Sunday, April 20, 2025
Google search engine

Homeರಾಜ್ಯಸುದ್ದಿಜಾಲಎಲ್ಲರೂ ಶಿಕ್ಷಣ ಪಡೆದಲ್ಲಿ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ: ಡಾ.ಮಂತರ್ ಗೌಡ

ಎಲ್ಲರೂ ಶಿಕ್ಷಣ ಪಡೆದಲ್ಲಿ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ: ಡಾ.ಮಂತರ್ ಗೌಡ

ಮಡಿಕೇರಿ: ಪ್ರತಿಯೊಬ್ಬರೂ ವಿದ್ಯಾಭ್ಯಾಸ ಪಡೆದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ. ಆ ನಿಟ್ಟಿನಲ್ಲಿ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಕರೆ ನೀಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಸೋಮವಾರ ನಡೆದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಹಾಗೂ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಸಮಾನತೆ ಸಾಧಿಸಲು ಪ್ರತಿಯೊಬ್ಬರೂ ವಿದ್ಯಾಭ್ಯಾಸ ಪಡೆದಾಗ ಮಾತ್ರ ಸಾಧ್ಯ. ಆ ನಿಟ್ಟಿನಲ್ಲಿ ವಿದ್ಯೆಗೆ ಪ್ರಥಮ ಆದ್ಯತೆ ನೀಡಬೇಕು ಎಂದರು. ಇಡೀ ವಿಶ್ವ ಒಂದು ಹಳ್ಳಿಯಾಗಿದೆ ಎಂದು ಹೇಳುತ್ತೇವೆ. ಆದರೆ ಜಾತಿಯತೆ ಹೋಗಿದೆಯೇ ಎಂಬುದನ್ನು ಆತ್ಮವಲೋಕನ ಮಾಡಿಕೊಳ್ಳಬೇಕು. ಮೌಡ್ಯ ಹಾಗೂ ಕಂದಾಚಾರಗಳಿಂದ ದೂರ ಇರಬೇಕು ಎಂದರು. ಅಲ್ಲಮಪ್ರಭು, ಬಿಜ್ಜಳ ಸೇರಿದಂತೆ ಬಸವಾದಿ ಶರಣರು ಸಮಾನತೆಗಾಗಿ ಎಲ್ಲರನ್ನೂ ಒಟ್ಟುಗೂಡಿಸಿ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಬಸವೇಶ್ವರರ ಸಮಕಾಲೀನರಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಹಾಗೂ ಅಂಬಿಗರ ಚೌಡಯ್ಯ ಅವರು ಕಾಯಕ ನಿಷ್ಠೆಯಿಂದ ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಆದರ್ಶ ತತ್ವಗಳನ್ನು ತಿಳಿದುಕೊಂಡು ಬದಲಾವಣೆಯತ್ತ ಹೆಜ್ಜೆ ಇಡಬೇಕು ಎಂದು ಅವರು ಹೇಳಿದರು.

ಭೋವಿ ಸಮಾಜದವರಿಗೆ ಜಾತಿ ಪ್ರಮಾಣ ಪತ್ರ ಒದಗಿಸುವಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಯಾರಿಗೂ ಅನ್ಯಾಯವಾಗದಂತೆ ಗಮನಹರಿಸಬೇಕು. ಅಗತ್ಯ ಸೌಲಭ್ಯಗಳು ತಲುಪಬೇಕು. ಆ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಶಾಸಕರು ತಿಳಿಸಿದರು. ಸರಸ್ವತಿ ಡಿ.ಇಡಿ ಕಾಲೇಜಿನ ಪ್ರಾಂಶುಪಾಲರಾದ ಕುಮಾರ ಅವರು ಮಾತನಾಡಿ ಶಿವಯೋಗಿ ಸಿದ್ದರಾಮೇಶ್ವರು ಬಸವಣ್ಣ, ಅಲ್ಲಮಪ್ರಭುಗಳ ಕಾಲದ ಮಹಾನ್ ಪವಾಡ ಪುರುಷರು. 12 ನೇ ಶತಮಾನದಲ್ಲೇ ಕಾಯಕದ ಮೂಲಕ ಆಧ್ಯಾತ್ಮ ಕಂಡುಕೊಂಡವರು. ಇವರ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ತಿಳಿದುಕೊಳ್ಳುವಂತಾಗಬೇಕು ಎಂದು ಅವರು ಹೇಳಿದರು.

ಫ.ಗು ಹಳಕಟ್ಟಿ ಅವರು ಸಿದ್ದರಾಮೇಶ್ವರ ವಚನಗಳನ್ನು ಸೇರಿ, ಶರಣರ ವಚನಗಳನ್ನು ಸಂಗ್ರಹಿಸಿದ್ದಾರೆ. ಇವರನ್ನು ಸೊನ್ನಲ್ಲಿಗೆ ಸಿದ್ದರಾಮೇಶ್ವರರು ಎಂತಲೂ ಕೂಡ ಕರೆಯುತ್ತಾರೆ. 12 ನೇ ಶತಮಾನದಲ್ಲೇ ಸಾವಿರಾರು ಕೆರೆ, ಕಟ್ಟೆಗಳನ್ನು ನಿರ್ಮಿಸಿದ್ದಾರೆ. ಅವರ ವಚನ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು. ನಿಜಶರಣ ಅಂಬಿಗರ ಚೌಡಯ್ಯ ಅವರು ಕಲ್ಯಾಣ ಕ್ರಾಂತಿಯ ನಂತರ ಇತರ ಶರಣರಂತೆ ಕಲ್ಯಾಣವನ್ನು ತೊರೆದು ನಾನಾ ಸ್ಥಳಗಳನ್ನು ಸಂದರ್ಶಿಸಿ ರಾಣಿಬೆನ್ನೂರು ತಾಲ್ಲೂಕಿನ ಚೌಡದಾನಪುರದಲ್ಲಿನ ತುಂಗಭದ್ರಾ ನದಿಯ ತಟದಲ್ಲಿ ಅಂಬಿಗನ ಕಾಯಕವನ್ನು ಮುಂದುವರೆಸುತ್ತಾ ತಮ್ಮ ಜೀವನವನ್ನು ಪೂರೈಸಿ ಅದೇ ಗ್ರಾಮದಲ್ಲಿ ಶಿವೈಕ್ಯರಾದರು. ಈಗಲೂ ಚೌಡದಾನಪುರದ ನದಿಯ ಬಳಿ ಅವರ ಸಮಾದಿ ಗದ್ದುಗೆ ಇದ್ದು ಪುಣ್ಯಕ್ಷೇತ್ರವಾಗಿ ಕಂಗೊಳಿಸುತ್ತಿದೆ ಎಂದರು.

ಭೋವಿ ಸಮಾಜದ ಜಿಲ್ಲಾಧ್ಯಕ್ಷರಾದ ಡಿ.ಸುಜೀತ್ ಅವರು ಮಾತನಾಡಿ ಭೋವಿ ಸಮಾಜದವರು ಅಸಂಘಟಿತ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಭೋವಿ ಸಮಾಜಕ್ಕೆ ಕಲ್ಲುಬಂಡೆ ಕೆಲಸಕ್ಕಾಗಿ 94ಎಫ್ ಕಾಯ್ದೆಯಡಿ ಶೇ.24 ರಷ್ಟು ಮೀಸಲಾತಿ ಒದಗಿಸಬೇಕು ಎಂದು ಕೋರಿದರು. ಅಸಂಘಟಿತ ಕಾರ್ಮಿಕರಿಗೆ ಸ್ವಂತ ನಿವೇಶನ ಇಲ್ಲ. ನಿವೇಶನ ಒದಗಿಸಿಕೊಡಬೇಕು. ಜಾತಿ ಪ್ರಮಾಣ ಪತ್ರವನ್ನು ಸರಿಪಡಿಸಬೇಕು. ಗಂಗಾ ಕಲ್ಯಾಣ ಯೋಜನೆಯಡಿ ಸಹಾಯಧನ ಕಲ್ಪಿಸಬೇಕು ಎಂದು ಕೋರಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಅವರು ಮಾತನಾಡಿ ಶಿವಯೋಗಿ ಸಿದ್ದರಾಮೇಶ್ವರರು 12 ನೇ ಶತಮಾನದಲ್ಲಿ ಶಿವಶರಣರಾಗಿದ್ದರು. ಕನ್ನಡ ಕಾವ್ಯ ಮತ್ತು ಸಮಕಾಲೀನ ವಚನ ಹಾಗೂ ಸಾಹಿತ್ಯಕಾರರಾಗಿದ್ದಾರೆ ಎಂದರು.

ಶಿವಯೋಗಿ ಸಿದ್ದರಾಮೇಶ್ವರರು ಕೆರೆಕಟ್ಟೆ, ಬಾವಿ ಇತರೆ ಅಭಿವೃದ್ಧಿ ಕೆಲಸಗಳಲ್ಲಿ ಹೆಚ್ಚು ಕಾಯಕ ಕಂಡಿದ್ದರು. ಇವರು 12 ನೇ ಶತಮಾನದಲ್ಲಿ ವಚನಕಾರರಲ್ಲಿ ಪ್ರಮುಖರಾಗಿದ್ದಾರೆ. ಹಾಗೆಯೇ ನಿಜಶರಣ ಅಂಬಿಗರ ಚೌಡಯ್ಯ ಅವರು ಸಮಾಜದಲ್ಲಿ ಸಮಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದ್ದಾರೆ ಎಂದು ವಿವರಿಸಿದರು. ತಹಶೀಲ್ದಾರರಾದ ಪ್ರವೀಣ್ ಕುಮಾರ್, ಐಟಿಡಿಪಿ ಇಲಾಖಾ ಅಧಿಕಾರಿ ಎಸ್.ಹೊನ್ನೇಗೌಡ ಇತರರು ಇದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ ಸ್ವಾಗತಿಸಿದರು. ಶಂಕರಯ್ಯ ನಾಡಗೀತೆ ಹಾಡಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.

RELATED ARTICLES
- Advertisment -
Google search engine

Most Popular