ಬೀದರ್ : ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗೆ ಜೈಶ್ರೀರಾಮ್ ಹೇಳುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ ಆರೋಪದ ಮೇಲೆ ನಾಲ್ವರನ್ನು ಬೀದರ್‌ನ ಹುಮನಾಬಾದ್ ಪೊಲೀಸರು ಬಂಧಿಸಿದ್ದಾರೆ.
ಹುಮನಾಬಾದ್ ತಾಲೂಕಿನ ಹಣಸಗೇರಾ ಗ್ರಾಮದ ದ್ವಿತೀಯ ಪಿಯು ಓದುತ್ತಿರುವ ವಿದ್ಯಾರ್ಥಿ ದರ್ಶನ್ ಲಕ್ಷ್ಮಣ ಕಟ್ಟಿಮನಿ ನೀಡಿದ ದೂರು ಆಧರಿಸಿ ಅಭಿಷೇಕ್, ರಿತೇಶ್ ರೆಡ್ಡಿ, ಸುನಿಲ್ ರೆಡ್ಡಿ ಮತ್ತು ಅಭಿಷೇಕ್ ತೆಲಂಗ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ವರದಿಗಳ ಪ್ರಕಾರ, ಹಲ್ಲೆಗೊಳಗಾದ ವಿದ್ಯಾರ್ಥಿ ದರ್ಶನ್ ಜನವರಿ ೨೨ ಅಯೋಧ್ಯೆ ರಾಮಮಂದಿರದ ಉದ್ಘಾಟನೆಯ ದಿನ ನೀನೇ ದೇವಾ ನೀನೇ ಎಲ್ಲಾ, ಇವನಲ್ಲಾ ಗುರು ಅವನು, ನಾವೆಲ್ಲ ಅವರ ಅಭಿಮಾನಿಗಳು ಎಂದು ಡಾ.ಬಿ.ಆರ್.ಅಂಬೇಡ್ಕರ್, ರಾಮ ಮತ್ತು ಹನುಮಂತನ ಪೊಟೋ ಇರುವ ವಿಡಿಯೋ ಸ್ಟೇಟಸ್ ಇಟ್ಟುಕೊಂಡಿದ್ದ. ಇದನ್ನು ಗಮನಿಸಿದ ನಾಲ್ವರು ದರ್ಶನ್‌ನನ್ನು ಆಟೋದಲ್ಲಿ ಹನುಮಾನ್ ದೇವಸ್ಥಾನಕ್ಕೆ ಕರೆದೊಯ್ದು, ಜೈ ಶ್ರೀರಾಮ್ ಎಂದು ಹೇಳಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕೇಸರಿ ಶಾಲು ಧರಿಸಿದ್ದ ನಾಲ್ಕೈದು ಮಂದಿ ಯುವಕರು ಮತ್ತೊಬ್ಬ ಸಣ್ಣ ವಯಸ್ಸಿನ ಹುಡುಗನನ್ನು ದೇವಸ್ಥಾನಕ್ಕೆ ಕರೆದೊಯ್ದು ಕೈ ಮುಗಿಯುವಂತೆ ಒತ್ತಾಯಿಸಿರುವುದು ಮತ್ತು ಸಾಷ್ಟಾಂಗ ನಮಸ್ಕಾರ ಮಾಡಿಸಿರುವುದು ಕಾಣಬಹುದು.
ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೈದು ಜಾತಿ ನಿಂದನೆ ಮಾಡಿದ್ದಾರೆ. ಅಲ್ಲದೆ ಜೈ ಶ್ರೀರಾಮ್ ಹೇಳುವಂತೆ ಒತ್ತಾಯಿಸಿದ್ದಾರೆ. ಹಾಗಾಗಿ, ನಾಲ್ವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ವಿದ್ಯಾರ್ಥಿ ದರ್ಶನ್ ದೂರಿನಲ್ಲಿ ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಹುಮನಾಬಾದ್ ಪೊಲೀಸರು ಆರೋಪಿಗಳ ವಿರುದ್ದ ಎಸ್‌ಸಿ-ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.