ಮೈಸೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಮಲ ತಂದೆಗೆ ೩೦ ವರ್ಷಗಳ ಕಠಿಣ ಕಾರಾಗೃಹವಾಸ ಶಿಕ್ಷೆ ವಿಧಿಸಿ ಇಲ್ಲಿನ ಪೋಕ್ಸೊ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕು ಹಲಗವಾಡಿ ಗ್ರಾಮದ ಪರಮಾನಂದ (೩೧) ಶಿಕ್ಷೆಗೆ ಒಳಗಾದ ಅಪರಾಧಿ. ಅಪರಾಧಿಗೆ ಜೈಲುವಾಸದೊಂದಿಗೆ ೧ ಲಕ್ಷ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ತಪ್ಪಿದರೆ ಆರು ತಿಂಗಳ ಸೆರೆವಾಸ ಅನುಭವಿಸಬೇಕು ಎಂದು ಆದೇಶಿಸಿದೆ. ೭೫ ಸಾವಿರವನ್ನು ಬಾಲಕಿಗೆ ಪರಿಹಾರವಾಗಿ ನೀಡಬೇಕು ಹಾಗೂ ೨೫ ಸಾವಿರವನ್ನು ರಾಜ್ಯ ಸರ್ಕಾರಕ್ಕೆ ಕೊಡಬೇಕು ಎಂದು ತಿಳಿಸಲಾಗಿದೆ. ನೊಂದ ಬಾಲಕಿಯು ೫ ಲಕ್ಷ ಪರಿಹಾರಕ್ಕೆ ಅರ್ಹಳು ಎಂದು ನ್ಯಾಯಾಧೀಶೆ ಶೈಮಾ ಕಮ್ರೋಜ್ ಆದೇಶದಲ್ಲಿ ತಿಳಿಸಿದ್ದಾರೆ.
ವಿವರ: ನಗರದ ಬಡಾವಣೆಯೊಂದರ ಮಹಿಳೆಯನ್ನು ೨ನೇ ಮದುವೆಯಾಗಿದ್ದ ವ್ಯಕ್ತಿಯು, ಆಕೆಯ ಮಕ್ಕಳೊಂದಿಗೆ ವಾಸವಾಗಿದ್ದ. ೨೦೨೨ರ ಅ.೨೪ರಂದು ಪತ್ನಿ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ ಸಮಯದಲ್ಲಿ, ಮನೆಯಲ್ಲಿದ್ದ ೧೪ ವರ್ಷ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ರೂಂನಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ಪರಮಾನಂದ, ಆ ವಿಚಾರವನ್ನು ಯಾರಿಗೂ ತಿಳಿಸದಂತೆ ಜೀವ ಬೆದರಿಕೆ ಹಾಕಿದ್ದ. ರಾತ್ರಿ ಲೈಂಗಿಕ ಕಿರುಕುಳ ನೀಡಲು ಮುಂದಾದಾಗ ಬಾಲಕಿಯು ಕಿರುಚಿಕೊಂಡು ಓಡಿ ಹೋಗಿ ದೇವರ ಕೋಣೆಯಲ್ಲಿ ಬಚ್ಚಿಟ್ಟುಕೊಂಡಿದ್ದಳು. ಆತ ಹುಬ್ಬಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿದ್ದಾಗ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವುದು ತನಿಖೆಯಿಂದ ದೃಢಪಟ್ಟಿದೆ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿತ್ತು. ಕೊಲೆ ಬೆದರಿಕೆ ಒಡ್ಡಿದ್ದ ಪ್ರಕರಣದಲ್ಲಿ ನ್ಯಾಯಾಲಯವು ೬ ತಿಂಗಳು ಸಾದಾ ಸಜೆ ಹಾಗೂ ೧ಸಾವಿರ ದಂಡ ವಿಧಿಸಿದೆ.
ಆತ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ, ಮದುವೆ ಮಾಡಿಕೊಳ್ಳಲು ಹಿಂಸೆ ನೀಡುತ್ತಿದ್ದುದ್ದರಿಂದ ಬಾಲಕಿಯು ತಾಯಿ ಮನೆಯಲ್ಲಿಲ್ಲದ ವೇಳೆ ಮನೆ ಬಿಟ್ಟು ಹೋಗಿದ್ದಳು. ಮಹಿಳೆಯು ಮಗಳು ಕಾಣೆಯಾದ ಬಗ್ಗೆ ದೂರು ನೀಡಿದ್ದರು. ತನಿಖೆ ನಡೆಸಿದ ಇನ್‌ಸ್ಪೆಕ್ಟರ್ ಮಹೇಶ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಬಿ. ಜಯಂತಿ ವಾದ ಮಂಡಿಸಿದ್ದರು.