ನಂಜನಗೂಡು: ತಾಲ್ಲೂಕಿನ ಸಂಗಮ ಕ್ಷೇತ್ರದ ಮಹದೇವ ತಾತ ಗದ್ದುಗೆ ಬಳಿ ಕಪಿಲಾ ನದಿಯಲ್ಲಿ ಕಾಲು ಜಾರಿ ಬಿದ್ದು ಶಕುಂತಲಾ (೪೮) ಎಂಬುವರು ಮೃತಪಟ್ಟರು. ಮೈಸೂರಿನ ಕುವೆಂಪು ನಗರದ ನಿವಾಸಿ ನಂಜಪ್ಪಸ್ವಾಮಿ ಅವರ ಪತ್ನಿ ಶಕುಂತಲಾ ಕುಟುಂಬದೊಂದಿಗೆ ಸಂಗಮ ಕ್ಷೇತ್ರಕ್ಕೆ ದೇವರ ದರ್ಶನಕ್ಕೆಂದು ಬಂದಿದ್ದರು.
ನದಿಗೆ ಇಳಿದು ಕಾಲು ತೊಳೆಯುತ್ತಿದ್ದ ವೇಳೆ ಕಾಲು ಜಾರಿ ನದಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದಾರೆ. ಕೂಡಲೇ ನದಿಗೆ ಇಳಿದ ನಂಜಪ್ಪಸ್ವಾಮಿ ಪತ್ನಿಯನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.