಾಜ ಮುಖಿ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿರುವ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಶೇಖರ್‌ರವರ ವ್ಯಕ್ತಿತ್ವ ಬಹುಮುಖ ಪ್ರತಿಭೆೆಯಿಂದ ಕೂಡಿದೆ ಎಂದು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಡಿ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಬನ್ನಿಮಂಟಪ ಬಡಾವಣೆಯಲ್ಲಿರುವ ನಿವೃತ್ತ ಉಪನ್ಯಾಸಕ ದಿ.ಕೆ.ಎಲ್.ಲಕ್ಕೇಗೌಡರ ನಿವಾಸದಲ್ಲಿ ಎರಡನೇ ಬಾರಿಗೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಜಶೇಖರ್ ಅವರಿಗೆ ಸಹಪಾಠಿಗಳು ಮತ್ತು ಹಿತೈಷಿಗಳು ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಟವಾಗಿದ್ದು ಅದರ ಜವಬ್ದಾರಿ ಅರಿತು ಕೆಲಸ ಮಾಡಿದರೆ ಸದೃಢ ಸಮಾಜ ಕಟ್ಟುವುದರ ಜತೆಗೆ ದೇಶಕ್ಕೆ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡಬಹುದಾಗಿದ್ದು ಎಲ್ಲಾ ಶಿಕ್ಷಕರು ಇದನ್ನು ಅರಿತು ತಮ್ಮ ಸೇವಾವಧಿಯಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಶಿಕ್ಷಕರ ಸಂಘಟನೆಯನ್ನು ಪ್ರಬಲವಾಗಿ ಒಗ್ಗೂಡಿಸಿ ಅವರ ಸಂಕಷ್ಟಗಳಿಗೆ ಸ್ಪಂದಿಸಿಕೊoಡು ಬರುತ್ತಿರುವ ರಾಜಶೇಖರ್ ಭವಿಷ್ಯದಲ್ಲಿ ಜಿಲ್ಲಾ ಮತ್ತು ರಾಜ್ಯ ಸಂಘಟನೆಯ ಅಧ್ಯಕ್ಷರಾಗಿ ತಮ್ಮ ಸೇವೆಯನ್ನು ನಾಡಿನ ಸಮಸ್ತ ಶಿಕ್ಷಕ ಸಮೂಹಕ್ಕೆ ನೀಡುವಂತಾಗಲೆoದು ಹಾರೈಸಿದರು.
ಪುರಸಭೆ ಸದಸ್ಯ ಕೆ.ಎಲ್.ಜಗದೀಶ್, ಮಾಜಿ ಸದಸ್ಯ ಶಿವಕುಮಾರ್, ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಕೃಷ್ಣನಾಯಕ, ಶಿಕ್ಷಕರಾದ ಪುರುಷೋತ್ತಮ್, ಪುಟ್ಟರಾಜು, ಚಂದ್ರಶೇಖರ್, ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಕೆ.ಎಸ್.ಮಲ್ಲಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಪ್ರತಿಮಾ, ಮಿರ್ಲೆ ಸುಜಯ್‌ಗೌಡ, ಮಿರ್ಲೆ ಧನಂಜಯ ಮತ್ತಿತರರು ಮಾತನಾಡಿ ನೂತನ ಅಧ್ಯಕ್ಷರಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾಗಿರುವ ರಾಜಶೇಖರ್ ಅವರನ್ನು ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್ ಅವರ ನೇತೃತ್ವದಲ್ಲಿ ಸ್ನೇಹಿತರು ಮತ್ತು ಹಿತೈಷಿಗಳು ಸನ್ಮಾನಿಸಿ ಸಂಭ್ರಮಿಸಿದರು.
ತಾಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಹೆಚ್.ಡಿ.ಮಂಜುನಾಥ್, ನಿರ್ದೇಶಕ ಬಿ.ಎಲ್.ಮಹದೇವ್, ಸಾಲಿಗ್ರಾಮ ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಧು, ನಿವೃತ್ತ ಸಹಾಯಕ ಅಭಿಯಂತರ ಎಸ್.ವಿ.ಪ್ರಕಾಶ್, ಉಪನ್ಯಾಸಕ ಹೆಚ್.ಡಿ.ರಾಘವೇಂದ್ರ, ಶಿಕ್ಷಕರಾದ ಮಾರುತಿ, ಮುರುಳಿ, ಪ್ರಕಾಶ್, ಮುತ್ತೇಶಾಚಾರ್, ಲಿಂಗರಾಜು, ಮಂಜುನಾಥ್, ನವ ನಗರ ಬ್ಯಾಂಕ್ ನಿರ್ದೇಶಕ ಕೇಶವ್, ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಜೆ.ವಿನಯ್ ಮತ್ತು ಸದಸ್ಯರು ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.