ಚಿಕ್ಕಬಳ್ಳಾಪುರ: ಅಯೋಧ್ಯೆ ರಾಮಮಂದಿರ ಉದ್ಘಾಟಿಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ೧೧ ದಿನ ಉಪವಾಸ ಮಾಡಿದ್ದರೇ? ಎಂದು ಅನುಮಾನ ವ್ಯಕ್ತಪಡಿಸಿದ ಕೇಂದ್ರ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ಅವರು ಕೂಡಲೇ ಕ್ಷಮೆ ಯಾಚಿಸಬೇಕೆಂದು ಬಿಜೆಪಿ ಆಗ್ರಹಿಸಿದೆ. ಮೊಯ್ಲಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಮೋದಿ ಹಿಂದುಳಿದ ಸಮುದಾಯದಿಂದ ಬಂದವರೆಂದು ಕಾಂಗ್ರೆಸ್ ನಾಯಕರು ಅವರನ್ನು ನಿಂದಿಸುತ್ತಿದ್ದಾರೆ ಎಂದರು.
ಇದೇನಾ ನಿಮ್ಮ ಕಾಂಗ್ರೆಸ್ ಪಕ್ಷದ ಜಾತ್ಯತೀತತೆ? ಇದೇನಾ ನಿಮ್ಮ ಪಕ್ಷದ ಸಮಾಜವಾದ? ಇದೇನಾ ನಿಮ್ಮ ಪಕ್ಷದ ಸಾಮಾಜಿಕ ನ್ಯಾಯ? ಇದೇನಾ ನಿಮ್ಮ ಕಾಂಗ್ರೆಸ್ ಪಕ್ಷ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಕೊಡುವ ಗೌರವ? ಎಂದು ಆರ್. ಅಶೋಕ್ ಪ್ರಶ್ನಿಸಿದ್ದಾರೆ.
ವೀರಪ್ಪ ಮೊಯ್ಲಿ ಅವರು ಈ ಕೂಡಲೇ ಪ್ರಧಾನಿ ಮೋದಿ ಅವರಲ್ಲಿ ಬಹಿರಂಗ ಕ್ಷಮೆ ಯಾಚಿಸಬೇಕು, ಇಲ್ಲವಾದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮೊಯ್ಲಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.