Sunday, April 20, 2025
Google search engine

Homeಸ್ಥಳೀಯಶಿಕ್ಷಣಕ್ಕೆ ಶ್ರೀ ಸುತ್ತೂರು ಮಠದ ಕೊಡುಗೆ ಅಪಾರ

ಶಿಕ್ಷಣಕ್ಕೆ ಶ್ರೀ ಸುತ್ತೂರು ಮಠದ ಕೊಡುಗೆ ಅಪಾರ


ಮೈಸೂರು: ಮೈಸೂರೆಂದರೆ ಜಗದ್ವಿಖ್ಯಾತ ಅರಮನೆಗಳ ನಾಡು, ಸಾಂಸ್ಕೃತಿಕ ನಗರಿಯ ಬೀಡು ಹೇಗೋ ಹಾಗೆ ಶಿಕ್ಷಣ ಕಾಶಿಯೂ ಆಗಿದ್ದು ಇಂತಹ ವಿದ್ಯಾರ್ಜನೆಯ ಶೈಕ್ಷಣಿಕ ಪ್ರಗತಿಗೆ ಸುತ್ತೂರು ಮಠದ ಕೊಡುಗೆಯೂ ಅಪಾರವಾಗಿದೆಯೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ನಗರದ ಜೆಎಸ್‌ಎಸ್ ಬಡಾವಣೆಯ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಜೆಎಸ್‌ಎಸ್ ಪ್ರೌಢ ಶಾಲೆಯಲ್ಲಿ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದ ಮಹತ್ವ ಅರಿತಿದ್ದ ದೂರದೃಷ್ಟಿಯುಳ್ಳ ಸುತ್ತೂರು ಮಠದ ೨೩ನೇ ಪೀಠಾಧೀಶ ಶಿವರಾತ್ರಿ ರಾಜೇಂದ್ರ ಸ್ವಾಮೀಜೀಗಳಿಂದ ಸ್ವತಂತ್ರ ಪೂರ್ವದಲ್ಲೇ ಕೇವಲ ಬೆರಳೆಣಿಕೆಯಷ್ಟು ಮಕ್ಕಳೊಡನೆ ಪ್ರಾರಂಭವಾದ ಒಂದು ಸಣ್ಣ ಶಾಲೆ ಇಂದು ಜಗತ್ತೇ ಇತ್ತ ತಿರುಗಿ ನೋಡುವಂತೆ ಜೆಎಸ್‌ಎಸ್ ಮಹಾವಿದ್ಯಾಪೀಠವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದ್ದು ಸರ್ವರಿಗೂ ನಿರ್ವಂಚನೆಯಿಂದ ಶಿಕ್ಷಣ ನೀಡುತ್ತಿದೆಯೆಂದರು.
ಯಾರೂ ಶಿಕ್ಷಣದಿಂದ ವಂಚಿತರಾಗದೆ ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕೆಂಬ ಮಹದಾಸೆಯದಿಂದ ಅಂದು ಅನ್ನದಾಸೋಹದೊಡನೆ ಅಕ್ಷರ ದಾಸೋಹವನ್ನೂ ಆರಂಭಿಸಿದವರು ಶಿವರಾತ್ರಿ ರಾಜೇಂದ್ರ ಶ್ರೀಗಳು. ಇಂತಹ ಶಿಕ್ಷಣ ಸೇವಾ ದೀಕ್ಷೆಯನ್ನು ಅವರ ನಂತರ ಅಷ್ಟೇ ಕಾಳಜಿಯಿಂದ ಮುಂದುವರಿಸಿಕೊಂಡು ಬಂದಿರುವ ಪ್ರಸ್ತುತ ಸುತ್ತೂರು ಮಠದ ೨೪ನೇ ಶ್ರೀ ಶಿವರಾತ್ರಿ ದೇಶೀಕೇಂದ್ರಸ್ವಾಮಿಗಳು ತ್ರಿವಿಧ ದಾಸೋಹದಲ್ಲಿ ಅದರಲ್ಲೂ ವಿಶೇಷವಾಗಿ ಶಿಕ್ಷಣ ಕಾಯಕದಲ್ಲಿ ಜಗತ್ತಿಗೇ ಮಾದರಿಯಾಗಿದ್ದಾರೆ.ಇಂತಹ ಮಹತ್ವವನ್ನು ಹೊಂದಿರುವ ಜೆಎಸ್‌ಎಸ್ ಶಾಲೆಯಲ್ಲಿ ಓದುವುದಕ್ಕೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಹೆಮ್ಮೆ ಪಡಬೇಕು.ಅಷ್ಟು ಮಾತ್ರವಲ್ಲ, ಓದಿಗೆ ಹೆಚ್ಚು ಒತ್ತು ಕೊಟ್ಟು ಚೆನ್ನಾಗಿ ಕಲಿತು ಇಂತಹ ಘನತೆಯ ಶಾಲೆಗೆ ಮತ್ತಷ್ಟು ಕೀರ್ತಿ ತರಬೇಕು. ಜಗತ್ತು ಯಾವತ್ತೂ ಅವಿದ್ಯೆಯ ಕತ್ತಲೆಯಲ್ಲಿರದೆ ವಿದ್ಯೆಯ ಬೆಳಕಿನಲ್ಲಿರಬೇಕೆಂಬ ಈ ಮಹಾತ್ಮರ ಆಶಯವೇ ಇಡೀ ವಿದ್ಯಾರ್ಥಿ ಸಮೂಹದ ಆದರ್ಶ ವಾಗಬೇಕು. ವಿದ್ಯೆಯೆಂದರೆ ಬೆಳಕು, ಅವಿದ್ಯೆಯೆಂದರೆ ಕತ್ತಲು, ವಿದ್ಯೆ ಕೇಳಿದ್ದೆಲ್ಲವನ್ನು ಕೊಟ್ಟು ಎಲ್ಲರ ಬದುಕನ್ನು ಬೆಳಗಿ ಪ್ರತಿಯೊಬ್ಬರ ಭವಿಷ್ಯವನ್ನೂ ಉಜ್ವಲ ಗೊಳಿಸಿದರೆ, ಅವಿದ್ಯೆಯೆಂಬುದು ಬದುಕನ್ನು ಕತ್ತಲೆ ಮಾಡಿ ಭವಿಷ್ಯವನ್ನೇ ನಾಶ ಮಾಡುತ್ತದೆಂದ ಅವರು, ಹಾಗಾಗಿ ಪ್ರತಿಯೊಬ್ಬರೂ ವಿದ್ಯೆ ಕಲಿತು ಸುಶಿಕ್ಷಿತರಾಗಿ ಒಳ್ಳೆಯ ಭವಿಷ್ಯವನ್ನು ಕಟ್ಟಿಕೊಳ್ಳಬೇಕು. ಅರಿವಿನ ಬೆಳಕಾಗಿರುವ ವಿದ್ಯೆಯು ಸರ್ವರನ್ನೂ ಉದ್ಧಾರ ಮಾಡುವ ಸಂಜೀವಿನಿ ಯಾಗಿದ್ದು ಇಂಥಾ ಅಮೃತವನ್ನು ಯಾವುದೇ ಭೇದ-ಭಾವ ಇಲ್ಲದೆ ನಿರ್ವಂಚನೆಯಿಂದ ವಿದ್ಯಾರ್ಥಿಗಳಿಗೆ ನೀಡುವ ಶಿಕ್ಷಕರೂ ಕೂಡ ಅಮೃತಮಯವಾದ ಸಂಜೀವಿನಿಗಳೆಂದ ಅವರು ಪ್ರತಿಯೊಬ್ಬರೂ ವಿದ್ಯೆಗೆ ಮತ್ತು ವಿದ್ಯೆ ಕಲಿಸುವ ಗುರುಗಳಿಗೆ ಮಹತ್ವ ನೀಡಬೇಕೆಂದು ಹೇಳಿದರು.
ಕಲಾವಿದೆ ಹಾಗೂ ಲೇಖಕಿ ಡಾ.ಜಮುನಾರಾಣಿ ಮಿರ್ಲೆ ಮತ್ತು ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮ ಹಾಗೂ ಹಿರಣ್ಮಯಿಪ್ರತಿಷ್ಟಾನದ ಅಧ್ಯಕ್ಷ ಎ.ಸಂಗಪ್ಪ ಅವರುಗಳು ಪ್ರಸ್ತುತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಗಳಿಸಿ ತೇರ್ಗಡೆಯಾಗಿರುವ ವಿವಿಧ ಶಾಲೆಯ ವಿದ್ಯಾರ್ಥಿಗಳಾದ ಯರಗನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಎಸ್. ಅಜಯ್, ರೂಪಶ್ರೀ, ಗಿರಿಯಾ ಭೋವಿ ಪಾಳ್ಯದ ಸರ್ಕಾರಿ ಪ್ರೌಢಶಾಲೆಯ ಧನುಶ್ರೀ, ಫಾತಿಮಾ ಮತ್ತು ದೀಪ್ತಿ, ಸಿದ್ದಾರ್ಥ ನಗರ ಜಿಎಸ್‌ಎಸ್ ಪ್ರೌಢಶಾಲೆಯ ಸೋಮಶೇಖರ್, ಗೌಶಿಯಾ ನಗರ ಸರ್ಕಾರಿ ಪ್ರೌಢಶಾಲೆಯ ಸುಮಾಬ್ ಖಾನ್, ಡಾ.ರಾಜಕುಮಾರ್ ರಸ್ತೆಯ ಜೆಎಸ್‌ಎಸ್ ಪ್ರೌಢಶಾಲೆಯ ಉಜ್ಮಾ, ಆರ್. ಯೋಗೀಶ್ ಮತ್ತು ಷಾಪಿಯಾ, ಶಿಶುನಾಳ ಶರೀಫ್ ಪ್ರೌಢಶಾಲೆಯ ಮೇಘನಾ ಮತ್ತು ವಿದ್ಯಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಿದರು.
ಇದೇ ವೇಳೆ ವಿಶ್ರಾಂತ ಶಿಕ್ಷಕಿ ಹಾಗೂ ಲೇಖಕಿ ಕೆರೋಡಿ ಎಂ.ಲೋಲಾಕ್ಷಿ ಅವರು ಸಾಮಾನ್ಯ ಜ್ಞಾನಕ್ಕೆ ಪೂರಕವಾದ ಹಾಸ್ಯ ಕಾರ್ಯಕ್ರಮವನ್ನು ನಡೆಸಿ ಕೊಟ್ಟು ವಿದ್ಯಾರ್ಥಿಗಳನ್ನು ರಂಜಿಸಿದರು. ಪ್ರಾರಂಭದಲ್ಲಿ ಶಿಕ್ಷಕ ಡಿ.ನಾಗರಾಜಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಸುಶೀಲ ಅವರು ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಬಿ.ಸಿದ್ದರಾಮಯ್ಯ, ಸಂಖ್ಯಾ ಶಾಸ್ತ್ರಜ್ಞ ಎಸ್.ಜಿ.ಸೀತಾರಾಂ, ಮುಕ್ತಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಂ.ಮುತ್ತುಸ್ವಾಮಿ, ಶಿಕ್ಷಕರಾದ ಬಿ.ರೇಣುಕ ಪ್ರಸಾದ್, ಹೆಚ್.ಎಂ.ಮಹದೇವಸ್ವಾಮಿ, ಆರ್.ಮಹಾಲಕ್ಷ್ಮಿ, ಎನ್.ರೂಪಶ್ರೀ, ಸಿ.ರಶ್ಮಿ, ಎಂ.ಮಂಜುಳಾ, ಜ್ಯೋತಿ ಇನ್ನಿತರರು ಉಪಸ್ಥಿತರಿದ್ದರು
.

RELATED ARTICLES
- Advertisment -
Google search engine

Most Popular