ಗುಂಡ್ಲುಪೇಟೆ: ಪಟ್ಟಣ ತಾಲೂಕು ಕಚೇರಿಯ ಆಧಾರ ಸೇವಾ ಕೇಂದ್ರದಲ್ಲಿ ಹೊಸ ಆಧಾರ್ ಕಾರ್ಡ್, ತಿದ್ದುಪಡಿ, ಹೆಸರು ಬದಲಾವಣೆ ಮಾಡಿಸಲು ಜನರು ಮುಗಿಬಿದ್ದ ಘಟನೆ ಶುಕ್ರವಾರ ನಡೆಯಿತು.
ಕಾಂಗ್ರೆಸ್ ಸರ್ಕಾರದ ಯೋಜನೆಗಳಾದ ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ ಸೇರಿದಂತೆ ಇನ್ನಿತರ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿರುವ ಕಾರಣ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಧಾರ್ ಕೇಂದ್ರಗಳತ್ತ ಧಾವಿಸಿ ಆಧಾರ್ ತಿದ್ದುಪಡಿ, ಮೊಬೈಲ್ ನಂಬರ್ ಲಿಂಕ್ ಮಾಡಿಸಲು ಮುಂದಾಗಿದ್ದಾರೆ.
ತಾಲೂಕು ಕಚೇರಿಯಲ್ಲಿರುವ ಆಧಾರ್ ಕೇಂದ್ರಕ್ಕೆ ಒಮ್ಮೆಲೆ 100ಕ್ಕೂ ಅಧಿಕ ಜನರು ಶುಕ್ರವಾರ ಬೆಳಗ್ಗೆ ಆಗಮಿಸಿದ ಹಿನ್ನೆಲೆ ಕೆಲಕಾಲ ಗೊಂದಲ ಉಂಟಾಯಿತು. ದಿನಕ್ಕೆ 40 ಮಂದಿಗೆ ಮಾತ್ರ ಆಧಾರ್ ಸಂಬಂಧಿತ ಟೋಕನ್ ನೀಡುತ್ತಿದ್ದ ಕಾರಣ ಸಿಬ್ಬಂದಿ ಹಾಗೂ ಸಾರ್ವಜನಿಕರ ನಡುವೆ ವಾಗ್ವಾದ ನಡೆಯಿತು. ಇನ್ನೂ ಅಧಿಕ ಮಂದಿ ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಹೈರಾಣಾದರು.
ಸರ್ವರ್ ಸಮಸ್ಯೆ: ಇನ್ನೂ ಈ ಮಧ್ಯೆ ಹೊಸ ಆಧಾರ್ ಕಾರ್ಡ್, ತಿದ್ದುಪಡಿ, ಹೆಸರು ಬದಲಾವಣೆ, ಮೊಬೈಲ್ ನಂಬರ್ ಲಿಂಕ್ ಮಾಡಿಸಲು ಮುಂದಾದಾಗ ಸರ್ವರ್ ಸಮಸ್ಯೆ ತಲೆದೋರಿತ್ತು. ಇದರಿಂದ ಜನರು ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲುವಂತಾಯಿತು.