ಪಿರಿಯಾಪಟ್ಟಣ: ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟ ಮಾತಿನಂತೆ ನಡೆಯದೆ ಚುನಾವಣೆ ಸಂದರ್ಭ ಜನರನ್ನು ಮಂಕು ಮಾಡಲು ಶ್ರೀರಾಮನ ಜಪ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ತಾಲೂಕಿನ ಮುತ್ತಿನಮುಳುಸೋಗೆ ಗ್ರಾಮದ ಹತ್ತಿರ ಕಾವೇರಿ ನದಿಯಿಂದ ನೀರೆತ್ತಿ 150 ಕೆರೆಗಳು ಹಾಗೂ ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿ ಕೊಪ್ಪ ಗ್ರಾಮದ ಬಳಿ ನಡೆದ ಬೃಹತ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಿಜೆಪಿಯವರಿಗೆ ಜನಪರ ಕಾಳಜಿ ಇಲ್ಲ ಮೊದಲ ಬಾರಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಜಾರಿಗೆ ತಂದಿದ್ದ ಎಲ್ಲಾ ಯೋಜನೆಗಳನ್ನು ಅವರು ರದ್ದುಗೊಳಿಸಿದ್ದರು. ಆದರೆ ಮತ್ತೆ ನಾವು ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಯೋಜನೆಗಳನ್ನು ನೀಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಅಭಿವೃದ್ಧಿಗೂ ಶ್ರಮಿಸಿದ್ದೇವೆ, ಜೆಡಿಎಸ್ ಪಕ್ಷದವರು ನಾವು ಜಾತ್ಯತೀತ ಎಂದು ಹೇಳಿಕೊಂಡು ಅಧಿಕಾರದಾಸೆಗಾಗಿ ಕೋಮುವಾದಿಗಳ ಜೊತೆ ಸೇರಿದ್ದಾರೆ.

ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಅಧಿಕಾರದ ಹಿಂದೆ ಬಿದ್ದಿವೆ. ಆದರೆ ಕಾಂಗ್ರೆಸ್ ಪಕ್ಷ ಅಭಿವೃದ್ಧಿಯ ಹಿಂದೆ ಬಿದ್ದಿದೆ, ರೈತರು ಮತ್ತು ಜಾನುವಾರುಗಳ ಉಪಯೋಗ ಹಾಗೂ ಅಂತರ್ಜಾಲ ಜಾಸ್ತಿಯಾ ಗಲು ನಾನೇ ಯೋಜನೆ ಶಂಕುಸ್ಥಾಪನೆ ಮಾಡಿದ್ದೇ ಈಗ ನಾನೇ ಉದ್ಘಾಟನೆ ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ. ಈ ಯೋಜನೆ 79 ಹಳ್ಳಿಗಳಿಗೆ ಹಾಗೂ 93 ಸಾವಿರ ಜನರಿಗೆ ಅನುಕೂಲವಾಗಲಿದೆ, ನಾವು ನುಡಿದಂತೆ ನಡೆದು ಕೊಟ್ಟ ಮಾತಿನಂತೆ ನಡೆದಿದ್ದೇವೆ, ರಾಜ್ಯದಲ್ಲಿ ಬರಗಾಲವಿದೆ ನಾವು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದೇವೆ ಕೇಂದ್ರದಿಂದ ತಂಡ ಬಂದು ತನಿಖೆ ಮಾಡಿ ವರದಿ ತೆಗೆದುಕೊಂಡು ಹೋಯಿತು ಆದರೆ ಕೇಂದ್ರದಿಂದ ಇವತ್ತಿನವರೆಗೆ 1 ರೂ ಕೊಟ್ಟಿಲ್ಲ, ಪ್ರಧಾನಮಂತ್ರಿ ಹಾಗೂ ಅಮಿತ್ ಶಾ ರಲ್ಲಿ ಮನವಿ ಮಾಡಿದರು.
ದುಡ್ಡು ಬಂದಿಲ್ಲ ಕೇಂದ್ರದವರು ಕರ್ನಾಟಕದ ಬಗ್ಗೆ ಮಲತಾಯಿ ದೋರಣೆ ಮಾಡುತ್ತಿದ್ದಾರೆ, ಸಂಸದ ಪ್ರತಾಪ್ ಸಿಂಹ ಅದು ಮಾಡಿದೆ ಇದು ಮಾಡಿದೆ ಎಂದು ಮಾತಾಡಿದ್ದೆ ಮಾತಾಡಿದ್ದು ಆದರೆ ಬರ ಪರಿಹಾರದಲ್ಲಿ ಬಿಜೆಪಿಯ 25 ಸಂಸದರು ಮಾತೇ ಆಡುವುದಿಲ್ಲ, ಬಿಜೆಪಿಯವರು ಮಾತ್ರ ಹಿಂದೂಗಳೇ ಶ್ರೀರಾಮನನ್ನು ದತ್ತು ತೆಗೆದುಕೊಂಡಿದ್ದಾರೆಯೆ ನಾವು ಶ್ರೀರಾಮನ ಭಕ್ತರೇ, ಜೈ ಶ್ರೀರಾಮ್ ವಾಕ್ಯ ಬಿಜಿಪಿ ಅವರ ಆಸ್ತೀಯಲ್ಲ, ಮೊನ್ನೆ ಬೆಂಗಳೂರಿನಲ್ಲಿ ರಾಮಮಂದಿರ ಉದ್ಘಾಟನೆ ಮಾಡಿ ಜೈ ಶ್ರೀರಾಮ್ ಅಂತ ಘೋಷಣೆ ಕೂಗಿಸಿದೆ, ನನ್ನ ಹೆಸರಲ್ಲೇ ರಾಮ ಇದ್ದಾನೆ, ಈ ಡೋಂಗಿಗಳನ್ನು ಮುಂಬರುವ ಚುನಾವಣೆ ಸೋಲಿಸಿ ಕಾಂಗ್ರೆಸ್ ಗೆಲ್ಲಿಸಿ ಎಂದರು.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಾತನಾಡಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬಂದ ಮೇಲೆ ಒಳ್ಳೆಯ ಅಭಿವೃದ್ಧಿ ಮಾಡಿ ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ, ರೈತರ ಬವಣೆ ಮತ್ತು ನೀರಿನ ಸಮಸ್ಯೆ ಬಗೆಹರಿಸಲು ನಾವೆಲ್ಲರೂ ಸಿದ್ದರಿದ್ದೇವೆ, ಪಾರ್ಲಿಮೆಂಟ್ ನಲ್ಲಿ ಹೆಚ್ಚಿನ ಶಕ್ತಿ ಪಕ್ಷಕ್ಕೆ ತುಂಬಿ ಅಧಿಕಾರ ನೀಡಿ ಮತ್ತಷ್ಟು ಅಭಿವೃದ್ಧಿ ಮಾಡುತ್ತೇವೆ, ಅವರು ಭಾವನೆ ಹಿಂದೆ ಹೊರಟಿದ್ದಾರೆ ನಾವು ಬದುಕಿನ ಹಿಂದೆ ಹೊರಟಿದ್ದೇವೆ, ರಾಮ ಮಂದಿರ ಉದ್ಘಾಟನೆ ಬಹಳ ಸಂತೋಷ ನಮಗೂ ಭಾವನೆಗಳಿವೆ ಆದರೆ ಬದುಕು ನಡೆಯಬೇಕಲ್ಲ ನಿಮ್ಮ ಬದುಕಿಗೆ ಬೇಕಾದ ಯೋಜನೆಗಳನ್ನು ನಾವು ಗ್ಯಾರಂಟಿ ಮೂಲಕ ನೀಡಿದ್ದೇವೆ, ರಾಮ ಎಲ್ಲಾ ಕಡೆ ಇದ್ದಾನೆ ಸಿದ್ದರಾಮಯ್ಯ ಹೆಸರಲಿ ರಾಮ, ನನ್ನ ಹೆಸರಲ್ಲಿ ಶಿವ, ವೆಂಕಟೇಶ್ ಹೆಸರಲ್ಲಿ ವೆಂಕಟೇಶ್ವರ, ಮಹದೇವಪ್ಪ ಹೆಸರಲ್ಲಿ ಮಹದೇಶ್ವರ ಇದ್ದಾನೆ ನಾವುಗಳು ಹಿಂದೂಗಳಲ್ಲವೆ, ಇವರು ಕೊಟ್ಟ ಮಂತ್ರಾಕ್ಷತೆಯಲ್ಲಿ ಸಿದ್ದರಾಮಯ್ಯ ಕೊಟ್ಟ ಅನ್ನ ಭಾಗ್ಯದ ಅಕ್ಕಿಯಿದೆ,ದೇವೇಗೌಡರು ಮೇಕೆದಾಟು ವಿಚಾರದಲ್ಲಿ ಸರ್ಕಾರ ಕೆಲಸ ಮಾಡುತ್ತಿಲ್ಲ ಎಂದಿದ್ದಾರೆ ಆದರೆ ನಮ್ಮ ಅವಧಿ ಮುಗಿಯೋ ಒಳಗೆ ಮೇಕೆದಾಟು ಯೋಜನೆ ಜಾರಿ ಮಾಡುತ್ತೇವೆ ಎಂದರು.
ಸಚಿವರಾದ ಕೆ.ವೆಂಕಟೇಶ್ ಮಾತನಾಡಿ ಜನರ ಬಗ್ಗೆ ಯಾರೂ ಯೋಚನೆ ಮಾಡುತ್ತಾರೋ ಅವರು ಮಾತ್ರ ರಾಜಕಾರಣದಲ್ಲಿ ಬಹಳ ದಿನಗಳ ಕಾಲ ಜನರ ಮನಸಿನಲ್ಲಿ ಉಳಿಯುತ್ತಾರೆ, ಹಿಂದೆ ತಾಲ್ಲೂಕನ್ನು ಆಳಿದ ಶಾಸಕ ಸಚಿವರು ಯಾರು ಯಾವ ಶಾಶ್ವತ ಯೋಜನೆ ತರಲಿಲ್ಲ, ತಾಲ್ಲೂಕಿನಲ್ಲಿ ಏನೇ ಅಭಿವೃದ್ದಿ ಆಗಿದ್ದರು ಅದು ನನ್ನಿಂದ ಇದಕ್ಕೆ ಸಹಕಾರ ನೀಡಿದವರು ಸಿದ್ದರಾಮಯ್ಯನವರು, ಬಿಜೆಪಿಯವರು ಅಕ್ಕಿಗೆ ಅರಿಶಿನ ಹಾಕಿ ಆಯೋದ್ಯೆ ಮಂತ್ರಾಕ್ಷತೆ ಎಂದು ಮನೆ ಮನೆಗೆ ನೀಡಿ ಜನರ ಭಾವನೆ ಜೊತೆ ಆಟ ಆಡಿದ್ದಾರೆ, ಕಾಂಗ್ರೆಸ್ ಋಣ ಜನರ ಮೇಲಿದೆ ಹಾಗಾಗಿ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಜನರು ಕಾಂಗ್ರೆಸ್ ಋಣ ತೀರಿಸಬೇಕು ಎಂದರು.
ಇದೇ ವೇಳೆ ರೇಷ್ಮೆ, ಕೃಷಿ ಹಾಗೂ ಪಶು ವೈದ್ಯಕೀಯ ಇಲಾಖೆಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು.

ಈ ಸಂದರ್ಭ ಸಚಿವರಾದ ಎಚ್.ಸಿ ಮಹದೇವಪ್ಪ, ಬೋಸರಾಜು, ಶಾಸಕರಾದ ಡಿ.ರವಿಶಂಕರ್, ಹರೀಶ್ ಗೌಡ, ಮಂತರ್ ಗೌಡ, ವಿಧಾನಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಮರಿತಿಬ್ಬೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ ವಿಜಯ್ ಕುಮಾರ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್, ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ, ಜಿ.ಪಂ ಸಿಇಒ ಗಾಯಿತ್ರಿ, ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಜಲ ಸಂಪನ್ಮೂಲ ಇಲಾಖೆ ಅಪಾರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಮುಖ್ಯ ಇಂಜಿನಿಯರ್ ಆರ್.ಎಲ್ ವೆಂಕಟೇಶ್, ಅಧಿಕ್ಷಕ ಇಂಜಿನಿಯರ್ ಕೆ.ಕೆ ರಘುಪತಿ, ಕಾರ್ಯಪಾಲಕ ಇಂಜಿನಿಯರ್ ಎನ್.ಎಸ್ ದೇವೇಗೌಡ, ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಕೆ.ಎಂ ಶಿವಕುಮಾರ್, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಮುಖಂಡರು ಇದ್ದರು.