ಮೈಸೂರು : ಕಳೆದ ೧೦ ವರ್ಷದಿಂದ ಮೈಸೂರು-ಕೊಡಗು ಜಿಲ್ಲೆಯ ಸಂಸದರಾಗಿರುವ ಪ್ರತಾಪ್ ಸಿಂಹ ಅವರು, ಇದೀಗ ಮುಂದಿನ ಲೋಕಸಭಾ ಚುನಾವಣೆ ಪತ್ರಕರ್ತ ಮತ್ತು ಡಾ.ಯತೀಂದ್ರ ಸಿದ್ದರಾಮಯ್ಯ ನಡುವೆ ಎಂದು ಹೇಳುವ ಮೂಲಕ ಪತ್ರಕರ್ತರ ಅನುಕಂಪಗಿಟ್ಟಿಸಲು ಮುಂದಾಗಿದ್ದಾರೆಂದು ನಗರ ಕಾಂಗ್ರೆಸ್ ವಕ್ತಾರ ರಾಜೇಶ್ ವ್ಯಂಗ್ಯವಾಡಿದ್ದಾರೆ.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರತಾಪ್ ಸಿಂಹ ಈ ಹಿಂದೆ ಪತ್ರಕರ್ತರಾಗಿದ್ದಿರಬಹುದು ಆದರೇ, ಅವರೀಗ ಸಂಸದರು. ತಾನು ಪತಕರ್ತ ಎಂದು ಹೇಳಿಕೊಳ್ಳಲು ಅವರಿಗೆ ಯಾವ ನೈತಿಕತೆಯೂ ಇಲ್ಲ. ಅವರು ಯಾವುದೇ ಪತ್ರಿಕೆಯ ಅಧಿಕೃತ ವರದಿಗಾರರೂ ಅಲ್ಲ. ಜತೆಗೆ ಕೋಮುದ್ವೇಷ ಹರಡುವುದು, ಸಮಾಜದಲ್ಲಿ ಅಶಾಂತಿ ಉಂಟುಮಾಡುವುದು ಬಿಟ್ಟರೆ, ಭೀಕರ ಬರಗಾಲ, ನಿರುದ್ಯೋಗ, ಬೆಲೆ ಏರಿಕೆ, ರೈತರ ಸಂಕಷ್ಟ ಬದುಕಿನ ಬಗ್ಗೆ ಕನಿಷ್ಠ ಒಂದು ಲೇಖನವನ್ನಾದರೂ ಬರೆದು ಜನರ ಸಮಸ್ಯೆ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡಿಲ್ಲ. ಆದರೂ ಇವರು ಮುಂದಿನ ಚುನಾವಣೆಯಲ್ಲಿ ಸೋಲುವ ಭಯದಿಂದ ಅಥವಾ ಟಿಕೆಟ್ ಗಿಟ್ಟಿಸಲು ಈ ರೀತಿ ನಾಟಕ ಆಡುತ್ತಿದ್ದಾರೆ ಎಂದು ರಾಜೇಶ್ ಕಿಡಿ ಕಾರಿದರು.
ಕೂಡಲೇ ಪ್ರತಾಪ್ ಸಿಂಹ ತಾವೊಬ್ಬ ಪತ್ರಕರ್ತ ಎಂದು ಹೇಳುವುದನ್ನು ಬಿಡಬೇಕು. ಇದರಿಂದ ನೈಜ ಪತ್ರಕರ್ತರ ಹೆಸರಿಗೆ ಮಸಿ ಬಳಿದಂತಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ರವಿ, ನವೀದ್ ಪಾಷ, ಎಸ್.ಎ.ರಹೀಂ, ಪ್ರಕಾಶ್, ಕಮ್ರಾನ್ ಪಾಷ ಇದ್ದರು.