Sunday, April 20, 2025
Google search engine

Homeರಾಜ್ಯಸುದ್ದಿಜಾಲಚೆಟ್ಟಿಮಾನಿಯಲ್ಲಿ ‘ಗ್ರಾಮಸಿರಿ’ ಕಾರ್ಯಕ್ರಮಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ

ಚೆಟ್ಟಿಮಾನಿಯಲ್ಲಿ ‘ಗ್ರಾಮಸಿರಿ’ ಕಾರ್ಯಕ್ರಮಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ

ಮಡಿಕೇರಿ : ನಾಡಿನ ಕಲೆ, ಸಂಸ್ಕøತಿ, ಭಾಷೆ, ಜಾನಪದವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವಂತಾಗಬೇಕು. ಇದರಿಂದ ಉತ್ತಮ ಸಂಸ್ಕøತಿ ಮತ್ತು ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಅಭಿಪ್ರಾಯಪಟ್ಟಿದ್ದಾರೆ.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಭಾಗಮಂಡಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು, ಕುಂದಚೇರಿ, ಭಾಗಮಂಡಲ ಮತ್ತು ಅಯ್ಯಂಗೇರಿ ಗ್ರಾಮ ಪಂಚಾಯಿತಿ ವತಿಯಿಂದ ಸುವರ್ಣ ಕರ್ನಾಟಕ 50 ರ ಸಂಭ್ರಮ ಪ್ರಯುಕ್ತ ಚೆಟ್ಟಿಮಾನಿ ಗ್ರಾಮಸಿರಿ ಆಚರಣಾ ಸಮಿತಿ ಸಹಯೋಗದೊಂದಿಗೆ ಚೆಟ್ಟಿಮಾನಿ ಶಾಲಾ ಮೈದಾನದ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯಗೌಡ ಸಭಾಮಂಟಪದ ಮೇಜರ್ ಮಂಗೇರಿರ ವಿನೋದ್ ಮುತ್ತಣ್ಣ ಅವರ ಮುಖ್ಯ ವೇದಿಕೆಯಲ್ಲಿ ಗುರುವಾರ ನಡೆದ ‘ಗ್ರಾಮಸಿರಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಳೆಯದನ್ನು ಮರೆಯಬಾರದು, ಪೂರ್ವಜರ ಜೀವನಶೈಲಿ, ಅವರ ಪರಿಶ್ರಮವನ್ನು ಸದಾ ಸ್ಮರಿಸಿ, ಉತ್ತಮ ಜೀವನ ಕಟ್ಟಿಕೊಳ್ಳಲು ಮುಂದಾಗಬೇಕು. ಗ್ರಾಮೀಣರ ಬದುಕು, ಜೀವನ ಪದ್ಧತಿ ಅರಿತುಕೊಂಡು ಅಭಿವೃದ್ಧಿಯತ್ತ ಹೆಜ್ಜೆ ಇಡಬೇಕು ಎಂದು ಎ.ಎಸ್.ಪೊನ್ನಣ್ಣ ಅವರು ಪ್ರತಿಪಾದಿಸಿದರು. ಗ್ರಾಮೀಣ ಪ್ರದೇಶ ಅಭಿವೃದ್ಧಿ ಹೊಂದಿದಲ್ಲಿ ರಾಷ್ಟ್ರದ ಅಭಿವೃದ್ಧಿ ಸಾಧ್ಯ. ಆ ನಿಟ್ಟಿನಲ್ಲಿ ಕೃಷಿ, ಗುಡಿ ಕೈಗಾರಿಕೆಗಳು ಮತ್ತಷ್ಟು ಬಲವರ್ಧನೆಗೊಳ್ಳಬೇಕು ಎಂದು ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರು ಅವರು ಅಭಿಪ್ರಾಯಪಟ್ಟರು.

ಜಾತಿ, ಧರ್ಮ, ಭಾಷೆಯನ್ನು ಮೀರಿ ಎಲ್ಲರೂ ಒಂದೆಡೆ ಸೇರಿ ‘ಗ್ರಾಮಸಿರಿ’ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ವಿಚಾರವಾಗಿದೆ. ಎಲ್ಲರೂ ಒಟ್ಟುಗೂಡುವುದೇ ಭಾರತ ದೇಶದ ಪ್ರತೀಕವಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವುದೇ ಭಾರತದ ವೈಶಿಷ್ಟ್ಯವಾಗಿದೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ತಿಳಿಸಿದರು. ಭಾಗಮಂಡಲ ಭಾಗದಲ್ಲಿ ಕೊಡವ, ಅರೆಭಾಷೆ ಸೇರಿದಂತೆ ಹಲವು ಭಾಷೆಗಳನ್ನು ಮಾತನಾಡುವವರು ಇದ್ದಾರೆ. ಮಾತೃ ಭಾಷೆ ಜೊತೆಗೆ ನಾಡಿನ ಭಾಷೆ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕು. ಸಣ್ಣ ಸಣ್ಣ ಭಾಷೆ, ಜನಾಂಗ, ಸಮಾಜಗಳ ಆಚಾರ ವಿಚಾರಗಳನ್ನು ಉಳಿಸಿಕೊಂಡು, ಕನ್ನಡ ನಾಡಿನ ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕು ಭ್ರಾತೃತ್ವ ಮತ್ತು ಸಮಾನತೆಯಿಂದ ಬೆರೆತು ಅಭಿವೃದ್ಧಿಯತ್ತ ಮುಖ ಮಾಡಬೇಕಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಕೇಶವ ಕಾಮತ್ ಅವರು ಮಾತನಾಡಿ ಸುವರ್ಣ ಕರ್ನಾಟಕ ಸಂಭ್ರಮದ ಸಂದರ್ಭದಲ್ಲಿ 5 ತಾಲ್ಲೂಕುನಲ್ಲಿ ಗ್ರಾಮಸಿರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಆ ನಿಟ್ಟಿನಲ್ಲಿ ಪ್ರಥಮ ಗ್ರಾಮಸಿರಿ ಕಾರ್ಯಕ್ರಮವನ್ನು ಚೆಟ್ಟಿಮಾನಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು. ಕೊಡಗು ಜಿಲ್ಲೆಯ ಗ್ರಾಮೀಣ ಜನರು ಉದ್ಯೋಗ ಅರಸಿ ದೊಡ್ಡ ದೊಡ್ಡ ನಗರ ಸೇರುತ್ತಿದ್ದಾರೆ. ಉದ್ಯೋಗ ಅರಸಿ ನಗರ ಪಟ್ಟಣಗಳಿಗೆ ತೆರಳಿದರೂ ಸಹ ವಾಪಸ್ಸು ಗ್ರಾಮೀಣ ಪ್ರದೇಶಕ್ಕೆ ಬರುವಂತಾಗಬೇಕು. ವೃತ್ತಿಗಾಗಿ ವಲಸೆ ಹೋಗುವುದು ತಪ್ಪಲ್ಲ. ಆದರೆ ಹುಟ್ಟಿ ಬೆಳೆದ ಊರನ್ನು ಯಾರೂ ಸಹ ಮರೆಯಬಾರದು. ಆ ನಿಟ್ಟಿನಲ್ಲಿ ಗ್ರಾಮಸಿರಿ ಬೆಳಗಬೇಕು ಎಂದರು.

ಗ್ರಾಮಸಿರಿಯ ಸ್ವಾಗತ ಸಮಿತಿ ಅಧ್ಯಕ್ಷರಾದ ಪಾಣತ್ತಲೆ ಪಿ.ವಿಶ್ವನಾಥ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಂದಚೇರಿ ಗ್ರಾ.ಪಂ.ಅಧ್ಯಕ್ಷರಾದ ಪಿ.ಬಿ.ದಿನೇಶ್, ಭಾಗಮಂಡಲ ಗ್ರಾ.ಪಂ.ಅಧ್ಯಕ್ಷರಾದ ಕಾಳನ ರವಿ, ಅಯ್ಯಂಗೇರಿ ಗ್ರಾ.ಪಂ.ಅಧ್ಯಕ್ಷರಾದ ಎಚ್.ಪುಷ್ಪ, ಕರಿಕೆ ಗ್ರಾ.ಪಂ.ಅಧ್ಯಕ್ಷರಾದ ಬಾಲಚಂದ್ರ ನಾಯರ್, ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಗೌರವ ಕೋಶಾಧಿಕಾರಿ ಎಸ್.ಎಸ್.ಸಂಪತ್ ಕುಮಾರ್, ಕಸಾಪ ಮಡಿಕೇರಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್, ಮಡಿಕೇರಿ ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಅಂಬೆಕಲ್ಲು ನವೀನ್, ಕಸಾಪ ಭಾಗಮಂಡಲ ಹೋಬಳಿ ಘಟಕದ ಅಧ್ಯಕ್ಷರಾದ ಸುನಿಲ್ ಪತ್ರಾವೋ, ಕರಿಕೆ ಗ್ರಾಮದ ಬೇಕಲ್ ರಮಾನಾಥ್, ಸಾಹಿತಿ ಡಾ.ಕುಶ್ವಂತ್ ಕೋಳಿಬೈಲು ಇತರರು ಇದ್ದರು.

RELATED ARTICLES
- Advertisment -
Google search engine

Most Popular