ನವದೆಹಲಿ: ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಆರ್ಕಾ ಸ್ಪೋರ್ಟ್ಸ್ ಸಂಸ್ಥೆಯ ನಿರ್ದೇಶಕರಾದ ಮಿಹಿರ್ ದಿವಾಕರ್ ಮತ್ತು ಅವರ ಪತ್ನಿ ಸೌಮ್ಯಾ ದಾಸ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ
ದೆಹಲಿ ಹೈಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿದ್ದು, ಗುರುವಾರ (ಜ. 18) ನ್ಯಾ. ಪ್ರತಿಭಾ ಎಂ ಸಿಂಗ್ ಅವರಿರುವ ಪೀಠದಲ್ಲಿ ವಿಚಾರಣೆ ನಡೆಯಲಿದೆ.
ಧೋನಿ ಅವರಿಂದ ತಮ್ಮ ವಿರುದ್ಧ ಮಾನಹಾನಿಯಾಗುವಂತಹ ಆರೋಪಗಳು ಬರದಂತೆ ನಿರ್ಬಂಧಿಸಬೇಕು ಮತ್ತು ಈಗಾಗಲೇ ಆಗಿರುವ ಮಾನಹಾನಿಗೆ ಪರಿಹಾರ ಕೊಡಿಸಬೇಕು ಎಂದು ಇವರು ಎಂ ಎಸ್ ಧೋನಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.
ಏನಿದು ಪ್ರಕರಣ?
ಆರ್ಕಾ ಸ್ಪೋರ್ಟ್ಸ್ ಸಂಸ್ಥೆಯಲ್ಲಿ ಎಂಎಸ್ ಧೋನಿ ಈ ಮೊದಲು ಬಿಸಿನೆಸ್ ಪಾರ್ಟ್ನರ್ ಆಗಿದ್ದರು. ಆದರೆ, ಈ ಸಂಸ್ಥೆಯ ಇಬ್ಬರು ನಿರ್ದೇಶಕರಾದ ಮಹಿರ್ ದಿವಾಕರ್ ಮತ್ತು ಸೌಮ್ಯಾ ದಾಸ್ ವಿರುದ್ಧ ಧೋನಿ ಇತ್ತೀಚೆಗೆ ರಾಂಚಿ ಕೋರ್ಟ್ ವೊಂದರಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿದ್ದರು. ಐಪಿಸಿ ಸೆಕ್ಷನ್ 406 ಮತ್ತು 420 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕ್ರಿಕೆಟ್ ಅಕಾಡೆಮಿಗಳನ್ನು ಸ್ಥಾಪಿಸುವ ಗುತ್ತಿಗೆಯ ವಿಚಾರದಲ್ಲಿ ಇವರು 16 ಕೋಟಿ ರೂ ವಂಚನೆ ಮಾಡಿದ್ದಾರೆ ಎಂಬುದು ಧೋನಿ ಮಾಡಿರುವ ಆರೋಪವಾಗಿದೆ. 2017ರಲ್ಲಿ ಆದ ಗುತ್ತಿಗೆ ಪ್ರಕಾರ ಧೋನಿ ಹೆಸರಿನಲ್ಲಿ ವಿಶ್ವದ ವಿವಿಧೆಡೆ ಕ್ರಿಕೆಟ್ ಅಕಾಡೆಮಿಗಳನ್ನು ಆರಂಭಿಸಬೇಕಿತ್ತು. ಆದರೆ, ಈ ಗುತ್ತಿಗೆಯ ಅಂಶಗಳಿಗೆ ದಿವಾಕರ್ ಬದ್ಧವಾಗಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಒಪ್ಪಂದದ ಪ್ರಕಾರ ಆರ್ಕ ಸ್ಪೋರ್ಟ್ಸ್ ಸಂಸ್ಥೆ ಫ್ರಾಂಚೈಸಿ ಶುಲ್ಕ ಪಾವತಿಸಬೇಕು ಮತ್ತು ನಿಗದಿತ ಪ್ರಮಾಣದಲ್ಲಿ ಲಾಭವನ್ನು ವರ್ಗಾಯಿಸಬೇಕು. ಆದರೆ, ಈ ನಿಯಮಗಳನ್ನು ಸಂಸ್ಥೆ ಪಾಲಿಸಿಲ್ಲ ಎಂದು ಎಂ ಎಸ್ ಧೋನಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
2021ರ ಆಗಸ್ಟ್ 15ರಂದು ಧೋನಿ ಅವರು ಆರ್ಕಾ ಸ್ಪೋರ್ಟ್ಸ್ ಸಂಸ್ಥೆಗೆ ನೀಡಿದ್ದ ಆಥರೈಸೇಶನ್ ಲೆಟರ್ ಅನ್ನು ಹಿಂಪಡೆದಿದ್ದರು. ಮಾತ್ರವಲ್ಲದೇ ಹಲವು ಬಾರಿ ಲೀಗಲ್ ನೋಟೀಸ್ಗಳನ್ನೂ ನೀಡಿದ್ದರು.