ಪಾಂಡವಪುರ : ರೈತ ಹೋರಾಟಗಾರ ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರ ೭೫ನೇ ವರ್ಷದ ಜನ್ಮದಿನೋತ್ಸವ ಸಂಭ್ರಮದಲ್ಲಿ ರೈತಪರ ದ್ವನಿ ಎತ್ತಿರುವ ಕಾಟೇರ ಚಲನಚಿತ್ರ ತಂಡವನ್ನು ಪಟ್ಟಣದಲ್ಲಿ ಅದ್ದೂರಿಯಾಗಿ ಅಭಿನಂದಿಸಲಾಯಿತು. ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ನಿರ್ಮಿಸಿದ್ದ ಬೃಹತ್ ವೇದಿಕೆಯಲ್ಲಿ ನಡೆದ ಅದ್ದೂರಿ ಕಾರ್ಯಕ್ರಮ ಜನರ ಗಮನ ಸೆಳೆಯಿತು. ರೈತ ನಾಯಕರಾದ ಕೆ.ಎಸ್.ಪುಟ್ಟಣ್ಣಯ್ಯ, ಪ್ರೊ.ನಂಜುಂಡಸ್ವಾಮಿ, ಸುಂದರೇಶ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ರೈತಮುಖಂಡರು ಸಮಾರಂಭವನ್ನು ಉದ್ಘಾಟಿಸಿದರು.
ಚಿತ್ರದ ನಾಯಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಚಿತ್ರ ನಿರ್ದೇಶಕ ತರುಣ್ ಕಿಶೋರ್, ಸಂಗೀತ ನಿರ್ದೇಶಕ ಹರಿಕೃಷ್ಣ ಸೇರಿದಂತೆ ಚಿತ್ರದ ತಂಡದ ಕಲಾವಿದರು ಮತ್ತು ತಾಂತ್ರಿಕ ವರ್ಗದವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ನಟ ದರ್ಶನ್ ಮಾತನಾಡಿ, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಒಬ್ಬ ಸರಳ, ಸಜ್ಜನಿಕೆಯ, ಪ್ರಾಮಾಣಿಕ ಶಾಸಕರಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಕುರಿತು ಸಾಕಷ್ಟು ಕನಸು ಕಂಡಿದ್ದಾರೆ.
ಅವರು ಮಾತುಗಾರರಲ್ಲ, ಕೆಲಸಗಾರರು, ಬೇರೆ ರಾಜಕಾರಣಿಯ ಹಾಗೆ ಸುಳ್ಳು, ಪಳ್ಳು ಹೇಳುವುದಿಲ್ಲ, ಬಣ್ಣ ಬಣ್ಣದ ಮಾತುಗಳನ್ನು ಆಡುವುದಿಲ್ಲ. ಆದರೇ, ಅವರ ಮನಸ್ಸಿನಲ್ಲಿ ಪ್ರಾಮಾಣಿಕತೆ ಇದೆ, ನಿಷ್ಕಲ್ಮಶ ಪ್ರೀತಿ ಇದೆ, ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ಗುರಿ ಇದೆ, ಚುನಾವಣೆಗಾಗಿ ಅವರು ಮಾಡಿದ ಸಾಲವನ್ನು ಅಮೆರಿಕಾದಲ್ಲಿನ ಅವರ ಕಂಪನಿ ಮಾರಿ ತೀರಿಸಿದ್ದಾರೆ. ಅವರನ್ನು ಉಳಿಸಿಕೊಳ್ಳುವುದು ನಿಮ್ಮ ಕರ್ತವ್ಯ ಎಂದು ಹೇಳಿದರು. ಅವರಿಗೂ ಮನೆ, ಮಠ, ಸಂಸಾರ ಇದೆ, ಅಮೆರಿಕಾಕ್ಕೆ ಹೋದಾಕ್ಷಣ ಅವರ ಬಗ್ಗೆ ಸಲ್ಲದ ಮಾತುಗಳನ್ನು ಆಡಬಾರದು, ಟೀಕೆ ಟಿಪ್ಪಣಿ ಮಾಡಬಾರದು. ಇಂತಹ ಪ್ರಾಮಾಣಿಕ ರಾಜಕಾರಣಿ ಸಿಗುವುದು ಕಷ್ಟ, ರೈತರ ಅಭಿವೃದ್ಧಿಗಾಗಿ ಮುಂದೆಯೂ ದರ್ಶನ್ ಪುಟ್ಟಣ್ಣಯ್ಯ ಅವರೇ ಶಾಸಕರಾಗಬೇಕು ಎಂದು ಕಿವಿ ಮಾತು ಹೇಳಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಬನ್ನಾರಿ ಅಮ್ಮನ್ ದೇವಾಲಯದ ಮುಂಭಾಗದಿಂದ ನಟ ದರ್ಶನ್ ಹಾಗೂ ಕಾಟೇರ ಚಿತ್ರ ತಂಡವನ್ನು ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ವಿವಿಧ ಕಲಾತಂಡಗಳು, ಡೊಳ್ಳು ಕುಣಿತ, ಜಾನಪದ ನೃತ್ಯಗಳು, ವೀರಗಾಸೆ, ಪಟದ ಕುಣಿತ ಮೆರವಣಿಗೆಯಲ್ಲಿ ಸಾಗಿದವು, ನೂರೋಂದು ಕಳಶ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ನಟ ದರ್ಶನ್ ಅವರನ್ನು ಸ್ವಾಗತಿಸಿ ಕರೆತಂದರು. ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.
ವೇದಿಕೆಯಲ್ಲಿ ರೈತಸಂಘದ ಹೋರಾಟಗಳ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು. ಅಲ್ಲದೇ, ದನ್ವೀರ್ ಅಭಿನಯದ ವಾಮನ, ಚಿಕ್ಕಣ್ಣ ಅಭಿನಯದ ಉಪಾಧ್ಯಕ್ಷ ಮತ್ತು ವಿನೋದ್ ಪ್ರಭಾಕರ್ ಅಭಿನಯದ ಮಾದೇವ ಚಿತ್ರಗಳ ಟೀಸರ್ ಪ್ರದರ್ಶನಗೊಂಡಿತು. ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಕಾಟೇರ ಚಲನಚಿತ್ರ ಜನ ಪ್ರತಿನಿಧಿಗಳಿಗೊಂದು ಎಚ್ಚರಿಕೆ ನೀಡುವ ಚಿತ್ರವಾಗಿದೆ. ರೈತರ ಕಷ್ಟ ಸುಖಗಳು, ಹೋರಾಟಗಳು, ನಮ್ಮ ಸರ್ಕಾರಗಳು, ವ್ಯವಸ್ಥೆ ರೈತರೊಂದಿಗೆ ನಡೆದುಕೊಳ್ಳುವ ರೀತಿಯನ್ನು ಸಮರ್ಥವಾಗಿ ತೋರಿಸಲಾಗಿದೆ. ಇಂತಹ ಚಿತ್ರಗಳು ಹೆಚ್ಚು ಬರಬೇಕು. ನನಗಂತೂ ಈ ಚಿತ್ರ ಒಂದು ಪಾಠವಾಗಿದೆ ಎಂದು ಚಿತ್ರವನ್ನು ಶ್ಲಾಘಿಸಿದರು.
ಬಳಿಕ ಅವರಿಗೆ ಭೂಮಿಪುತ್ರ ಬಿರುದು ನೀಡಿ ಗೌರವಿಸಲಾಯಿತು. ಅಭಿಮಾನಿಗಳು ನಟ ದರ್ಶನ್‌ಗೆ ಟಗರು ಕೊಡುಗೆಯಾಗಿ ನೀಡಿದರೆ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಅಭಿಮಾನಿಯೊಬ್ಬರು ಹೋರಿಗರುವನ್ನು ಕೊಡುಗೆಯಾಗಿ ನೀಡಿದ್ದು ಗಮನ ಸೆಳೆಯಿತು. ಅಲ್ಲದೇ ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳಿಂದ ತಂದ ಮಣ್ಣು, ಕಬ್ಬಿನ ಜಲ್ಲೆ, ಭತ್ತ ಮತ್ತು ರಾಗಿ ಪೈರು ನೀಡಿ ಗೌರವಿಸಲಾಯಿತು.
ನಟ ದರ್ಶನ್ ಅವರಿಗೆ ರೇಷ್ಮೇ ಹಾರವನ್ನು ಹಾಕಿ ಸನ್ಮಾನಿಸಲು ಶಾಸಕ ದರ್ಶನ್ ಪುಟ್ಟಣ್ಣಯ್ಯ ಮುಂದಾದಾಗ ನಟ ದರ್ಶನ್ ತಾವು ಹಾರವನ್ನು ಹಾಕಿಸಿಕೊಳ್ಳದೆ ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರ ಪತ್ನಿ ಸುನೀತ ಪುಟ್ಟಣ್ಣಯ್ಯ ಅವರಿಗೆ ಹಾಕಿ ತಮ್ಮ ರೈತಪರ ಅಭಿಮಾನ ಮೆರೆದುದು ವಿಶೇಷವಾಗಿತ್ತು. ರೈತಮುಖಂಡರಾದ ಚಾಮರಸ ಮಾಲಿ ಪಾಟೀಲ್, ಬಡಗಲಪುರ ನಾಗೇಂದ್ರ, ಸುನೀತ ಪುಟ್ಟಣ್ಣಯ್ಯ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ನಟರಾದ ಚಿಕ್ಕಣ್ಣ, ವಿನೋದ್ ಪ್ರಭಾಕರ್, ಧನ್ವೀರ್, ನಟಿ ಆರಾಧನಾ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.