ಮದ್ದೂರು: ಎಲ್ಲೆಲ್ಲೂ ರಾಸುಗಳ ಕಲರವ… ಜತೆ ಜತೆಯಾಗಿ ಸಡಗರ ಸಂಭ್ರಮದಿಂದ ಓಡಾಡುವ ರಾಸುಗಳು… ರೈತರಿಗೆ, ವರ್ತಕರಿಗೆ ಎಲ್ಲಿಲ್ಲದ ಸಂತಸ… ಇಡೀ ಜಾತ್ರೆಯೇ ಒಂದು ವಿಶೇಷ…
ತಾಲೂಕಿನ ಆತಗೂರು ಹೋಬಳಿಯ ಚಿಕ್ಕ ಅಂಕನಹಳ್ಳಿಯ ಗ್ರಾಮದ ಪುರಾಣ ಪ್ರಸಿದ್ಧ ಹಾಗೂ ಶಿಂಷಾ ನದಿಯ ಎಡಭಾಗದಲ್ಲಿ ನೆಲಸಿರುವ ಶ್ರೀ ನಂದಿ ಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಕಂಡು ಬಂದ ದೃಶ್ಯಗಳು…
ಸುಮಾರು 60 ವರ್ಷಗಳ ಇತಿಹಾಸವಿರುವ ದನಗಳ ಜಾತ್ರೆ ಇದ್ದಾಗಿದ್ದು, ಕೋವಿಡ್ ನಂತರ ರಾಸುಗಳಿಗೆ ಬಂದ ಚರ್ಮ ಗಂಟು ರೋಗಗಳಿಂದ 4 ವರ್ಷಗಳಿಂದ ಜಾತ್ರೆ ನಡೆಯದೆ ಜಾತ್ರೆ ಕಳೆಗುಂದಿತ್ತು. ಈ ವರ್ಷ ಜಾತ್ರೆ ನಡೆಸಲು ಯಾವುದೇ ಆತಂಕ ಇಲ್ಲದಿರುವ ಪರಿಣಾಮ. ವರ್ಷದ ಮೊದಲ ಜಾತ್ರೆಗೆ ಎಲ್ಲಿಲ್ಲದ ಕಳೆ ತುಂಬಿದೆ.

ಜ 17 ರಿಂದ 23 ವರೆಗೆ ನಡೆಯುವ ಭಾರಿ ದನಗಳ ಜಾತ್ರೆ ಈಗಾಗಲೇ ಜಿಲ್ಲೆ ಹಾಗೂ ರಾಜ್ಯದ ವಿವಿದ ಭಾಗಗಳಿಂದ ಸಾವಿರಾರು ರಾಸುಗಳು ಆಗಮಿಸಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರಾಸುಗಳು ಆಗಮಿಲಿದ್ದು, ಜಾತ್ರೆ ಅಭೂತಪೂರ್ವವಾಗಿ ನಡೆಯಲಿದೆ.
ಜಾತ್ರೆಯಲ್ಲಿ ಬಹುತೇಕ ಹಳ್ಳಿಕಾರ ತಳಿಗಳೇ ಹೆಚ್ಚಾಗಿ ಕಂಡು ಬರುತ್ತದೆ. ಸಣ್ಣ ಹಲ್ಲುಗಳು, ಗಾಡಿ ಎತ್ತುಗಳು, 4 ಮತ್ತು 2 ಹಲ್ಲಿನ ಹಸುಗಳು ಜಾತ್ರೆಗೆ ಹೆಚ್ಚಿ ಸಂಖ್ಯೆಯಲ್ಲಿ ಬರುತ್ತಿವೆ. ಇದರ ಜತೆಗೆ ಸೀಮೆಹೋರಿ, ಟಗರು, ಕುರಿಗಳು ಸಹ ಬರುತ್ತದೆ.
ಜಾತ್ರೆಗೆ ಮಂಡ್ಯ, ತುಮಕೂರು, ರಾಮನಗರ, ಹಾಸನ, ಮೈಸೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೈತರು ರಾಸುಗಳನ್ನು ಜಾತ್ರೆಯಲ್ಲಿ ಕಟ್ಟುತ್ತಾರೆ ಹಾಗೂ ರಾಜ್ಯ ವಿವಿಧ ಭಾಗಗಳಿಂದ ರೈತರು ರಾಸುಗಳನ್ನು ಖರೀದಿಸಲು ಇಲ್ಲಿಗೆ ಬರುತ್ತಾರೆ ಇದರಿಂದ ಜಾತ್ರೆಯಲ್ಲಿ ಲಕ್ಷಾಂತರ ರೂ. ವ್ಯವಹಾರ ನಡೆಯುತ್ತದೆ.
50 ಸಾವಿರ ರೂ.ಗಳಿಂದ 5 ಲಕ್ಷ ರೂವರೆಗಿನ ರಾಸುಗಳು ಮಾರಾಟವಾಗುತ್ತದೆ. ಸಂಜೆಯಾಗುತ್ತಿದ್ದಂತೆ ರಾಸುಗಳಿಗೆ ಇರುವ ಶಾಮಿಯಾನಕ್ಕೆ ವಿದ್ಯುತ್ ಅಲಂಕಾರ, ಧ್ವನಿ ವರ್ಧಕ ಹಾಕಿ, ವಿಶೇಷವಾಗಿ ಅಲಂಕಾರ ಮಾಡಿ ಮೆರವಣಿಗೆ ಮಾಡುವುದು ವಿಶೇಷವಾಗಿದೆ.
ಹಲವಾರು ವರ್ಷಗಳಿಂದ ನಾವು ರಾಸುಗಳ ಸಮೇತ ಜಾತ್ರೆ ಬರುತ್ತಿದ್ದು, ಇಲ್ಲಿಗೆ ಬಂದು ಶ್ರೀ ನಂದಿ ಬಸವೇಸ್ವರಸ್ವಾಮಿ ಗೆ ವಿಶೇಷ ಪೂಜೆ ಮಾಡಿಸಿ ಜಾತ್ರೆಯಲ್ಲಿ ಭಾಗವಹಿಸಿ ಹೋದರೆ ಏನೋ ಒಂದು ತರಹ ನೆಮ್ಮದಿ ಸಿಗುತ್ತದೆ. ಆದ್ದರಿಂದ ಪ್ರತಿ ವರ್ಷ ತಪ್ಪದೆ ಜಾತ್ರೆಗೆ ಆಗಮಿಸುತ್ತಿದ್ದೇನೆ.
- ನಾರಾಯಣ ರೈತ ಪಾಂಡವಪುರ ತಾಲೂಕು, ಹೊಸಕೋಟೆ.
4 ವರ್ಷಗಳಿಂದ ಜಾತ್ರೆ ನಡೆಯದೆ ಈ ವರ್ಷ ನಡೆಯುತ್ತಿರುವುದರಿಂದ. ಹಿಂದೆಗಿಂತಲೂ ಈ ವರ್ಷ ಹೆಚ್ಚಿನ ಮಟ್ಟದಲ್ಲಿ ರಾಸುಗಳು ಸೇರಿರುವುದು ವಿಶೇಷವಾಗಿದ್ದು, ದೇಗುಲದ ಆವರಣ ಸೇರಿದಂತೆ ಸುತ್ತಮತ್ತಲ ಆವರಣದಲ್ಲಿ ಹಾಗೂ ರಸ್ತೆ ಇಕ್ಕೆಲುಗಳಲ್ಲಿ ದನಗಳನ್ನು ಕಟ್ಟಿರುವುದನ್ನು ನೋಡುವುದೇ ಒಂದೇ ಖುಷಿ.
ಅಂಗಡಿ ಮಾಲೀಕರಿಗೂ ಖುಷಿ: ಜಾತ್ರೆಯಲ್ಲಿ ಬೊಂಡ, ಬಜ್ಜಿ, ಕಡ್ಲೆಪುರಿ, ಮಿಕ್ಸರ್, ಗೋಬಿ ಮಂಚೂರಿ, ಹೂವು, ಬಾಳೆ, ಸೌತೆಕಾಯಿ ಸೇರಿದಂತೆ ಹಲವಾರು ಅಂಗಡಿಗಳಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರಿಗೆ ಜಾತ್ರೆಗೆ ಬಂದಿರುವುದರಿಂದ ಅಂಗಡಿ ಮಾಲೀಕರಿಗೂ ಉತ್ತಮ ವ್ಯಾಪಾರವಾಗುತ್ತಿದೆ.
ಜಾತ್ರೆ ನೋಡಲು ಜನರ ಆಗಮನ: ಜಾತ್ರೆಯಲ್ಲಿ ಹೆಚ್ಚಿನ ರಾಸುಗಳನ್ನು ಕಟ್ಟಿರುವುದರಿಂದ ಹಾಗೂ ನಂದಿ ಬಸವೇಶ್ವರ ಸ್ವಾಮಿ ದೇವರ ದರ್ಶನ ಪಡೆಯಲು ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಹಾಗೂ ರೈತರು ಆಗಮಿಸುತ್ತಿರುವುದು ವಿಶೇಷ.

ಪೊಲೀಸ್ ಬಂದೋಬಸ್ತ್: ಜಾತ್ರೆಯಲ್ಲಿ ದನ ಮಾರುವುದು ಮತ್ತು ಕೊಂಡುಕೊಳ್ಳುವ ಸಂದರ್ಭದಲ್ಲಿ ಲಕ್ಷಾಂತರ ರೂ. ವ್ಯವಹಾರ ನಡೆಯುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ ಮಾಡಲಾಗಿದೆ.
ಬಾಕ್ಸ್ ಐಟಂ: ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ರಾಸುಗಳ ಮೇಲಿನ ಸುಂಕ ಮತ್ತು ಅಂಗಡಿಗಳ ಸುಂಕವನ್ನು ಉದಯ್ ಚಾರಿಟಬಲ್ ಟ್ರಸ್ಟ್ ಭರಿಸುತ್ತಿದೆ ಇದರಿಂದ ರೈತರಿಗೆ ಹಾಗೂ ವರ್ತಕರಿಗೆ ಅನುಕೂಲವಾಗಿದೆ ಜತೆಗೆ ಟ್ರಸ್ಟ್ ವತಿಯಿಂದ ಉತ್ತಮ ರಾಸುಗಳಿಗೆ ಬಹುಮಾನ ನೀಡಲು ಟ್ರಸ್ಟ್ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಉದಯ್ ಮುಂದಾಗಿರುವುದು ರೈತರಿಗೆ ಮತ್ತು ವರ್ತಕರಿಗೆ ಸಂತೋಷ ತಂದಿದೆ. ಇದರ ಜತೆಗೆ ತಾಲೂಕು ಆಡಳಿತ ವತಿಯಿಂದ ಕುಡಿಯುವ ನೀರು ಸೇರಿದಂತೆ ರೈತರಿಗೆ ಜಾನುವಾರುಗಳಿಗೆ ಯಾವುದೆ ತೊಂದರೆಯಾಗದಂತೆ ಕ್ರಮ ಕೈಗೊಂಡಿರುವುದು ಮತ್ತಷ್ಟು ಖುಷಿ ತಂದಿದೆ.