ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಜಂಕ್ಷನ್ ನಿಂದ ಒಳಪೇಟೆಗೆ ಹೋಗುವ ಅಡ್ಡದಾರಿಯನ್ನು ರೈಲ್ವೆ ಮುಚ್ಚಿದೆ. ಹೀಗಾಗಿ ಸ್ಥಳೀಯರಿಗೆ ಸಮಸ್ಯೆ ಆಗುತ್ತಿರುವ ಬಗ್ಗೆ ದೂರುಗಳ ಬಂದ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ, ಸ್ಪೀಕರ್ ಯು.ಟಿ.ಖಾದರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಇದೇ ವೇಳೆ ಹಳಿಗೆ ಆಳವಡಿಸಿರುವ ಕಬ್ಬಿಣದ ಗೇಟ್‌ನೊಳಗೆ ಶಿಷ್ಟಾಚಾರ ಬದಿಗೊತ್ತಿ ನುಸುಳಿ ಆ ಕಡೆ ಪ್ರವೇಶಿಸಿದ ಯು.ಟಿ. ಖಾದರ್ ಜನಸಾಮಾನ್ಯರ ಬವಣೆಯನ್ನು ಸ್ವತಃ ಅರಿತುಕೊಳ್ಳುವ ಪ್ರಯತ್ನ ಮಾಡಿದರು.
ಹಲವು ವರ್ಷಗಳಿಂದ ಜನರು ಬಳಸುತ್ತಿದ್ದ ತೊಕ್ಕೊಟ್ಟಿನ ಈ ಕಾಲುದಾರಿಯ ಮಧ್ಯೆ ರೈಲ್ವೆ ಹಳಿ ಇದೆ. ಈ ಹಿನ್ನೆಲೆಯಲ್ಲಿ ಜನರು ಅತ್ಯಂತ ಎಚ್ಚರಿಕೆಯಿಂದ ಈ ದಾರಿಯನ್ನು ಬಳಸುತ್ತಿದ್ದರು. ಆದರೆ ಇತ್ತೀಚೆಗೆ ರೈಲ್ವೆ ಇಲಾಖೆ ಯಾವುದೇ ಸೂಚನೆ ನೀಡದೆ ಈ ದಾರಿಯನ್ನು ಕಬ್ಬಿಣದ ಸಲಾಕೆಗಳನ್ನು ಬಳಸಿ ಮುಚ್ಚಿ ಗೇಟ್ ಆಳವಡಿಸಲಾಗಿತ್ತು. ಇದರಿಂದ ಹಿರಿಯ ನಾಗರಿಕರು, ಮಹಿಳೆಯರಿಗೆ ಇಲ್ಲಿ ಹಳಿ ದಾಟುವುದು ಕಷ್ಟಕರವಾಗಿತ್ತು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ, ಜಿಲ್ಲಾಧಿಕಾರಿಗೆ ಸಾರ್ವಜನಿಕರು ದೂರು ನೀಡಿ ಗೇಟು ತೆರವುಗೊಳಿಸುವಂತೆ ಮನವಿ ಮಾಡಿದ್ದರು.