ಮೈಸೂರು: ರಾಮ ನಾಮ ವಿಶ್ವಮಯವಾಗಿದೆ. ರಾಮ ನಾಮ ಜಪ ಕಲಿಯುಗದಲ್ಲಿ ಅಪೂರ್ವ ಶಕ್ತಿ ನೀಡುತ್ತದೆ. ರಾಮ ನಾಮವನ್ನು ಪ್ರತಿ ಮನೆ ಮನ ಹಾಗೂ ಹೃದಯಗಳಿಗೆ ತಲುಪಿಸಬೇಕಿದೆ ಎಂದು ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಶ್ರೀರಾಮಪುರದಲ್ಲಿ ಶ್ರೀಕರ ನಿಲಯದಲ್ಲಿ ಮನೆ ಮನೆಗೆ ಶ್ರೀ ರಾಮ ಜಪ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅಯೋಧ್ಯೆಯಲ್ಲಿ ರಾಮನ ವಿಗ್ರಹ ಪ್ರತಿಷ್ಠಾಪನೆ ಆಗುತ್ತಿರುವ ಸಂದರ್ಭದಲ್ಲಿ ದೇಶವಿದೇಶಗಳಲ್ಲಿ ಶ್ರೀರಾಮನಾಮ ಜಪ ನಡೆಯುತ್ತಿರುವುದು ಇಡೀ ಪ್ರಪಂಚಕ್ಕೆ ಭಾರತೀಯ ಸನಾತನ ಧರ್ಮದ ಶಕ್ತಿ ಹಾಗೂ ಸ್ಪೂರ್ತಿಯನ್ನು ತರುವ ಕಾರ್ಯಕ್ರಮವಾಗಿದೆ. ಪ್ರತಿ ಹಳ್ಳಿಯಲ್ಲಿಯೂ ಶ್ರೀ ರಾಮನ ಆದರ್ಶಗಳ ಹಾಗೂ ಆತನ ಜೀವನ ಇತಿಹಾಸದ ಕುರಿತು ಹಾಗೂ ಆಧ್ಯಾತ್ಮಿಕ ಮಹತ್ವವನ್ನು ಸಾರುವ ಅನೇಕ ಪುರಾಣಗಳನ್ನು ನಾವು ಕಾಣಬಹುದಾಗಿದೆ.
ರಾಮ ನಾಮ ಶಕ್ತಿಯು ಭಾರತೀಯರ ರಕ್ತದಲ್ಲಿ ನಿರಂತರವಾಗಿ ಹರಿದಿದೆ . ಧರ್ಮ ಸಂಸ್ಕೃತಿ ,ಪರಂಪರೆಯ ಸಂರಕ್ಷಣೆಯ ಮೂಲಕ ಯುವ ಶಕ್ತಿಗೆ ಭಾರತೀಯತೆಯ ಪೂರ್ಣತೆಯನ್ನು ತಿಳಿಸುವ ಕಾರ್ಯವನ್ನು ಎಲ್ಲರೂ ಸೇರಿ ಮಾಡಬೇಕೆಂದು ತಿಳಿಸಿ ,ಇಡೀ ವಿಶ್ವಕ್ಕೆ ಭಾರತೀಯರ ಆದರ್ಶಗಳೇ ಶಕ್ತಿಯಾಗಿದೆ ಭವಿಷ್ಯದಲ್ಲಿ ಇಡೀ ವಿಶ್ವ ಭಾರತೀಯತೆಯ ಮೌಲ್ಯಗಳ ಸಂಕೇತವಾಗಿ ಪರಿವರ್ತನೆಯಾಗಲಿದೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕಿ ಕೆ ವಿ ಶ್ರೀಮತಿ ಮಾತನಾಡಿ ಶ್ರೀರಾಮರ ಗುಣಗಳು ವಿಶೇಷತೆಗಳು ಪ್ರತಿಯೊಬ್ಬರಲ್ಲೂ ಮೂಡಲಿ ರಾಮ ನಾಮದ ಮೂಲಕ ಆರೋಗ್ಯ ಮತ್ತು ಸಂಪತ್ತು ವೃದ್ದಿಯಾಗಲಿ ಎಂದರು. ಶ್ರೀ ರಾಮನ ಗೀತೆಗಳು ಹಾಡಿದರು. ಸಾಮೂಹಿಕ ಶ್ರೀ ರಾಮ ನಾಮ ಜಪ ನಡೆಯಿತು. ಕಾರ್ಯಕ್ರಮದಲ್ಲಿ ಆದರ್ಶ ಸೇವಾ ಸಂಘದ ಅನಂತನಾರಾಯಣ್, ಜೈ ಹಿಂದ್ ಪ್ರತಿಷ್ಠಾನದ ರಮೇಶ್, ಋಗ್ವೇದಿ ಯೂತ್ ಕ್ಲಬ್ ಶರಣ್ಯ ಕಾರ್ತಿಕ್, ಶ್ರಾವ್ಯ ಋಗ್ವೇದಿ, ಆಶ್ರೀತ್ ಇದ್ದರು.
