ಗುಂಡ್ಲುಪೇಟೆ: ಜಿಲ್ಲಾ ಪಂಚಾಯತ್, ಚಾಮರಾಜನಗರ, ತಾಲ್ಲೂಕು ಪಂಚಾಯತ್, ಗುಂಡ್ಲುಪೇಟೆ, ಗ್ರಾಮ ಪಂಚಾಯತಿ ಹಾಗೂ ನಿಸರ್ಗ ಟ್ರಸ್ಟ್ ಗುಂಡ್ಲುಪೇಟೆ ಇವರ ಸಹಯೋಗದಲ್ಲಿ ಇಂದು ಬಲಚವಾಡಿ ಗ್ರಾಮದಲ್ಲಿ ಕಾನೂನು ಅರಿವು ಮತ್ತು ನೆರವು ಹಾಗೂ ಆರೋಗ್ಯ ನೈರ್ಮಲ್ಯ ಅರಿವು ಕಾರ್ಯಕ್ರಮವನ್ನು ಆಯೋಗಿಸಲಾಗಿತ್ತು.
ಕಾರ್ಯಕ್ರಮದಲ್ಲಿ ನ್ಯಾಯವಾದಿ ಬಂಗಾರನಾಯಕ ರವರು ಮಾತನಾಡಿ ಕಾನೂನಿನ ವೈಶಾಲ್ಯತೆ ಹಾಗೂ ” ತಾಯಿ ಗರ್ಭದಲ್ಲಿ ಬೆಳೆಯುವ ಭ್ರೂಣದಿಂದ ಭೂ ತಾಯಿಯ ಮಡಿಲಲ್ಲಿ ಕೊಳೆಯುವ ದೇಹದವರೆಗೆ ಪ್ರತಿಯೊಬ್ಬ ಮನುಷ್ಯನಿಗೆ ಕಾನೂನು ಅನ್ವಯಿಸುತ್ತದೆ ” ಎಂದು ತಿಳಿಸಿದರು.
ಬಡವರಿಗೆ, ಅಂಗವಿಕಲರಿಗೆ, ವಿಧವೆಯರಿಗೆ, ಆರ್ಥಿಕವಾಗಿ ಹಿಂದುಳಿದ ಜನಾಂಗದವರಿಗೆ, ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಸರ್ಕಾರದಿಂದ ದೊರೆಯುವ ಸವಲತ್ತುಗಳ ಬಗ್ಗೆ ಹಾಗೂ ರಾಷ್ಟ್ರೀಯ, ರಾಜ್ಯ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಹಾಗೂ ತಾಲ್ಲೂಕು ಉಚಿತ ಕಾನೂನು ಸೇವಾ ಸಮಿತಿಯಿಂದ ದೊರೆಯುವ ಉಚಿತ ಕಾನೂನು ಅರಿವು ಹಾಗೂ ನೆರವಿನ ಬಗ್ಗೆ ತಿಳಿಸಿದರು.
ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆದುಕೊಳ್ಳಲು ಅವಶ್ಯಕವಾದ ಎಲ್ಲಾ ದಾಖಲೆಗಳನ್ನು ಪ್ರತಿಯೊಬ್ಬರು ಸಿದ್ದಪಡಿಸಿಕೊಂಡಿರಬೇಕು ಎಂದು ತಿಳಿಸಿದರು .
ಮಾನವ ಹಕ್ಕುಗಳ ಬಗ್ಗೆ, ಸರ್ಕಾರದ ಜವಾಬ್ದಾರಿಗಳ ಬಗ್ಗೆ, ಹಿಂದೂ ವಿವಾಹ, ವಿಚ್ಚೇಧನ, ಜೀವನಾಂಶ, ಮಹಿಳೆಯರಿಗೆ ಇರುವ ಆಸ್ತಿ ಹಕ್ಕುಗಳು, ಕಾರ್ಮಿಕರ ಹಕ್ಕುಗಳು, ನರೇಗಾ ಯೋಜನೆಯಡಿ ನಿಗಧಿತ ಕೂಲಿ ಬಗ್ಗೆ ಮತ್ತು ಮೋಟಾರು ವಾಹನ ಕಾಯ್ದೆ ಬಗ್ಗೆ, ಕ್ರಿಮಿನಲ್ ಪ್ರಕರಣಗಳ ಬಗ್ಗೆ, ಆಸ್ತಿಗಳ ಹಸ್ತಾoತರದ ಬಗ್ಗೆ, ಹಣಕಾಸಿಗೆ ಸಂಬಂಧಪಟ್ಟ ಪ್ರಕರಣಗಳ ಬಗ್ಗೆ, ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಖಾತೆ ವರ್ಗಾವಣೆಗೆ ಸಂಬಂಧಪಟ್ಟ ವಿವಾದಗಳ ಬಗ್ಗೆ ಸವಿವರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ನಿಸರ್ಗ ಟ್ರಸ್ಟ್ ಅಧ್ಯಕ್ಷರಾದ ನಿಸರ್ಗ ನಾಗರಾಜು, ಪಿ.ಡಿ.ಒ. ಶ್ರೀಮತಿ ಕವನ, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.