ಮಂಡ್ಯ: ರಾಜ್ಯದಲ್ಲಿ ಈ ವರ್ಷ ಈಗಾಗಲೇ ೭ ಲಕ್ಷ ಕೃಷಿಕರಿಗೆ ೪೭೫ ಕೋಟಿ ರೂ ಬೆಳೆ ವೆಮೆ ಪರಿಹಾರ ಒದಗಿಸಲಾಗಿದೆ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು. ಇಂದು ಅವರು ಮಂಡ್ಯ ಜಿಲ್ಲೆಯ ಆದಿ ಚುಂಚನಗಿರಿಯಲ್ಲಿ ಏರ್ಪಡಿಸಿರುವ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರ ೭೯ನೇ ಜಯಂತೋತ್ಸವ, ೧೧ನೇ ಸಂಸ್ಮರಣಾ ಸಮಾರಂಭ, ಕರ್ನಾಟಕ ರಾಜ್ಯ ಕೃಷಿ ಇಲಾಖೆ, ಜಲಾನಯನ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಪ್ತು ನಿಗಮ ನಿಯಮಿತ , ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾಡಳಿತ ಮತ್ತು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸಹಭಾಗಿತ್ವದಲ್ಲಿ ರೈತ ಸಂಗಮ ಕೃಷಿ ಬೆಳೆಗಳ ಉತ್ಪಾದನೆ, ಸಂಸ್ಕರಣೆ , ಮೌಲ್ಯ ಸರಪಳಿ ಕುರಿತು ಉತ್ಪಾದಕರು ಮಾರುಕಟ್ಟೆದಾರರ ಕಾರ್ಯಗಾರ ಹಾಗೂ ಕೃಷಿ ಮೇಳ ಮತ್ತು ವಸ್ತು ಪ್ರದರ್ಶನವನ್ನು ಶ್ರೀ ಕ್ಷೇತ್ರ ಆದಿಚುಂಚನಗಿರಿ ಬಿ.ಜಿ.ಎಸ್ ಸಭಾ ಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಶೇ ೨% ಅಂದರೆ ಸುಮಾರು ೨೦ ಲಕ್ಷ ರೈತರು ಮಾತ್ರ ಬೆಳೆ ವಿಮೆ ಮಾಡಿಸಿದ್ದಾರೆ. ಈ ವರ್ಷ ಬರ ಪರಿಸ್ಥಿತಿ ಹೆಚ್ಚಿರುವ ಕಾರಣ ಇನ್ನೂ ೧೦೦೦ ಕೋಟಿ ರೂ ವಿಮೆ ಹಣ ರೈತರಿಗೆ ನೇರವಾಗಿ ವರ್ಗಾವಣೆಯಾಗಲಿದೆ ಎಂದರು.
ಕೃಷಿಕರು ಸದೃಢವಾಗಬೇಕು ಆಗ ಮಾತ್ರ ದೇಶದ ಸಂಪೂರ್ಣ ಏಳಿಗೆ ಸಾಧ್ಯ ಎಂದ ಸಚಿವರು ಸಾಂಪ್ರದಾಯಿಕ ಕೃಷಿ ಪದ್ದತಿ ಜೊತೆಗೆ ಯಾಂತ್ರೀಕರಣ, ನವ ಸಂಶೋಧನೆಗಳ ಫಲವೂ ರೈತಗೆ ಸುಲಭವಾಗಿ ತಲುಪಬೇಕು .ಕೃಷಿ ವಿವಿ ಗಳು ಹಾಗೂ ಇಲಾಖೆಗಳು ಈ ಕೆಲಸ ಮಾಡಬೇಕು ಎಂದು ಹೇಳಿದರು. ದೇಶದಲ್ಲಿ ಶೇ ೭೦ ಜನ ,ಕೃಷಿ ಅವಲಂಭಿತರಾಗಿದ್ದು ಬಹುತೇಕ ರೈತರು ಬಡತನದಲ್ಲಿ ಜೀವನ ದೂಡುತ್ತಿದ್ದಾರೆ .ಅವರ ಶ್ರೇಯೋಭಿವೃದ್ದಿ ಸರ್ಕಾರದ ಹಾಗೂ ಸಮಾಜದ ಕರ್ತವ್ಯ ಎಂದು ಎನ್ ಚಲುವರಾಯಸ್ವಾಮಿ ಹೇಳಿದರು.
ಆದಿ ಚುಂಚನಗಿರಿ ಮಠದ ಹಿರಿಮೆ ಹೆಚ್ಚಿಸಿದ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿಯವರ ಸ್ಮರಣಾರ್ಥ ಕೃಷಿ ಕಾಲೇಜು ಪ್ರಾರಂಭಿಸಲು ಶ್ರೀಮಠ ಪ್ರಯತ್ನ ನಡೆಸಿದೆ. ಅವರ ಆಶಯ ಈಡೇರಿಸಲು ಪ್ರಯತ್ನ ನಡೆಸುತ್ತಿದ್ದೇವೆ ಎಂದು ಕೃಷಿ ಸಚಿವರು ಹೇಳಿದರು. ಬೆಂಗಳೂರಿನಲ್ಲಿ ಇತ್ತೀಚೆಗೆ ಸಾವಯವ ,ಸಿರಿಧಾನ್ಯ ಅಂತರಾಷ್ಟ್ರೀಯ ವಾಣಿಜ್ಯ ಮೇಳ ಅತ್ಯಂತ ಯಶಸ್ವಿಯಾಗಿ ನಡೆಸಿದೆ.ರೈತರು ಸಕ್ರಿಯವಾಗಿ ಪಾಲ್ಗೊಂಡಿದ್ದು ವಾಣಿಜ್ಯ ಒಪ್ಪಂದಗಳಲ್ಲೂ ಭಾಗಿಯಾಗಿದ್ದಾರೆ ಇದೇ ರೀತಿ ತಮ್ಮ ಉತ್ಪನ್ನಗಳ ಮೌಲ್ಯ ವರ್ಧನೆಗೂ ಆದ್ಯತೆ ನೀಡಬೇಕು ಎಂದು ಅವರು ಕರೆ ನೀಡಿದರು. ಸರ್ಕಾರ ಸ್ತ್ರೀ ಸಬಲೀಕರಣಕ್ಕೆ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಕೃಷಿ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಮೂಲಕ ನುಡಿದಂತೆ ನಡೆದಿದ್ದೇವೆ ಎಂದರು.
ಆದಿ ಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಶ್ರೀ ಡಾ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ ಕೃಷಿಕರು ಬರಿ ಶ್ರಮಿಕರಾಗದೆ, ನಿಪುಣರೂ ಅಗಬೇಕು ಎಂದರು. ಇದೀಗ ಸೆಕೆಂಡರಿ ಕೃಷಿ ಹೆಚ್ಚು ಲಾಭದಾಯಕವಾಗಿದ್ದು ರೈತರು ತಮ್ಮ ಉತ್ಪನ್ನಗಳ ಮೌಲ್ಯವರ್ಧನೆಗೂ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು. ರೈತರೇ ದೇಶದ ಬೆನ್ನೆಲುಬು.ಅವರ ಬದುಕು ಹಸನಾಗಬೇಕು ದೇಶದಲ್ಲಿ ಐ.ಟಿ ,ಬಿ.ಟಿ ಕ್ಷೇತ್ರದಲ್ಲಿ ಆದಂತೆ ಕೃಷಿ ಕ್ಷೇತ್ರದಲ್ಲಿಯೂ ಸಾಕಷ್ಟು ತಾಂತ್ರಿಕ ಆವಿಷ್ಕ್ಕಾರಗಳಾಗಿದ್ದು ಅದನ್ನು ಅಳವಡಿಸಿಕೊಂಡು ಆರ್ಥಿಕ ಪ್ರಗತಿ ಸಾಧಿಸಬೇಕು ಎಂದರು. ಒಂದೊಮ್ಮೆ ಬಡತನ ಹಸಿವು ಎದುರಿಸಿದ್ದ ಭಾರತದಲ್ಲಿ ಹಸಿರು ಕ್ರಾತಿ ದೇಶದ ಚಿತ್ರಣ ಬದಲಿಸಿತು. ಹಾಗೇ ಕೃಷಿ ಕ್ಷೇತ್ರದಲ್ಲಿ ಇನ್ನಷ್ಟು ತಾಂತ್ರಿಕ ವೈಜ್ಞಾನಿಕ ಬದಲಾವಣೆ ಬೇಕಿದೆ ಎಂದರು.
ಶ್ರೀ ಮಠ ಅನ್ನ ಶಿಕ್ಷಣ ದಾಸೋಹಕ್ಕೆ ಹೆಸರುವಾಸಿ. ಇದೆಲ್ಲಾ ಸಾಧ್ಯವಾಗಿದ್ದು ರೈತರಿಂದ .ಹಾಗಾಗಿ ಕೃಷಿಕರ ಸಬಲೀಕರಣಕ್ಕೆ ಮಠ ಸದಾ ತುಡಿಯುತ್ತದೆ ಎಂದರು. ಪ್ರಾಸ್ತಾವಿಕ ಮಾತನಾಡಿದ ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆ ಟ್ರಸ್ಟ್ ನ ಕಾರ್ಯದರ್ಶಿಶ್ರೀ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ಕೃಷಿಗೆ ಸರಿಯಾದ ಆದ್ಯತೆ ನೀಡಿದಾಗ ಮಾತ್ರ ದೇಶದ ಸರ್ವಾಂಗೀಣ ಪ್ರಗತಿ ಸಾಧ್ಯ ಎಂದರು. ನೀರಿನ ಮಿತ ಬಳಕೆ ಬಗ್ಗೆ ರೈತರು ಗಮನ ಹರಿಸಬೇಕು. ಕೃಷಿ ಶ್ರೇಷ್ಟ ಜೀವನ ಸಂಸ್ಕೃತಿ. ಅದನ್ನು ಉತ್ತಮ ಗೊಳಿಸುತ್ತಾ ಸಾಗಿ ಎಂದು ರೈತರಿಗೆ ಕರೆ ನೀಡಿದರು. ಕೃಷಿ ಆಯುಕ್ತರಾದ ವೈ.ಎಸ್.ಪಾಟೀಲ್ ಅವರು ಮಾತನಾಡಿ ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಸಮಾಜಿಕ, ಶೈಕ್ಷಣಿಕ, ಆದ್ಯಾತ್ಮಿಕ ಹಾಗೂ ಕೃಷಿಪರ ಕಾಳಜಿ, ಚಿಂತನೆ ಮತ್ತು ಸೇವೆ ಇಡೀ ಜಗತ್ತೇ ಮೆಚ್ಚುವಂತದ್ದು ಎಂದು ಶ್ಲಾಘಿಸಿದರು.

ಮಧ್ಯವರ್ತಿಗಳಿಂದ ಕೃಷಿಕರ ಶೋಷಣೆ ತಪ್ಪಿಸಿ ರೈತರನ್ನೇ ಉದ್ಯಮಿಗಳನ್ನಾಗಿಸಬೇಕೆಂಬುದು ಕೃಷಿ ಸಚಿವ ಎನ್ ಚಲುವರಾಯ ಸ್ವಾಮಿ ಅವರ ಆಶಯವಾಗಿದೆ. ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು. ಇದೇ ಸಂದರ್ಭದಲ್ಲಿಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಡಾ. ಎಂ ಎನ್ ತಿಮ್ಮೇಗೌಡರವರು ಹವಾಮಾನ ಚತುರ ಸುಸ್ಥಿರ ಕೃಷಿ, ನಿಖರ ಬೇಸಾಯ ಮತ್ತು ಸಮಗ್ರ ಕೃಷಿ ಪದ್ಧತಿ ಕುರಿತು, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಡಾ.ಬೋರಯ್ಯರವರು ಸಾವಯವ ಮತ್ತು ನೈಸರ್ಗಿಕ ಕೃಷಿ ಇತ್ಯಾದಿ ಕುರಿತು, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ.ಮಧುಪ್ರಸಾದ್ ವಿ.ಎಲ್ ರವರು ರೈತ ಉತ್ಪಾದಕ ಕಂಪನಿಗಳು, ಸ್ವಸಹಾಯ ಸಂಘಗಳ ಸಬಲೀಕರಣ ಕುರಿತು, ಬೆಂಗಳೂರು ಪ್ರಾದೇಶಿಕ ಮುಖ್ಯಸ್ಥರಾದ .ಯು ಧರ್ಮರಾವ್ ರವರು ಸಾವಯವ ಮತ್ತು ಸಿರಿಧಾನ್ಯ ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ವ್ಯವಸ್ಥೆ ಕುರಿತು, ಬೆಂಗಳೂರು ಕೆಪೆಕ್ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಬಂಥನಾಳ್‌ರವರು ಸಿರಿಧಾನ್ಯ, ಸಾವಯವ ಉತ್ಪನ್ನಗಳ ರಫ್ತು ಉತ್ತೇಜನಾ ಕ್ರಮಗಳು, ಸೆಕೆಂಡರಿ ಕೃಷಿ ಮಹತ್ವ: ಸರ್ಕಾರದ ಸೌಲಭ್ಯಗಳ ಕುರಿತು, ವಿ.ಸಿ.ಫಾರಂ ವ.ಕೃ.ಸಂ.ಕೇನ ಭತ್ತದ ತಳಿ ವಿಜ್ಞಾನಿಗಳಾದ ಡಾ.ಸಿ.ಎ.ದೀಪಕ್ ರವರು ಸುಸ್ಥಿರ ಭತ್ತದ ಬೇಸಾಯ ಕುರಿತು ಉಪನ್ಯಾಸ ಮಾಡಿದರು.
ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಸುರೇಶ್, ಕೃಷಿ ವಿಶ್ವವಿದ್ಯಾಲಯದ ನಿರ್ದೇಶಕರಾದ ಪುತ್ರ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್.ಯತೀಶ್, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವಿರ್ ಆಸೀಫ್, ಕೃಷಿ ಜಂಟಿ ನಿರ್ದೇಶಕರಾದ ಆರ್. ಅಶೋಕ್, ಉಪನಿರ್ದೇಶಕಿ ಮಾಲತಿ, ಸಹಾಯಕ ನಿರ್ದೆಶಕರಾದ ಮಮತಾ, ಹರ್ಷ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
