ಮಂಗಳೂರು(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವಾಗಿರುವ ನಂದಿನಿಗೆ ಒಳಪಡುವ ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಳೆದ ಒಂದೂವರೆ ವರ್ಷದಿಂದ ಹಾಲು ಉತ್ಪಾದನೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ ಎಂದು ಒಕ್ಕೂಟದ ಎಂಡಿ ವಿವೇಕ ಡಿ. ಹೇಳಿದ್ದಾರೆ.
ಮಂಗಳೂರಿನ ಕುಲಶೇಖರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಉಭಯ ಜಿಲ್ಲೆಗಳಲ್ಲಿನ ಹಾಲು ಹಾಗೂ ಹಾಲಿನ ಉತ್ಪಾದನೆಗಳಿಗಾಗಿನ ಬೇಡಿಕೆಯನ್ನು ಪೂರೈಸಲು ಸದ್ಯ ಹೊರ ಜಿಲ್ಲೆಗಳನ್ನು ಅವಲಂಬಿಸಲಾಗುತ್ತಿದೆ. ಈ ಅವಲಂಬನೆಯನ್ನು ತಪ್ಪಿಸಿ, ಸ್ಥಳೀಯ ಹೈನುಗಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಹಲವು ತಂತ್ರಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದೆ.
ಮಿಶ್ರ ಕರು ತಳಿ ಯೋಜನೆ ಮೂಲಕ ಹಸು ಖರೀದಿದಾರರಿಗೆ ಸುಮಾರು 3,500 ರೂ.ನಷ್ಟು ಸಹಾಯಧನ, ಒಂದು ಎಕರೆ ಪ್ರದೇಶದಲ್ಲಿ ಹಸಿರು ಹುಲ್ಲು ಬೆಳೆಯುವವರಿಗೆ 20,000 ರೂ. ಸಬ್ಸಿಡಿ, ಎರಡು ಮೂರು ಹಸು ಸಾಕುವವರಿಗೆ ಮತ್ತಷ್ಟು ಹೆಚ್ಚುವರಿ ಹಸು ಸಾಕಲು ಸಬ್ಸಿಡಿ ಜತೆಗೆ ಬೇಸಿಗೆಯಲ್ಲಿ ಪಶು ಆಹಾರವಾದ ಸೈಲೇಜ್ (ಹಸಿ ಜೋಳವನ್ನು ಹಸಿರು ಎಲೆಗಳೊಂದಿಗೆ ಕತ್ತರಿಸಿ ತಯಾರಿಸುವ ಪಶು ಆಹಾರ) ಖರೀದಿಗೆ ಒಕ್ಕೂಟ ಯೋಜನೆ ರೂಪಿಸುತ್ತಿದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಯುವಕರಲ್ಲಿ ಹೈನುಗಾರಿಕೆಯಲ್ಲಿ ನಿರಾಸಕ್ತಿ, ಪಶು ಆಹಾರದ ಬೆಲೆಯಲ್ಲಿ ಹೆಚ್ಚಳವೇ ಇದಕ್ಕೆ ಕಾರಣ ಎಂದರು.