ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಅರ್.ನಗರ: ಗದಗ ಜಿಲ್ಲೆಯಿಂದ ತಂದೆ ತನ್ನ ಸ್ವಂತ ಮಗನನ್ನು ಮೂರು(೩) ಲಕ್ಷಕ್ಕೆ ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದ ಮಹಿಳೆಗೆ ಮಾರಾಟಮಾಡಿದ್ದು, ಒಂಬತ್ತು ವರ್ಷದ ಬಾಲಕನ್ನು ಕೆ.ಆರ್.ನಗರ ತಾಲೂಕು ಕಾರ್ಮಿಕ ಇಲಾಖೆಯ ನಿರೀಕ್ಷಕರು ಪತ್ತೆ ಮಾಡಿ ರಕ್ಷಿಸಿರುವ ಘಟನೆ ಸಾಲಿಗ್ರಾಮ ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.
ರಕ್ಷಿಸಿರುವ ಬಾಲಕ ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದ ಒಂಬತ್ತು ವರ್ಷದ ಬಸವನಗೌಡ ಶರಣಪ್ಪಗೌಡ ಎನ್ನಲಾಗಿದ್ದು ಈತನ ತಂದೆ ಶರಣಪ್ಪಗೌಡ ಕೇವಲ ಮೂರು ಲಕ್ಷಕ್ಕೆ ತನ್ನ ಸ್ವಂತ ಮಗನನ್ನು ಮಾರಾಟ ಮಾಡಿರುವುದು ಶೋಚನೀಯ ಸಂಗತಿ.
ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದ ರುಕ್ಮಿಣಿ ಮತ್ತು ಮಹದೇವಮ್ಮ ಎಂಬ ಮಹಿಳೆಯರು ಕಳೆದ ಎರಡು ವರ್ಷಗಳ ಹಿಂದೆ ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದ ಶರಣಪ್ಪಗೌಡ ಎಂಬವರ ಮಗನಾದ ಬಸವನಗೌಡ ಶರಣಪ್ಪಗೌಡನನ್ನು ಮೂರು ಲಕ್ಷ ಹಣ ಕೊಟ್ಟು ಖರೀದಿ ಮಾಡಿದ್ದಾರೆ.
ಮಾರಾಟವಾದ ಬಾಲಕನನ್ನು ರಕ್ಷಿಸಿ ಬಾಲಮಂದಿರಕ್ಕೆ ನೀಡಿದ್ದೇವೆ, ಮಾರಾಟದ ಬಗ್ಗೆ ಸಾಲಿಗ್ರಾಮ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ, ಮಕ್ಕಳ ಮಾರಾಟ ಜಾಲದ ಬಗ್ಗೆ ಪೊಲೀಸರು ಪತ್ತೆ ಹಚ್ಚ ಬೇಕಿದೆ. ಏಕೆ ನಿರ್ಲಕ್ಷ್ಯ ವಹಸುತ್ತಿದ್ದಾರೆ ಗೊತ್ತಾಗುತ್ತಿಲ್ಲ,
- ಗೋವಿಂದರಾಜು, ಕಾರ್ಮಿಕ ನಿರೀಕ್ಷಕರು, ಕಾರ್ಮೀಕ ಇಲಾಖೆ, ಕೆ.ಆರ್.ನಗರ.
ಅಲ್ಲದೆ ಸವಡಿ ಗ್ರಾಮದಿಂದ ಬೆಟ್ಟಹಳ್ಳಿ ಗ್ರಾಮಕ್ಕೆ ಕರೆತಂದು ಕುರಿ, ಮೇಕೆ ಮೇಯಿಸಲು ಕಳುಹಿಸುತ್ತಿರುತ್ತಾರೆ. ಹಾಗೂ ಮನೆ ಕೆಲಸವನ್ನು ಕೂಡ ಮಾಡಿಸುತ್ತಿದ್ದು, ಈ ಸಂಗತಿ ಗ್ರಾಮಸ್ಥರಿಗೆ ತಿಳಿದು, ಯಾರೊಬ್ಬರು ಪ್ರಶ್ನೆ ಮಾಡಿದರು ರುಕ್ಮಿಣಿ ಹಾಗೂ ಮಹದೇವಮ್ಮ, ಸಂಬಂದಿಕರ ಹುಡುಗ ಎಂದೆಲ್ಲ ಸಬೂಬು ಹೇಳುತ್ತಿದ್ದರು. ಕೊನೆಗೂ ಗ್ರಾಮಸ್ಥರಿಗೆ ಅನುಮಾನ ಬರಲಾಗಿ ಸ್ಥಳೀಯ ಪೊಲೀಸರಿಗೆ ಏನೇ ದೂರು ಕೊಟ್ಟರು ಪ್ರಯೋಜವಿಲ ಎಂಬುದನ್ನು ಅರಿತು, ಮೈಸೂರಿನ ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ದೂರು ನೀಡಲಾಗಿತ್ತು.
ತಕ್ಷಣವೇ ಕಾರ್ಯ ಪ್ರವೃತ್ತರಾದ ಮಕ್ಕಳ ಸಹಾಯವಾಣಿ ಕೇಂದ್ರದವರು ಮೈಸೂರಿನ ಪಟ್ಟಣದಲ್ಲಿರುವ ಸಹಾಯಕ ಕಾರ್ಮಿಕ ಆಯುಕ್ತೆ ನಾಜೀಯ ಸುಲ್ತಾನ್ ಅವರಿಗೆ ಕರೆ ಮಾಡಿ ಬಾಲಕ ಮಾರಾಟ ಆಗಿರುವ ಹಳ್ಳಿಯೊಂದರಲ್ಲಿ ಜೀತ ಮಾಡುತ್ತಿರುವ ಬಗ್ಗೆ ತಿಳಿಸಿದದಾರೆ.
ತಕ್ಷಣವೇ ಸಹಾಯಕ ಕಾರ್ಮೀಕ ಆಯುಕ್ತೆ ನಾಜೀಯ ಸುಲ್ತಾನ್ ಅವರು ತಮ್ಮ ಮಾರ್ಗದರ್ಶನದ ಮೂಲಕ ಕೆ.ಆರ್.ನಗರ ತಾಲೂಕು ತಹಸೀಲ್ದಾರ್ ಸಿ. ಎಸ್.ಪೂರ್ಣಿಮಾ ಹಾಗೂ ಪಟ್ಟಣದ ಕಾರ್ಮಿಕ ಇಲಾಖೆಯ ಕಾರ್ಮೀಕ ನಿರೀಕ್ಷಕ ಗೋವಿಂದರಾಜು ಅವರಿಗೆ ಮಾರಾಟವಾಗಿರುವ ಬಾಲಕನ ವಿಳಾಸ , ದೂರು ನೀಡಿ ಸೂಕ್ತ ಕ್ರಮಗಳನ್ನು ಕೈಗೊಂಡು ಬಾಲಕನನ್ನು ರಕ್ಷಿಸುವಂತೆ ಸೂಚಿಸಿದ್ದರು.

ಕೆ.ಆರ್.ನಗರ ಪಟ್ಟಣ ಕಾರ್ಮಿಕ ಇಲಾಖೆಯ ನಿರೀಕ್ಷಕ ತಮ್ಮ ಸಿಬ್ಬಂದಿಗಳೊಡನೆ ಬೆಟ್ಟಹಳ್ಳಿ ಗ್ರಾಮಕ್ಕೆ ಆಗಮಿಸಿ ದೂರು ನೀಡಿದ್ದ ಗ್ರಾಮಸ್ಥರ ಜೊತೆ ಚರ್ಚಿಸಿ, ಬಾಲಕ ವಾಸವಿದ್ದ ರುಕ್ಮಿಣಿ ಹಾಗೂ ಮಹದೇವಮ್ಮ ಅವರ ವಿರುದ್ಧ ದೂರು ಪಡೆದುಕೊಂಡು ಬಾಲಕ ಬಸವನಗೌಡ ಶರಣಪ್ಪನನ್ನು ರಕ್ಷಿಸಿದ್ದಾರೆ.
ಸಾಲಿಗ್ರಾಮ ಪೊಲೀಸ್ ಠಾಣೆಗೆ ರುಕ್ಮಿಣಿ ಹಾಗೂ ಮಹದೇವಮ್ಮ ಅವರ ವಿರುದ್ದ ದೂರು ದಾಖಲಿಸಿ ಸದ್ಯಕ್ಕೆ ಬಾಲಕ ಬಸವನಗೌಡ ಶರಣಪ್ಪನನ್ನು ಮೈಸೂರಿನ ಬಾಲ ಮಂದಿರಕ್ಕೆ ಬಿಟ್ಟಿದ್ದಾರೆ.
ಪ್ರಕರಣ ದಾಖಲಿಸಿ ಕೊಂಡಿರುವ ಸಾಲಿಗ್ರಾಮ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಕೃಷ್ಣರಾಜು ಅವರು, ಬಾಲಕನನ್ನು ಹಣ ಕೊಟ್ಟು ಖರೀದಿ ಮಾಡಿರುವ ರುಕ್ಮಿಣಿ ಹಾಗೂ ಮಹದೇವಮ್ಮ ಅವರನ್ನು ಬಂದಿಸಿ ವಶಕ್ಕೆ ಪಡೆದಿಲ್ಲ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿ ಬರುತ್ತದೆ. ಆ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದು ಮಾರಾಟ ಜಾಲದ ಬಗ್ಗೆ ಹಾಗೂ ಬಾಲಕ ತಂದೆ ಶರಣಪ್ಪಗೌಡ ಹಾಗೂ ಮಾರಾಟ ಮಾಡಿದ ಜಾಲದ ಬಗ್ಗೆ ಪತ್ತೆ ಮಾಡುತ್ತಾರಾ ಎಂದು ಕಾದು ನೋಡ ಬೇಕಿದೆ.
ರಾಜ್ಯದಲ್ಲಿ ದಿನೇ ದಿನೇ ಮಕ್ಕಳ ಮಾರಾಟ ಜಾಲ ಹೆಚ್ಚಾಗುತ್ತಿದ್ದು ರಾಜ್ಯ ಸರ್ಕಾರ ಹೆಚ್ಚಿನ ರೀತಿಯಲ್ಲಿ ಕ್ರಮವಹಿಸಿ ಇದಕ್ಕೆಲ್ಲ ಕಡಿವಾಣ ಹಾಕಲಿದೆಯ ಎನ್ನುತ್ತಿದ್ದಾರೆ ಜನರು.