ಮದ್ದೂರು: ಪಟ್ಟಣದ ಕೊಲ್ಲಿ ಸರ್ಕಲ್ ಹಾಗೂ ಐ. ಬಿ ಸರ್ಕಲ್ ಬಳಿ ಅಳವಡಿಸಿದ್ದ ಫ್ಲೆಕ್ಸ್ ಗಳನ್ನು ಪುರಸಭೆ ಮುಖ್ಯಾಧಿಕಾರಿ ಕರಿಬಸವಯ್ಯ ಅವರ ನೇತೃತ್ವದಲ್ಲಿ ಗುರುವಾರ ತೆರವುಗೊಳಿಸಲಾಯಿತು.

ಪಟ್ಟಣದ ಪ್ರವಾಸಿ ಮಂದಿರದ ಬಳಿ ಭಾರಿ ಗಾತ್ರದ ಫ್ಲೆಕ್ಸ್ ಗಳನ್ನು ತೆರವುಗೊಳಿಸಲು ಮುಂದಾದಾಗ ವಿವಿಧ ಪಕ್ಷಗಳ ಮುಖಂಡರು ಫ್ಲೆಕ್ಸ್ ಗಳನ್ನು ತೆರವುಗೊಳಿಸಬೇಡಿ ಎಂದು ಎಂದಾಗ ಅಧಿಕಾರಿಗಳಿಗೆ ತಿಳಿಸಿದ ಸಂದರ್ಭದಲ್ಲಿ ವಿವಿಧ ಪಕ್ಷಗಳ ಮುಖಂಡರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದ ಕೆಲಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ನಂತರ ಫ್ಲೆಕ್ಸ್ ಗಳನ್ನು ತೆರವು ಮಾಡಲು ಅನುವು ಮಾಡಿಕೊಟ್ಟರು.

ಪುರಸಭೆ ಮುಖ್ಯ ಅಧಿಕಾರಿ ಕರಿಬಸವಯ್ಯ ಅವರು ಮಾತನಾಡಿ, ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಭಾರಿ ಗಾತ್ರದ ಫ್ಲೆಕ್ಸ್ ಗಳನ್ನು ಹಾಕಿರುವುದರಿಂದ ಅಪಘಾತಗಳು ಸಂಭವಿಸುತ್ತವೆ ಎಂದು ಪೊಲೀಸರು ಪುರಸಭೆ ತಿಳಿಸಿದ್ದರು. ಆದ್ದರಿಂದ ಹೆದ್ದಾರಿ ಹಾಗೂ ಪುರಸಭೆಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಹಾಕಿರುವ ಎಲ್ಲಾ ರೀತಿಯ ಫ್ಲೆಕ್ಸ್ ಗಳನ್ನು ಸಾರ್ವಜನಿಕರ ಹಿತದೃಷ್ಠಿದಿಂದ ತೆರವುಗೊಳಿಸಲಾಗುತ್ತಿದೆ ಇದಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆಯ ಸಿಬ್ಬಂದಿ, ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಹಾಜರಿದ್ದರು.