ಮೈಸೂರು: ಮಹಾಜನ ವಿದ್ಯಾಸಂಸ್ಥೆ ಎಸ್.ಬಿ.ಆರ್.ಆರ್. ಮಹಾಜನ ಕಾನೂನು ಕಾಲೇಜು ಜಿಲ್ಲಾ ಕಾನೂನು
ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಗುರುವಾರ “ನ್ಯಾಯ ತಲುಪಿಸುವಲ್ಲಿ ಕಾನೂನು ಸೇವಾ ಪ್ರಾಧಿಕಾರಗಳ ಹೊಣೆಗಾರಿಕೆ ಮತ್ತು ಪಾತ್ರ” ಸಂಬಂಧಿಸಿದ ವಿಚಾರ ಸಂಕೀರ್ಣವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹಾಗೂ ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಗೌರವಾನ್ವಿತ ಶ್ರೀಮತಿ ಪ್ರಭಾವತಿ ಎಂ. ಹಿರೇಮಠ್‌ರವರು ಉದ್ಘಾಟಿಸಿದರು.
ಮೈಸೂರಿನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಮೈಸೂರಿನ ಜಿಲ್ಲಾ ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಗೌರವಾನ್ವಿತ ಶ್ರೀ ದಿನೇಶ್ ಬಿ.ಜಿ.ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರಿನ ಪೂಜಾ ಭಾಗವತ್ ಪಿ.ಜಿ. ಸೆಂಟರ್‌ನ ನಿರ್ದೇಶಕರಾದ ಡಾ. ಸಿ.ಕೆ.
ರೇಣುಕಾರ್ಯರವರು ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ನ್ಯಾಯಾಧೀಶರಾದ
ಶ್ರೀಮತಿ ಪ್ರಭಾವತಿ ಎಂ. ಹಿರೇಮಠ್‌ರವರು “ಕಾನೂನು ಸೇವೆಯನ್ನು ಸಲ್ಲಿಸುವಲ್ಲಿ ಕಾನೂನು ವಿದ್ಯಾರ್ಥಿಗಳ ಪಾತ್ರ ಬಹಳ ಅಮೂಲ್ಯವಾದದ್ದು. ಸಮಾಜದಲ್ಲಿ ತುಳಿತಕ್ಕೆ ಒಳಗಾದವರ, ನೊಂದ ಜನರಿಗೆ ನ್ಯಾಯವನ್ನು ಒದಗಿಸಿ ಕೊಡುವ ನಿಟ್ಟಿನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಜೊತೆಗೆ ಕಾನೂನು ವಿದ್ಯಾರ್ಥಿಗಳೂ
ಕೈ ಜೋಡಿಸಬೇಕು” ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ದಿನೇಶ್ ಬಿ.ಜಿ.ರವರು ಮಾತನಾಡಿ “ಕಾನೂನು ಸೇವೆಗಳು ಸರಿಯಾಗಿ ತನ್ನ ಗುರಿ ತಲುಪಲಾಗುತ್ತಿಲ್ಲವಾದ ಕಾರಣ ‘ಕಾನೂನು ನೆರವು ರಕ್ಷಣಾ ಸಮಿತಿ’ಯನ್ನು ಜಾರಿಗೆ ತರಲಾಗಿದ್ದು, ಈ ಮೂಲಕ ಸಮಾಜದಲ್ಲಿ ಅರ್ಹ ವ್ಯಕ್ತಿಗಳಿಗೆ ಸಮಾನ ನ್ಯಾಯವನ್ನು ಒದಗಿಸಿ ಕೊಡುವುದೇ ಕಾನೂನು ಸೇವಾ ಪ್ರಾಧಿಕಾರಗಳ ಮುಖ್ಯ ಕರ್ತವ್ಯವಾಗಿರುತ್ತದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾನೂನಿನ ಕಾಲೇಜಿನ ನಿರ್ದೇಶಕರಾದ ಪ್ರೋ.ಪ್ರಭುಸ್ವಾಮಿ,ಪ್ರಾಂಶುಪಾಲರಾದ ಸೌಮ್ಯ ಹಾಗೂ ಕಾಲೇಜಿನ ಭೋದಕ ವರ್ಗ & ವಿದ್ಯಾರ್ಥಿಗಳು ಹಾಜರಿದ್ದರು.
