ಚಾಮರಾಜನಗರ: ಜನವರಿ ೨೩ ಜನತಾ ದರ್ಶನದಲ್ಲಿ ಸಾರ್ವಜನಿಕರಿಂದ ಸ್ವೀಕರಿಸಲಾಗುವ ದೂರು ಅರ್ಜಿಗಳ ತ್ವರಿತ ವಿಲೇವಾರಿಗೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜನತಾ ದರ್ಶನ ಪೋರ್ಟಲ್, ಜಿಲ್ಲಾಮಟ್ಟದ ಜನತಾ ದರ್ಶನ ಹಾಗೂ ಸಾರ್ವಜನಿಕ ದೂರು ನಿವಾರಣಾ ತಂತ್ರಾಂಶ (ಐಪಿಜಿಆರೆಸ್) ವ್ಯವಸ್ಥೆಯಡಿ ಆನ್‌ಲೈನ್‌ನಲ್ಲಿ ಮೊಬೈಲ್ ಆಪ್ ಹಾಗೂ ಪೋರ್ಟಲ್ ಮೂಲಕ ಸ್ವೀಕೃತಗೊಳ್ಳುವ ಅರ್ಜಿಗಳನ್ನು ಕಾಲಮಿತಿಯಲ್ಲಿ ಪರಿಹರಿಸಲು ಮುಂದಾಗಬೇಕು. ಕಂದಾಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಆಗಬೇಕಾಗಿರುವ ಕೆಲಸ ಕಾರ್ಯಗಳಲ್ಲಿ ವಿಳಂಬಕ್ಕೆ ಅಸ್ಪದವಾಗದಂತೆ ಅಧಿಕಾರಿಗಳು ಗಮನ ಹರಿಸಬೇಕು ಎಂದರು.
ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸಲು ಜಿಲ್ಲಾ ಹಾಗೂ ತಾಲೂಕುಮಟ್ಟದಲ್ಲಿ ಜನತಾ ದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಾಗರಿಕರಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಜಿಲ್ಲಾಮಟ್ಟದ ಜನತಾ ದರ್ಶನದಲ್ಲಿ ಸಾರ್ವಜನಿಕರಿಂದ ಸ್ವೀಕರಿಸಿದ ಮನವಿಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವರು ನಿರ್ದೇಶನ ನೀಡಿದ್ದಾರೆ. ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಜನರ ಸಮಸ್ಯೆಗಳ ಪರಿಹಾರಕ್ಕೆ ನಿಗದಿತ ಕಾಲಮಿತಿಯಲ್ಲಿ ಸೂಕ್ತ ಕ್ರಮವಹಿಸಬೇಕು. ಮುಂದಿನ ಒಂದು ವಾರದೊಳಗೆ ದಾಖಲಾಗಿರುವ ಎಲ್ಲಾ ದೂರುಗಳ ಶೀಘ್ರ ಪರಿಹಾರಕ್ಕೆ ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿಯವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಮನೆ, ನಿವೇಶನ, ಇತರೆ ಸೌಲಭ್ಯಗಳಿಗೆ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ನೇರವಾಗಿ ಸಂಬಂಧಪಟ್ಟ ಗ್ರಾಮ ಪಂಚಾಯತ್‌ಗೆ ವರ್ಗಾಯಿಸುವುದು ಸೂಕ್ತ ಪರಿಹಾರವಲ್ಲ. ಪತ್ರ ವ್ಯವಹಾರದ ಮೂಲಕ ಗ್ರಾಮ ಪಂಚಾಯತ್‌ಗೆ ವಿವರಣೆ ನೀಡಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಗೃಹಲಕ್ಷ್ಮೀ ಯೋಜನೆ ನೊಂದಣಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಆಧಾರ್ ಸೀಡಿಂಗ್ ಹಾಗೂ ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡುವ ಕಾರ್ಯವನ್ನು ಅದಷ್ಟು ಬೇಗನೇ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.