ಮೈಸೂರು: ಕಂದಾಯ ಇಲಾಖೆಯಲ್ಲಿ ದಾಖಲೆಗಳ ಡಿಜಿಟಲೀಕರಣ ಅಭಿಯಾನ ಆರಂಭಿಸಲಾಗಿದ್ದು, ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು. ನಗರದ ಕಾಂಗ್ರೆಸ್ ಭವನದ ಆವರಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ದಾಖಲೆ ಕಳವು, ದಾಖಲೆ ತಿದ್ದುವುದು, ಮೂಲ ದಾಖಲಾತಿ ಇಲ್ಲದಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ಸಮಸ್ಯೆ ಇತ್ಯರ್ಥಕ್ಕೆ ದಾಖಲೆಗಳ ಡಿಜಿಟಲೀಕರಣ ಮಾಡಲಾಗುತ್ತಿದೆ ಎಂದರು.
ದಾಖಲೆಗಳ ಡಿಜಿಟಲೀಕರಣದಿಂದ ನಾಗರಿಕರ ವಸೂಲಿ, ಶೋಷಣೆ ತಪ್ಪಲಿದೆ. ಮುಂದಿನ ದಿನಗಳಲ್ಲಿ ರೆಕಾರ್ಡ್ ರೂಂ ಸಂಪರ್ಕಿಸದೇ ಆನ್‌ಲೈನ್ ಮೂಲಕವೇ ದಾಖಲೆಗಳನ್ನು ಪಡೆಯಬಹುದಾಗಿದೆ ಎಂದು ವಿವರಿಸಿದರು. ಕಂದಾಯ ಸಚಿವನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಶೇ. ೭೦ ಪ್ರಕರಣಗಳು ಇತ್ಯರ್ಥಪಡಿಸಬಹುದು. ಉಳಿಕೆ ಶೇ. ೩೦ ಪಕ್ರರಣಗಳ ಇತ್ಯರ್ಥ ಜಟಿಲವಾಗಿರುವುದು ಗಮನಕ್ಕೆ ಬಂದಿದೆ. ಅದರಲ್ಲಿ ದಾಖಲೆಗಳು ಇಲ್ಲದಿರುವುದು ಸೇರಿದೆ ಎಂದರು.
ಪೌತಿ ಖಾತೆ ಆಂದೋಲನ: ರಾಜ್ಯದ ಲಕ್ಷಾಂತರ ಖಾತೆಗಳು ಅಜ್ಜನ, ತಂದೆಯ ಹೆಸರಿನಲ್ಲಿ ಉಳಿದಿವೆ. ಕುಟುಂಬದ ಸದಸ್ಯರು ಒಪ್ಪಿದರೆ ಸ್ಥಳದಲ್ಲಿಯೇ ಖಾತೆ ಮಾಡಿಕೊಡುತ್ತೇವೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಪೌತಿ ಖಾತೆ ಆಂದೋಲನವನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಇದರ ಸಾಧಕ ಬಾಧಕಗಳನ್ನು ನೋಡಿಕೊಂಡು ರಾಜ್ಯಕ್ಕೆ ವಿಸ್ತರಣೆ ಮಾಡುತ್ತೇವೆ ಎಂದರು.
೫೫೦ ಕೋಟಿ ರೈತರ ಖಾತೆಗೆ: ರೈತರ ಖಾತೆಗೆ ಬರ ಪರಿಹಾರದ ಹಣವನ್ನು ಜಮೆ ಮಾಡಲಾಗುತ್ತಿದೆ. ಈವರೆಗೆ ಸುಮಾರು ೫೫೦ ಕೋಟಿ ರೂ.ಗಳನ್ನು ಜಮೆ ಮಾಡಲಾಗಿದೆ. ಒಂದು ವಾರದೊಳಗೆ ಮೊದಲ ಕಂತಿನ ಹಣ ರೈತರಿಗೆ ತಲುಪಲಿದೆ ಎಂದು ತಿಳಿಸಿದರು.
ಬೆಳೆ ಪರಿಹಾರಕ್ಕೆ ಸಂಬಂಧಪಟ್ಟಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೇವೆ. ಅಕ್ಟೋಬರ್ ತಿಂಗಳಲ್ಲಿ ಕೇಂದ್ರ ತಂಡ ಪರಿಶೀಲನೆ ನಡೆಸಿತು. ರಾಜ್ಯದ ಮನವಿ ಬಗ್ಗೆ ಕೇಂದ್ರ ಈವರೆಗೂ ಯಾವುದೇ ತೀರ್ಮಾನ ಮಾಡಿಲ್ಲ. ಡಿ.೨೩ರಂದು ಕರೆದಿದ್ದ ಸಭೆಯೂ ರದ್ದಾಗಿದೆ. ಮಂಗಳವಾರದ ಸಭೆಯೂ ನಡೆದಿಲ್ಲ ಎಂದು ಬರ ಪರಿಹಾರ ಕುರಿತ ಪ್ರಶ್ನೆಗೆ ಉತ್ತರಿಸಿದರು.
ಪ್ರಕರಣ ಇತ್ಯರ್ಥಕ್ಕೆ ಗುಡುವು: ತಹಸಿಲ್ದಾರ್ ಕೋರ್ಟ್ ವ್ಯಾಜ್ಯಗಳನ್ನು ಅರೆ ನ್ಯಾಯಿಕ ಪ್ರಕರಣಗಳೆಂದು ಕರೆಯಲಾಗುತ್ತಿದೆ. ಸೀಮಿತ ಅವಧಿಯಲ್ಲಿ ಮುಗಿಸುವಂತೆ ಹೇಳಲಾಗುವುದಿಲ್ಲ. ಆದರೆ, ರಾಜ್ಯದ ಎಲ್ಲ ತಹಸಿಲ್ದಾರ್‌ಗಳಿಗೆ ಜನವರಿ ಅಂತ್ಯದೊಳಗೆ ೯೦ ದಿನಗಳನ್ನು ಮೀರಿದ ಯಾವುದೇ ಪ್ರಕರಣಗಳು ಇರಬಾರದೆಂದು ಗುರಿ ಕೊಡಲಾಗಿದೆ ಎಂದು ತಿಳಿಸಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ತಹಸಿಲ್ದಾರ್, ಉಪ ಆಯುಕ್ತರು, ಜಿಲ್ಲಾಧಿಕಾರಿಗಳ ಕೋರ್ಟ್‌ನಲ್ಲಿ ಒಂದು ವರ್ಷ ಮೀರಿದ ಪ್ರಕರಣಗಳಿದ್ದವು. ೪ ತಿಂಗಳಲ್ಲಿ ೩೩ ಸಾವಿರ ಪ್ರಕರಣಗಳನ್ನು ಇತ್ಯಥಪಡಿಸಲಾಗಿದೆ. ತಹಸಿಲ್ದಾರ್ ಕೋರ್ಟ್‌ನಲ್ಲಿ ೨೨೧೫ ಪ್ರಕರಣಗಳಿವೆ. ಉಳಿಕೆ ೨೭ ಸಾವಿರ ಪ್ರಕರಣಗಳ ಇತ್ಯರ್ಥಕ್ಕೆ ಕಾಲಮಿತಿ ನಿಗದಿಪಡಿಸಲಾಗಿದೆ ಎಂದು ಹೇಳಿದರು.