ಮಂಡ್ಯ: ರಾತ್ರೋರಾತ್ರಿ ಹನುಮ ಧ್ವಜ ತೆರವಿಗೆ ಅಧಿಕಾರಿಗಳು ಆಗಮಿಸಿದ್ದು, ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಸಿಡಿದೆದ್ದು, ಹನುಮ ಧ್ವಜ ತೆರವು ಮಾಡದಂತೆ ನೂರಾರು ಜನರು ಜಮಾಯಿಸಿದ್ದಾರೆ.
ಮಂಡ್ಯದ ಕೆರಗೋಡು ಗ್ರಾಮದಲ್ಲಿ ಅಯೋಧ್ಯೆ ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆ ನೆನೆಪಾಗಿ ನಿರ್ಮಿಸಲಾಗಿದ್ದ 108 ಅಡಿ ಧ್ವಜಸ್ಥಂಭದಲ್ಲಿ ಕೇಸರಿ ಬಣ್ಣದ ಹನುಮ ಧ್ವಜವನ್ನು ಗ್ರಾಮಸ್ಥರು ಹಾರಿಸಿದ್ದರು.
ಇದಕ್ಕೆ ಕೆಲವರಿಂದ ವಿರೋಧ ಕೇಳಿ ಬಂದ ಹಿನ್ನಲೆ ಧ್ವಜ ಹಾರಾಟ ಬಗ್ಗೆ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿದ್ದು, 22 ಸದಸ್ಯ ಬಲದ ಪೈಕಿ ಹನುಮ ಧ್ವಜ ಹಾರಾಟಕ್ಕೆ 20 ಸದಸ್ಯರು ಬೆಂಬಲಿಸಿದ್ದರು. ಬಹುಮತ ಪಡೆದು ನಡಾವಳಿ ರಚಿಸಿ, ವಿವಾದ ಇತ್ಯರ್ಥ ಮಾಡಲಾಗಿತ್ತು. ಕೆಲದಿನಗಳ ನಂತರ ಧ್ವಜ ಇಳಿಸಲು ಮೇಲಾಧಿಕಾರಿಗಳು ಸೂಚಿಸಿದ್ದು, ಹಿರಿಯ ಅಧಿಕಾರಗಳ ಮೌಖಿಕ ಆದೇಶದಂತೆ ಧ್ವಜಸ್ಥಂಭ ತೆರವು ಮಾಡಲು ಗ್ರಾಮಕ್ಕೆ ಆಗಮಿಸಿದ್ದ ತಾಲ್ಲೂಕು ಪಂಚಾಯತ್ ಇಓ ವೀಣಾ ಅವರಿಗೆ ಪ್ರತಿಭಟನೆ ಬಿಸಿ ತಟ್ಟಿದೆ.
ಸರ್ಕಾರಿ ಜಾಗದಲ್ಲಿ ಧ್ವಜಸ್ಥಂಭ ನಿರ್ಮಾಣ ಕಾರಣ ನೀಡಿ ತೆರವು ಮಾಡಲು ಸೂಚನೆ ನೀಡಲಾಗಿದ್ದು, ಇಓ ಮಾತಿಗೆ ಸಿಟ್ಟಿಗೆದ್ದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದು, ಪ್ರಾಣ ಬಿಟ್ಟರು ಧ್ವಜ ಇಳಿಸಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಕಾಂಗ್ರೆಸ್ ಶಾಸಕ, ಸಚಿವರ ಷಡ್ಯಂತ್ರದಿಂದ ವಿವಾದ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದ್ದಾರೆ. ರಾಮ ಮಂದಿರ ಉದ್ಘಾಟನೆ ಬಳಿಕ ಕಾಂಗ್ರೆಸ್ಸಿಗರಿಗೆ ಕೇಸರಿ ಕಂಡರೆ ಆಗುತ್ತಿಲ್ಲ. ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡು ಹನುಮ ಧ್ವಜ ಇಳಿಸಲು ಮುಂದಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮಂಡ್ಯ ಎಸಿ ಶಿವಮೂರ್ತಿ, ತಹಸಿಲ್ದಾರ್ ಶಿವಕುಮಾರ್ ಬಿರಾದರ್ ನೇತೃತ್ವದಲ್ಲಿ ಮುಂಜಾನೆ 3 ಗಂಟೆಗೆ ಗ್ರಾಮಕ್ಕೆ ಆಗಮಿಸಿ ಧ್ವಜ ತೆರವಿಗೆ ಯತ್ನಿಸಲಾಗಿದೆ ಎಂದು ಆರೋಪ ಮಾಡಲಾಗುತ್ತಿದೆ.
ಪೊಲೀಸರು ಆಗಮನ ಆಗುತ್ತಿದ್ದಂತೆ ಆತಂಕದಿಂದ ಗ್ರಾಮಸ್ಥರು ಜಮಾಯಿಸಿದ್ದು, ಧ್ವಜ ಕಂಬದ ಬಳಿಯೆ ಮಹಿಳೆಯರು ಹಾಗೂ ಯುವಕರು ಕುಳಿತಿದ್ದಾರೆ. ಕೆರೆಗೋಡು ಗ್ರಾಮಸ್ಥರಿಗೆ ಸಾಥ್ ನೀಡಲು ಹಲವೆಡೆಯಿಂದ ಹಿಂದೂಗಳು ಆಗಮಿಸುತ್ತಿದ್ದಾರೆ.
ಪ್ರತಿಭಟನಾಕಾರರ ಮನವೊಲಿಸಲು ಅಧಿಕಾರಿಗಳ ಯತ್ನಿಸುತ್ತಿದ್ದು, ಅಧಿಕಾರಿಗಳ ಜೊತೆ ಗ್ರಾಮಸ್ಥರು ವಾಗ್ವಾದ ನಡೆಸಿದ್ದಾರೆ. ಪೊಲೀಸರ ಭದ್ರತೆ ನಡುವೆ ಎ.ಸಿ ಶಿವಮೂರ್ತಿ ಮಾತುಕತೆ ನಡೆಸಿದ್ದಾರೆ.
ಗ್ರಾಮಸ್ಥರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು, ಧ್ವಜ ಕಂಬದಿಂದ ಗ್ರಾಮಸ್ಥರನ್ನು ದೂರ ಓಡಿಸಿದ್ದಾರೆ.
ಧ್ವಜ ಕಂಬಕ್ಕೆ ಕಟ್ಟಿದ್ದ ಶ್ರೀರಾಮನ ಫ್ಲೆಕ್ಸ್ ತೆರವು ಮಾಡಲಾಗಿದೆ. ಹನುಮ ಧ್ವಜದ ಜೊತೆ ಧ್ವಜ ಕಂಬ ತೆರವಿಗೆ ಜಿಲ್ಲಾಡಳಿತ ಮುಂದಾಗಿದ್ದು, ಗ್ಯಾಸ್ ಕಟರ್ ನಲ್ಲಿ ಧ್ವಜಕಂಬ ತೆರವಿಗೆ ಯತ್ನಿಸಲಾಗಿದೆ.