ಮೈಸೂರು : ಕೇಂದ್ರ ಸರ್ಕಾರ ಹಿಟ್ ಅಂಡ್ ರನ್ ಕೇಸಿಗೆ ಸಂಬಂಧಿಸಿದಂತೆ ವಾಹನ ಚಾಲಕ ಅಪಘಾತ ನಡೆಸಿ ವ್ಯಕ್ತಿಯ ಸಾವಿಗೆ ಕಾರಣನಾಗಿ ಸ್ಥಳದಿಂದ ಪರಾರಿಯಾದರೆ, ೧೦ ವರ್ಷ ಜೈಲು, ೭ ಲಕ್ಷ ರೂ. ದಂಡ ಎಂಬ ನೂತನ ಕಾನೂನು ಹಿಂಪಡೆಯಬೇಕೆಂದು ಒತ್ತಾಯಿಸಿ ಮಧ್ಯರಾತ್ರಿಯಿಂದಲೇ ಮೈಸೂರಿನಲ್ಲಿ ಲಾರಿಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಆರಂಭಿಸಲಾಗಿದೆ.
ಈ ಪ್ರತಿಭಟನೆಗೆ ೨೮ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ವಿಶೇಷವಾಗಿ ಲಾರಿ ಮಾಲೀಕರು, ಮೆಕ್ಯಾನಿಕ್ ಸಂಘಟನೆ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರಿಂದ ಗುರುವಾರ ಬೆಳಗ್ಗೆ ಹಾಲು, ಆಂಬುಲೆನ್ಸ್, ಪೆಟ್ರೋಲಿಯಂ, ರೈತೋತ್ಪನ್ನ ಮುಂತಾದ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಮೈಸೂರು ಜಿಲ್ಲಾದ್ಯಂತ ೩೦ ಸಾವಿರಕ್ಕೂ ಹೆಚ್ಚು ಗೂಡ್ಸ್ ವಾಹನಗಳು ರಸ್ತೆಗೆ ಇಳಿಯುವುದಿಲ್ಲ ಎನ್ನಲಾಗಿದೆ.
ಕೇಂದ್ರ ಸರಕಾರ ಜಾರಿಗೆ ತಂದಿರುವ ಭಾರತೀಯ ದಂಡ ಸಂಹಿತೆ ಕಲಂ ೧೦೬ರ ಉಪವಿಧಿ ೧ ಮತ್ತು ೨ ಅನ್ನು ಹಿಂಪಡೆಯುವ ತನಕ, ಲಾರಿ ಚಾಲಕರು ಮುಷ್ಕರ ನಡೆಸುವುದಾಗಿ ಹೇಳಿದ್ದಾರೆ. ನಾವು ಅವರ ಮುಷ್ಕರಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ.