ಪಾಂಡವಪುರ : ಶಾಸಕ ರಮೇಶ್ ಜಾರಕಿಹೊಳಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸಿ.ಆರ್. ರಮೇಶ್ ಟೀಕಿಸಿದ್ದಾರೆ. ಸಭೆಯೊಂದರಲ್ಲಿ ಮಾತನಾಡುವಾಗ ರಮೇಶ್ ಜಾರಕಿಹೊಳಿ, ಒಂದು ವೇಳೆ ಕೊತ್ವಾಲನ ಶಿಷ್ಯನ ಕೈಗೆ ಹಾಗೂ ಬೆಳಗಾವಿ ವಿಷಕನ್ಯೆಗೆ ಅಧಿಕಾರ ಸಿಕ್ಕಿದರೆ ನಮ್ಮ ಆಸ್ತಿಗೆಲ್ಲ ಅವರ ಹೆಸರನ್ನು ಸೇರಿಸಿಕೊಳ್ಳುತ್ತಿದ್ದರು ಎಂದು ಹೇಳಿಕೆ ನೀಡಿರುವುದು ಸರಿಯಲ್ಲ. ಈ ಕೂಡಲೇ ರಾಜ್ಯದ ಜನತೆಯಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಅನುಭವಿಸಿ ಆ ಪಕ್ಷಕ್ಕೆ ಮೋಸ ಮಾಡಿದ ಮಹಾನುಭಾವರಿಂದ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಸರ್ಟಿಫಿಕೆಟ್ ಬೇಕಾಗಿಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಸಮರ್ಪಕವಾಗಿ ಸರ್ಕಾರ ನಡೆಸುತ್ತಿದ್ದಾರೆ. ರಾಜ್ಯದ ಜನರಿಗೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ರಮೇಶ್ ಜಾರಕಿಹೊಳಿಗೆ ರಾಜ್ಯದ ಜನತೆ ಬಗ್ಗೆ ಕಿಂಚಿತ್ತೂ ಗೌರವವಿದ್ದರೆ, ಮಾನ ಮಾರ್ಯಾದೆ ಇದ್ದರೆ ರಾಜಕೀಯದಿಂದ ನಿವೃತ್ತಿ ಹೊಂದಬೇಕು ಎಂದು ಆಗ್ರಹಿಸಿದ್ದಾರೆ. ಈ ಹಿಂದೆ ಈತನ ರಾಸಲೀಲೆಯನ್ನು ದೇಶವೇ ನೋಡಿದೆ.
ಇತ್ತೀಚೆಗೆ ತಾನು ನಡೆಸುತ್ತಿರುವ ಸಕ್ಕರೆ ಕಾರ್ಖಾನೆಗೆ ಸಾಲ ಪಡೆದು ಬ್ಯಾಂಕ್‌ಗಳಿಗೆ ಮೋಸ ಮಾಡಿದ್ದಾರೆ. ಇನ್ನೂ ಆ ಭಾಗದ ರೈತರಿಗೆ ಯಾವ ರೀತಿ ಅನ್ಯಾಯ ಮಾಡಿದ್ದಾನೆ ಎನ್ನುವ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಜತೆಗೆ ಒಬ್ಬ ಹೆಣ್ಣು ಮಗಳು ಸಚಿವೆ ಲಕ್ಷ್ಮೀ ಹೆಬ್ಬಾಳ್‌ಕರ್ ಅವರನ್ನು ವಿಷಕನ್ಯೆ ಎಂದಿರುವ ರಮೇಶ್ ಜಾರಕಿಹೊಳಿ ನಾಡಿನ ಹೆಣ್ಣು ಮಕ್ಕಳಿಗೆ ನೀಡುವ ಗೌರವ ಆತನ ಪದಬಳಕೆಯಿಂದಲೇ ಅರ್ಥವಾಗುತ್ತದೆ. ಈತನೊಬ್ಬ ಬೆಳಗಾವಿ ಜಿಲ್ಲೆಯ ಕೆಟ್ಟ ಹಾಗೂ ನಡತೆಗೆಟ್ಟ ರಾಜಕಾರಣಿ. ಈಗಾಗಲೇ ಇವರ ಟೀಂಗೆ ಬೆಳಗಾವಿ ಜಿಲ್ಲೆಯ ಮತದಾರರು ಕಳೆದ ಚುನಾವಣೆಯಲ್ಲಿ ಬುದ್ದಿಕಲಿಸಿದ್ದಾರೆ.
ಯಾರು ವಿಷ ಸರ್ಪ ಎಂಬುದು ಅಲ್ಲಿನ ಜನರಿಗೆ ಅರಿವಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಡಿಕೆಶಿ ಬಗ್ಗೆ ಹಗುರವಾಗಿ ಮಾತನಾಡುತ್ತಾ ನಾಲಿಗೆ ಹರಿಬಿಟ್ಟರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.