Tuesday, April 22, 2025
Google search engine

Homeರಾಜ್ಯರಾಮಲಲ್ಲಾ ಮೂರ್ತಿಗೆ ಶಿಲೆ ಸಿಕ್ಕ ಜಾಗದಲ್ಲಿ ಮಂದಿರ ನಿರ್ಮಾಣ: ಜಿ.ಟಿ ದೇವೇಗೌಡ

ರಾಮಲಲ್ಲಾ ಮೂರ್ತಿಗೆ ಶಿಲೆ ಸಿಕ್ಕ ಜಾಗದಲ್ಲಿ ಮಂದಿರ ನಿರ್ಮಾಣ: ಜಿ.ಟಿ ದೇವೇಗೌಡ

ಮೈಸೂರು: ಅಯೋಧ್ಯೆ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲು ಕೆತ್ತಲಾಗಿರುವ ರಾಮಲಲ್ಲಾ ಮೂರ್ತಿಗೆ ಶಿಲೆ ಸಿಕ್ಕಿರುವ ಹಾರೋಹಳ್ಳಿಯ ಸ್ಥಳ ಇದೀಗ ಧಾರ್ಮಿಕ ಸ್ಥಳವಾಗಿದೆ. ಈ ಜಾಗದಲ್ಲಿ ಮಂದಿರ ನಿರ್ಮಾಣ ಮಾಡಲಾಗುವುದು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ ದೇವೇಗೌಡ ಘೋಷಿಸಿದ್ದಾರೆ.

ಮೈಸೂರಿನ ಜನದರ್ಶಿನಿಯಲ್ಲಿರುವ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನವರಿ 22ರಂದು ಶಿಲೆ ಸಿಕ್ಕ ಜಾಗದಲ್ಲಿ ಭೂಮಿ ಪೂಜೆ ಮಾಡುತ್ತೇವೆ. ನಂತರ ಎಲ್ಲಾ ಜನರ ಬಳಿ ದೇಣಿಗೆ ಸಂಗ್ರಹ ಮಾಡಿ ಮಂದಿರ ನಿರ್ಮಾಣ ಮಾಡುತ್ತೇವೆ. ಇದಕ್ಕೆ ಜಮೀನು ಮಾಲೀಕ ರಾಮದಾಸ್ ಕೂಡ ಒಪ್ಪಿದ್ದಾರೆ ಎಂದು ಹೇಳಿದರು.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿದೆ. ದೇಶದ ಜನರು ಎದುರು ನೋಡುತ್ತಿರುವ ಬಾಲ ರಾಮನ ವಿಗ್ರಹವು ಮೈಸೂರು ತಾಲ್ಲೂಕು ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಹಾರೋಹಳ್ಳಿಯ ದಲಿತ ಸಮುದಾಯದ ಮುಖಂಡ ರಾಮದಾಸ್ ಜಮೀನಿನಲ್ಲಿ ಸಿಕ್ಕ ಕೃಷ್ಣ ಶಿಲೆಯಲ್ಲಿ ಆಗಿದೆ. ಇದು ನಮಗೆಲ್ಲ ಸಂತೋಷ. ಇದು ನಮ್ಮ ದಲಿತ ಬಾಂಧವರ ಜಮೀನಿನಲ್ಲಿ ಮೂಡಿ ಬಂದಿರುವ ಶಿಲೆ. ಈ ಶಿಲೆಯನ್ನ ಕೆತ್ತನೆ ಮಾಡಿರುವವರು ನಮ್ಮ ಮೈಸೂರಿನವರು. ಕೃಷ್ಣ ಶಿಲೆಯನ್ನ ಹುಡುಕಿದ್ದ ಶ್ರೀನಿವಾಸ್ ಕೂಡ ನಮ್ಮ ಮೈಸೂರಿನವರು ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಬಂದಿದ್ದ ವೇಳೆ ಚಾಮುಂಡೇಶ್ವರಿ ಸನ್ನಿದಾನದಲ್ಲಿ ಪ್ರಾರ್ಥನೆ ಮಾಡಿದ್ದರು. ಈಗ ಅದೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರಾಮಲಲ್ಲಾ ಮೂರ್ತಿಗೆ ಶಿಲೆ ಸಿಕ್ಕಿದೆ. ಜ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗುತ್ತದೆ. ಅದೇ ವೇಳೆ ಕೃಷ್ಣ ಶಿಲೆ ಸಿಕ್ಕ ಸ್ಥಳದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಧನ್ಯವಾದ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ನಾನು ಆಭಾರಿಯಾಗಿರುತ್ತೇನೆ ಎಂದು ಹೇಳಿದರು.

ರಾಮಲಲ್ಲಾ ಮೂರ್ತಿಗೆ ಶಿಲೆ ಕೊಟ್ಟ ಜನರಿಗೆ ದೇವರ ದರ್ಶನ ಮಾಡಿಸುವ ವ್ಯವಸ್ಥೆ ಮಾಡುತ್ತೇವೆ. ಜನವರಿ 27ಕ್ಕೆ ಅರುಣ್ ಯೋಗಿರಾಜ್ ಮೈಸೂರಿಗೆ ಬರುತ್ತಾರೆ. ಅವರ ಜೊತೆ ಮಾತನಾಡಿ ಇವರನ್ನು (ರಾಮದಾಸ್) ಹೇಗೆ ಅಯೋಧ್ಯೆಗೆ ಕರೆದುಕೊಂಡು ಹೋಗಬೇಕು ತೀರ್ಮಾನ ಮಾಡುತ್ತೇವೆ. ಜನರಿಗೆ 22 ರಂದು ಇವರೆಲ್ಲರಿಗೂ ಗೌರವ ಸಲ್ಲಿಸುವ ಕೆಲಸ ಮಾಡುತ್ತೇವೆ ಎಂದು ಶಾಸಕ ಜಿಟಿ.ದೇವೇಗೌಡ ಹೇಳಿದರು.

RELATED ARTICLES
- Advertisment -
Google search engine

Most Popular